ಗದಗ: ಜಿಲ್ಲೆಯಲ್ಲಿ ಜಡಿ ಮಳೆ ಹಿನ್ನೆಲೆ ಗುಂಡಿ ತಪ್ಪಿಸುವ ಭರದಲ್ಲಿ ಲಾರಿ ಪಲ್ಟಿಯಾಗಿ ಚಾಲಕ ಸಾವನ್ನಪ್ಪಿದ ದುರ್ಘಟನೆ ನರಗುಂದ ತಾಲೂಕಿನ ಯಾವಗಲ್ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಗ್ರಾಮದ ರಸ್ತೆ ಸಂಪೂರ್ಣ ಹಾಳಾಗಿದೆ. ಸಂಚಾರಕ್ಕೆ ಸಾಕಷ್ಟು ತೊಂದರಯನ್ನುಂಟು ಮಾಡಿದೆ. ತಡರಾತ್ರಿ ಹಾಸುಗಲ್ಲು (ಪಾಟಿಗಲ್ಲು) ಹೊತ್ತು ಸಾಗುತ್ತಿದ್ದ ಲಾರಿ ರಸ್ತೆಯಲ್ಲಿನ ಗುಂಡಿ ತಪ್ಪಿಸಲು ಹೋದಾಗ ಪಲ್ಟಿಯಾಗಿದೆ. ಪರಿಣಾಮ ಲಾರಿಯಡಿಯಲ್ಲಿ ಸಿಲುಕಿದ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.