‘ರಾಜಕೀಯ ಮಾಡುವ ಸಮಯವಲ್ಲ’ ಸ್ವಂತ ದುಡ್ಡಿನಿಂದ​ ಆಕ್ಸಿಜನ್​ ನೀಡಲು ಸುಮಲತಾ ಅಂಬರೀಶ್​ ನಿರ್ಧಾರ

‘ರಾಜಕೀಯ ಮಾಡುವ ಸಮಯವಲ್ಲ’ ಸ್ವಂತ ದುಡ್ಡಿನಿಂದ​ ಆಕ್ಸಿಜನ್​ ನೀಡಲು ಸುಮಲತಾ ಅಂಬರೀಶ್​ ನಿರ್ಧಾರ

ನಿನ್ನೆಯಷ್ಟೆ ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್​ ಪೂರೈಕೆಯಾಗದ ಕಾರಣ 24 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಸದ್ಯ ಈ ಆಕ್ಸಿಜನ್​ ದುರಂತದ ಬಗ್ಗೆ ಅರಿತಿರುವ ಸಂಸದೆ ಸುಮಲತಾ ಅಂಬರೀಶ್​, ತಮ್ಮ ಸ್ವಂತ ದುಡ್ಡಿನಲ್ಲಿ ಪ್ರತಿ ದಿನ ಎರಡು ಸಾವಿರ ಲೀಟರ್​ ಆಮ್ಲಜನಕ ಪೂರೈಸಲು ನಿರ್ಧರಿಸಿದ್ದಾರೆ. ಮಂಡ್ಯದಲ್ಲಿ ಪ್ರತಿ ನಿತ್ಯ ಮೂರು ಸಾವಿರ ಲೀಟರ್​​ ಆಕ್ಸಿಜನ್​ ಕೊರತೆಯಾಗ್ತಿದ್ದು, ತಮ್ಮ ಕೈಲಾಗುವ ಸೇವೆ ಮಾಡಲು ಸುಮಲತಾ ಇದೀಗ ಮುಂದೆ ಬಂದಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಸಂಸದೆ ಸುಮಲತಾ ಅಂಬರೀಶ್​, ‘ಮಂಡ್ಯ ಜಿಲ್ಲೆಯ ಎಂ.ಪಿ ಆಗಿ ಈ ಕೊರೊನಾ ಸಂಕಷ್ಟದ ಕಾಲದಲ್ಲಿ ನನ್ನ ಹೋರಾಟ ಜಾರಿಯಲ್ಲಿದೆ. ನನ್ನ ಸ್ವ-ಪ್ರಯತ್ನದಿಂದ ತಡೆರಹಿತವಾಗಿ ಸೇವೆ ಮುಂದುವರೆಯುತ್ತದೆ. ಮಂಡ್ಯ ಜಿಲ್ಲೆಯ ಈಗಿನ ಹಾಗೂ ಮುಂದಿನ ಅಗತ್ಯತೆಗಳು ಸದ್ಯ ನನ್ನ ಆದ್ಯತೆಯಾಗಿದೆ. ಇದು ರಾಜಕೀಯ ಮಾಡುವ ಸಮಯವಲ್ಲ. ಎಲ್ಲರೂ ಒಟ್ಟಾಗಿ ಕೈಜೋಡಿಸಿದರೆ ಇದನ್ನ ಗೆಲ್ಲಬಹುದು’ ಅಂದಿದ್ದಾರೆ. ಜೊತೆಗೆ ಎಲ್ಲರಲ್ಲೂ ಮಾಸ್ಕ್​ ಬಳಸಿ, ಸ್ಯಾನಿಟೈಸರ್​ ಯೂಸ್​ ಮಾಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದಾರೆ.

