ರಸ್ತೆ ಮಧ್ಯೆ ನಿಂತು ₹50,000ಕ್ಕೆ ಮಗುವನ್ನು ಮಾರುವುದಾಗಿ ಕೂಗಿದ ಪಾಕ್ ಪೊಲೀಸ್; ಹೃದಯ ಕಲುಕುವ ಈ ಘಟನೆ ಹಿಂದಿರುವ ಕತೆಯೇನು? | Pakistan cop father trying to sell his own children for Rs 50000 Viral Video


ರಸ್ತೆ ಮಧ್ಯೆ ನಿಂತು ₹50,000ಕ್ಕೆ ಮಗುವನ್ನು ಮಾರುವುದಾಗಿ ಕೂಗಿದ ಪಾಕ್ ಪೊಲೀಸ್; ಹೃದಯ ಕಲುಕುವ ಈ ಘಟನೆ ಹಿಂದಿರುವ ಕತೆಯೇನು?

ಮಗುವನ್ನು ಮಾರಾಟ ಮಾಡಲು ಪ್ರಯತ್ನಿಸಿದ ಪೊಲೀಸ್

ಲಾಹೋರ್: ಪೊಲೀಸ್ ವೃತ್ತಿಯಲ್ಲಿರುವ ಅಪ್ಪಯೊಬ್ಬ ತನ್ನ ಮಕ್ಕಳನ್ನು 50,000 ರೂ.ಗೆ ಮಾರಾಟ ಮಾಡಲು ಯತ್ನಿಸುತ್ತಿರುವುದನ್ನು ತೋರಿಸುವ ಕರುಳು ಹಿಂಡುವ ವಿಡಿಯೊ ಟ್ವಿಟರ್‌ನಲ್ಲಿ ಕಾಣಿಸಿಕೊಂಡಿದೆ. ಪಾಕಿಸ್ತಾನದ (Pakistan)  ಸಿಂಧ್ ಪ್ರಾಂತ್ಯದ (Sindh province ) ಘೋಟ್ಕಿ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ. ವಿಡಿಯೊದಲ್ಲಿ ಕಾರಾಗೃಹ ಇಲಾಖೆಯ ಪೊಲೀಸ್ ನಿಸಾರ್ ಲಶಾರಿ (Nisar Lashari) ಅವರು ರಸ್ತೆಯ ಮಧ್ಯದಲ್ಲಿ ಕೂಗುತ್ತಿದ್ದು ಅವರ ಇಬ್ಬರು ಮಕ್ಕಳು ಅಲ್ಲಿ ನಡೆಯುತ್ತಿರುವು ಏನು ಎಂಬುದು ತಿಳಿಯದೆ ನಿಂತಿದ್ದಾರೆ. ಆ ನಂತರ ಕಿರಿಯ ಮಗನನ್ನು ಎತ್ತಿಕೊಂಡ ಲಶಾರಿ ತನ್ನ ಮಕ್ಕಳನ್ನು 50,000 ರೂ.ಗೆ ಮಾರುತ್ತಿರುವುದಾಗಿ ಕೂಗುತ್ತಿರುವುದು ವಿಡಿಯೊದಲ್ಲಿದೆ.  ವೈಸ್ ಮಾಧ್ಯಮ ಪ್ರಕಾರ ಲಶಾರಿಗೆ ತನ್ನ ಮಗನ ವೈದ್ಯಕೀಯ ಚಿಕಿತ್ಸೆಗಾಗಿ ರಜೆಯ ಅಗತ್ಯವಿತ್ತು. ಆದಾಗ್ಯೂ, ಅವನ ಬಾಸ್ ಅವನಿಗೆ ರಜೆ ನೀಡುವುದಕ್ಕೆ ಬದಲಾಗಿ ಲಂಚವನ್ನು ಕೇಳಿದನು. ಮೇಲಧಿಕಾರಿಗೆ ಲಂಚ ಕೊಡಲು ಸಾಧ್ಯವಾಗದಿದ್ದಾಗ ಅವರ ರಜೆಯನ್ನು ರದ್ದುಪಡಿಸಿ ನಗರದಿಂದ 120 ಕಿ.ಮೀ ದೂರದಲ್ಲಿರುವ ಲರ್ಕಾನಾಗೆ ವರ್ಗಾವಣೆ ಮಾಡಲಾಗಿತ್ತು.  “ಲಂಚ ಕೊಡದಿದ್ದಕ್ಕೆ ಅವರು ನನಗೆ ಈ ಶಿಕ್ಷೆಯನ್ನು ಏಕೆ ನೀಡಿದರು? ನಾನು ತುಂಬಾ ಬಡವನಾಗಿದ್ದು, ಕಾರಾಗೃಹಗಳ ಇನ್ಸ್‌ಪೆಕ್ಟರ್ ಜನರಲ್‌ಗೆ ದೂರು ನೀಡಲು ಕರಾಚಿಗೆ ಹೋಗಲೂ ಸಾಧ್ಯವಾಗಲಿಲ್ಲ. ಇಲ್ಲಿನ ಜನರು ತುಂಬಾ ಶಕ್ತಿಶಾಲಿಗಳು ಮತ್ತು ಸಾಮಾನ್ಯವಾಗಿ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ, ”ಎಂದು ಅವರು ವೈಸ್ ವರ್ಲ್ಡ್ ನ್ಯೂಸ್‌ಗೆ ತಿಳಿಸಿದರು.