ಇನ್ನು ಮಂಡ್ಯ ಜಿಲ್ಲೆಗೆ ಪ್ರತಿ ನಿತ್ಯ 3000 ಲೀಟರ್​ ಆಕ್ಸಿಜನ್​ ಅಗತ್ಯವಿದ್ದು, ಸುಮಲತಾ ಅಂಬರೀಶ್​ ತಮ್ಮ ಸ್ವಂತ ದುಡ್ಡಿನಲ್ಲಿ ಯಾಕಾಗಿ ಆಮ್ಲಜನಕ ಪೂರೈಸುತ್ತಿದ್ದಾರೆ ಅನ್ನೋ ಪ್ರಶ್ನೆಗೂ ಉತ್ತರಿಸಿದ್ದಾರೆ. ಅದಲ್ಲದೇ, ಮಂಡ್ಯ ಜಿಲ್ಲೆಯ ಪರವಾಗಿ ಈ ಬಗ್ಗೆ ತಮ್ಮ ಮುಂದಿನ ಕ್ರಮಗಳ ಬಗ್ಗೆಯೂ ಟ್ವೀಟ್​ ಮಾಡಿ ತಿಳಿಸಿದ್ದಾರೆ.

‘ಜಿಲ್ಲಾಧಿಕಾರಿಗಳು ಮತ್ತು DHO ಅವರು ಮಂಡ್ಯ ಜಿಲ್ಲೆಗೆ ಪ್ರತಿದಿನ 3000 ಲೀಟರ್​ ಆಕ್ಸಿಜನ್​ ಕೊರತೆ ಎದುರಾಗಿದೆ ಎಂದು ನನ್ನ ಗಮನಕ್ಕೆ ತಂದರು. ಸದ್ಯದ ಪರಿಸ್ಥಿತಿಯಲ್ಲಿ ಎಂ.ಪಿ ಫಂಡ್​ ಇಲ್ಲದ ಕಾರಣ ಹಾಗೂ ಅನುದಾನದ ಮೂಲಗಳಿಂದ ದುಡ್ಡು ಒದಗಿ ಬರುವುದು ತಡವಾಗಬಹುದಾದ ಕಾರಣ, ಸದ್ಯಕ್ಕೆ ತುರ್ತಿನ ಪರಿಸ್ಥಿತಿಯನ್ನು ಎದುರಿಸಲು ನನ್ನ ಸ್ವಂತ ದುಡ್ಡಿನಿಂದ ಪ್ರತಿದಿನ 2000 ಲೀಟರ್​ ಆಕ್ಸಿಜನ್​ ವ್ಯವಸ್ಥೆ ಮಾಡಲು ನಿರ್ಧರಿಸಿದ್ದೇನೆ. ಆಕ್ಸಿಜನ್​ ಕೊರತೆಯಿಂದ ಯಾವುದೇ ಸಾವು-ನೋವು ಜಿಲ್ಲೆಯಲ್ಲಿ ಸಂಭವಿಸದಂತೆ ಅಧಿಕಾರಿಗಳಿಗೆ ಎಚ್ಚರ ವಹಿಸಲು ಸೂಚಿಸಿದ್ದೇನೆ.

ಆಕ್ಸಿಜನ್​ ಸಿಲಿಂಡರ್​ಗಳನ್ನು ತುಂಬಿಸುವುದಕ್ಕೆ ಹಾಸನ, ಮೈಸೂರು ಹಾಗೂ ರಾಮನಗರಗಳಿಗೆ ಹೋಗಬೇಕಾದ ಪರಿಸ್ಥಿತಿ ಇದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಈ ಪರಿಸ್ಥಿತಿಯನ್ನು ಹೀಗೇ ಮುಂದುವರೆಯಲು ಬಿಡಲಾಗುವುದಿಲ್ಲ. ಮಂಡ್ಯಕ್ಕೆ ತನ್ನದೇ ಆಕ್ಸಿಜನ್​ ಘಟಕ ಬೇಕು. ಇದು ಅತ್ಯಂತ ಶೀಘ್ರದಲ್ಲಿ ಸ್ಥಾಪನೆ ಆಗಬೇಕು ಎಂದು ನಿರ್ದೇಶನ ಕೊಟ್ಟಿದ್ದೇನೆ. ಜಿಲ್ಲಾಧಿಕಾರಿಗಳಿಗೆ ಆಕ್ಸಿಜನ್​ ಘಟಕ ಸ್ಥಾಪನೆಗೆ ಕೊಡಬೇಕಾಗಿರುವ ಸೌಲಭ್ಯಗಳು (ಲಿಕ್ವಿಡ್​ ಟ್ಯಾಂಕ್​ ಮುಂತಾದವು) ಮತ್ತು ಅನುಮತಿಗಳನ್ನೂ ಅತಿ ಶೀಘ್ರದಲ್ಲಿ ಜಾರಿ ಮಾಡುವಂತೆ ತಿಳಿಸಿದ್ದೇನೆ. ಕೋವಿಡ್​ ಮೂರನೇ ಅಲೆ ಬರುವ ಮುಂಚೆ 13000 ಲೀಟರ್​ ಆಕ್ಸಿಜನ್​ ಸಾಮರ್ಥ್ಯ ಪಡೆಯುವತ್ತ ಜಿಲ್ಲೆ ಹೆಜ್ಜೆ ಹಾಕಿದೆ.

ಸುಮಲತಾ ಅಂಬರೀಶ್​, ಮಂಡ್ಯ ಸಂಸದೆ

ಈಗಾಗಲೇ ಮಂಡ್ಯದಲ್ಲಿ 33,910 ಸಕ್ರಿಯ ಕೊರೊನಾ ಪ್ರಕರಣಗಳಿದ್ದು, ಈ ಬಗ್ಗೆ ಸಂಸದೆ ಸುಮಲತಾ ಅಂಬರೀಶ್​ ಯಾವುದೇ ಥರದ ಕ್ರಮಗಳನ್ನ ತೆಗೆದುಕೊಳ್ತಿಲ್ಲ ಅಂತ ಎರಡು ದಿನಗಳ ಹಿಂದೆ ಸೋಶಿಯಲ್​ ಮೀಡಿಯಾದಲ್ಲಿ ಬಹಳ ಚರ್ಚೆಯಾಗಿತ್ತು. ಸುಮಲತಾ ಅಂಬರೀಶ್​ ತಮ್ಮ ಜನರನ್ನ ಮರೆತಿದ್ದಾರೆ, ಕೊರೊನಾ ಎರಡನೇ ಅಲೆ ಬಂದಾಗಿನಿಂದ ಮಂಡ್ಯದತ್ತ ಮುಖ ಮಾಡಿಲ್ಲ ಅನ್ನೋ ಮಾತುಗಳು ಕೇಳಿ ಬಂದಿದ್ವಿ. ಸದ್ಯ ಇದೆಲ್ಲದಕ್ಕೂ ಸಂಸದೆ ಸುಮಲತಾ ಖುದ್ದು ಟ್ವೀಟ್​ ಮಾಡಿ ಉತ್ತರಿಸಿದ್ದಾರೆ. ತಮ್ಮ ಕರ್ತವ್ಯಕ್ಕೆ ಬದ್ಧರಾಗಿ ಮಂಡ್ಯ ಜನರ ಸಹಾಯಕ್ಕೆ ನಿಂತಿದ್ದಾರೆ.

The post ‘ರಾಜಕೀಯ ಮಾಡುವ ಸಮಯವಲ್ಲ’ ಸ್ವಂತ ದುಡ್ಡಿನಿಂದ​ ಆಕ್ಸಿಜನ್​ ನೀಡಲು ಸುಮಲತಾ ಅಂಬರೀಶ್​ ನಿರ್ಧಾರ appeared first on News First Kannada.

Source: newsfirstlive.com

Source link