“ನಾನು ಲಂಚ ಕೊಡಬೇಕೇ ಅಥವಾ ನನ್ನ ಮಗುವಿನ ಆಪರೇಷನ್​​ಗೆ ಪಾವತಿಸಬೇಕೇ? ನಾನು ಲರ್ಕಾನಾದಲ್ಲಿ ಕೆಲಸ ಮಾಡಬೇಕಿತ್ತೇ ಅಥವಾ ನನ್ನ ಮಗುವನ್ನು ಚಿಕಿತ್ಸೆಗಾಗಿ ಕರೆದುಕೊಂಡು ಹೋಗಬೇಕಿತ್ತೇ?” ಲಶಾರಿ ಕೇಳಿದ್ದಾರೆ.

ಏತನ್ಮಧ್ಯೆ, ವಿಡಿಯೊ ವೈರಲ್ ಆಗಿದ್ದು, ತಂದೆಯ ಅಸಹಾಯಕತೆಯನ್ನು ಕಂಡು ನೆಟ್ಟಿಗರು ಎದೆಗುಂದಿದ್ದಾರೆ.ತುಂಬಾ ದುಃಖವಾಗಿದೆ. ಅವರಿಗೆ ವಿಷಯಗಳನ್ನು ನಿರ್ವಹಿಸುವುದು ಕಷ್ಟಕರವಾಗಿತ್ತು ಆದರೆ ಅವರು ಅಸಹಾಯಕತೆಯಲ್ಲಿ ಏನು ಮಾಡುತ್ತಿದ್ದಾರೆ ಎಂಬುದು ಮಕ್ಕಳ ಮೇಲೆ ಶಾಶ್ವತವಾದ ಮಾನಸಿಕ ಪರಿಣಾಮಗಳನ್ನು ಉಂಟುಮಾಡಬಹುದು. ಇದು ಒಳ್ಳೆಯದಲ್ಲ” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.

ವಿಡಿಯೊ ವೈರಲ್ ಆಗುತ್ತಿದ್ದಂತೆ, ಲಶಾರಿಯ ಅವಸ್ಥೆಯು ಸಿಂಧ್‌ನ ಮುಖ್ಯಮಂತ್ರಿ ಮುರಾದ್ ಅಲಿ ಶಾ ಅವರ ಗಮನ ಸೆಳೆಯಿತು. ಲಶಾರಿಗೆ ಘೋಟ್ಕಿಯ ಜೈಲಿನಲ್ಲಿ ತನ್ನ ಕೆಲಸದಲ್ಲಿ ಉಳಿಯಲು ಸಾಧ್ಯವಾಯಿತು ಮತ್ತು 14 ದಿನಗಳ ರಜೆಯನ್ನು ನೀಡಲಾಯಿತು, ಆದ್ದರಿಂದ ಅವರು ಚಿಕಿತ್ಸೆಗಾಗಿ ತಮ್ಮ ಮಗುವಿನೊಂದಿಗೆ ಇರಲು ಸಾಧ್ಯವಾಯಿತು ಎಂದು ವೈಸ್ ವರದಿ ಮಾಡಿದೆ.

ಇದನ್ನೂ ಓದಿ: ಸಿಬಿಐ, ಇಡಿ ನಿರ್ದೇಶಕರ ಅಧಿಕಾರಾವಧಿಯನ್ನು ವಿಸ್ತರಿಸುವ ಸರ್ಕಾರದ ಸುಗ್ರೀವಾಜ್ಞೆಗಳ ವಿರುದ್ಧ ಸುಪ್ರೀಂ ಮೊರೆ ಹೋದ ಮಹುವಾ ಮೊಯಿತ್ರಾ

TV9 Kannada


Leave a Reply

Your email address will not be published. Required fields are marked *