ಋಷಿ ಮೂಲ, ನದಿ ಮೂಲ, ಹೆಣ್ಣಿನ ಮೂಲ ಹುಡುಕಬಾರ್ದು ಅಂತಾ ದೊಡ್ಡವರು ಹೇಳ್ತಾರೆ. ಅಂದ್ರೆ ಓಮಿಕ್ರಾನ್ ಸೋಂಕಿತನ ಮೂಲ ಹುಡುಕಲಿಲ್ಲ ಅಂದ್ರೆ ಅವಾಂತರ ಆಗೋದು ನಿಶ್ಚಿತ. ದುರಾದೃಷ್ಟವಶಾತ್ ಬೆಂಗಳೂರಿನಲ್ಲಿ ಪತ್ತೆಯಾಗಿರೋ ಒಮಿಕ್ರಾನ್ ಸೋಂಕಿತನ ಮೂಲ ಹುಡುಕೋಕೆ ಆಗ್ತಿಲ್ಲ. ಆ ವ್ಯಕ್ತಿಗೆ ಒಮಿಕ್ರಾನ್ ಹೇಗೆ ಬಂತು? ಎಲ್ಲಿಂದ ಬಂತು? ಯಾರಿಂದ ಬಂತು? ಅನ್ನೋದ್ರ ಮೂಲ ಹುಡುಕಲು ಇಡೀ ಆರೋಗ್ಯ ಇಲಾಖೆ ಹರಸಾಹಸಪಡ್ತಿದೆ.
ದೇಶದಲ್ಲಿ ಮೊದಲ ಬಾರಿಗೆ ಹೊಸ ರೂಪಾಂತರಿ ತಳಿ ಪತ್ತೆಯಾಗಿದ್ದು ಕರ್ನಾಟಕದಲ್ಲಿ, ಆದ್ರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ. ಇಲ್ಲಿಂದ ಶುರುವಾದ ಒಮಿಕ್ರಾನ್ ಎರಡಂಕಿಯ ಓಟ ಈಗ ಗುಜರಾತ್, ಮಹಾರಾಷ್ಟ್ರ, ದೆಹಲಿಯಲ್ಲಿ ಸಹ ತನ್ನ ಕಬಂದ ಬಾಹುವನ್ನು ಚಾಚುವ ಮೂಲಕ ತನ್ನ ನಾಗಲೋಟವನ್ನು ಮುಂದುವರೆಸಿದೆ.
ಮೊದಲು ಒಮಿಕ್ರಾನ್ ಕೇಸ್ ಪತ್ತೆಯಾಗಿದ್ದು ರಾಜಧಾನಿ ಬೆಂಗಳೂರಿನಲ್ಲಿ. ಅದು ಇಬ್ಬರಿಗೆ ಸೋಂಕು ದೃಢಪಟ್ಟಿತ್ತು. ಆ ಎರಡು ಸೋಂಕಿತರಲ್ಲಿ ಒಬ್ಬ ಸೋಂಕಿತ ದಕ್ಷಿಣ ಆಫ್ರಿಕಾದಿಂದ ಬಂದ ಪರಿಣಾಮ ಸೋಂಕು ಪತ್ತೆಯಾಗಿತ್ತು.ಆದ್ರೆ ಇನ್ನೊಬ್ಬ ಸೋಂಕಿತ ಯಾವುದೇ ವಿದೇಶ ಪ್ರಯಾಣ ಮಾಡಿಲ್ಲ ಆದ್ರೂ ಸಹ ಒಮಿಕ್ರಾನ್ ದೃಢಪಟ್ಟಿದೆ. ಈ ಒಂದು ವೈದ್ಯನಿಗೆ ಸೋಂಕು ಪತ್ತೆಯಾಗಿದ್ದಾದ್ರೂ ಹೇಗೆ? ಎಲ್ಲಿಂದ ವೈದ್ಯನಿಗೆ ಸೋಂಕು ಬಂತು? ಯಾರಿಂದ ಒಮಿಕ್ರಾನ್ ಸೋಂಕು ತಗುಲಿದೆ ಎಂಬ ಪ್ರಶ್ನೆಗಳಿಗೆ ಇದುವರೆಗೂ ಉತ್ತರ ಸಿಕ್ಕಿಲ್ಲ. ಜೊತೆಗೆ ಆರೋಗ್ಯ ಇಲಾಖೆಗೆ ಈ ಕೇಸ್ ಯಕ್ಷ ಪ್ರಶ್ನೆಯಾಗಿ ಉಳಿದಿದೆ.
ದೇಶದಲ್ಲಿ ಪತ್ತೆಯಾಗಿರುವ 5 ಒಮಿಕ್ರಾನ್ ಕೇಸ್ಗಳ ಮೂಲ ಯಾವುದು? ಯಾವ ಕಾರಣಕ್ಕೆ ಈ ಐದು ಮಂದಿಗೆ ಸೋಂಕು ದೃಢಪಟ್ಟಿದೆ? 5 ಸೋಂಕಿತರ ಟ್ರಾವೆಲ್ ಹಿಸ್ಟರಿ ಏನು? ಎಲ್ಲಿಂದ ಎಲ್ಲಿಗೆ ಒಮಿಕ್ರಾನ್ ಲಿಂಕ್ ಇದೆ ಅನ್ನೋದನ್ನು ನೋಡೋದಾದ್ರೆ.
ಕೇಸ್ ನಂಬರ್ ಒಂದು, ಬೆಂಗಳೂರು ನಿವಾಸಿಯಾಗಿರುವ 66 ವರ್ಷದ ವ್ಯಕ್ತಿ ದಕ್ಷಿಣ ಆಫ್ರಿಕಾದಿಂದ ಬಂದಿದ್ದರಿಂದ ಅಲ್ಲೇ ಸೋಂಕು ತಗುಲಿದೆ. ಆದ್ರೆ ಕೇಸ್ ನಂಬರ್ 2 ಬೆಂಗಳೂರು ನಿವಾಸಿಯಾಗಿರುವ 46 ವರ್ಷದ ವೈದ್ಯನಿಗೆ ಸೋಂಕು ದೃಢವಾಗಿದೆ. ಆದ್ರೆ ಈ ವ್ಯಕ್ತಿ ಯಾವುದೇ ವಿದೇಶ ಪ್ರಯಾಣ ಮಾಡಿಲ್ಲ. ಕೇಸ್ ನಂ 3, 72 ವರ್ಷದ ವ್ಯಕ್ತಿ, ಗುಜರಾತ್ ನಿವಾಸಿ ಜಿಂಬಾಬ್ವೆಯಿಂದ ಬಂದ ಹಿನ್ನಲೆ ಈತನಿಗೆ ಸೋಂಕು ಪತ್ತೆಯಾಗಿದೆ. ಕೇಸ್ ನಂ4, 33 ವರ್ಷದ ಮಹಾರಾಷ್ಟ್ರದ ಥಾಣೆ ನಿವಾಸಿ ದಕ್ಷಿಣ ಆಪ್ರಿಕಾದಿಂದ ಬಂದಿದ್ದಾನೆ. ಇನ್ನೂ ಕೇಸ್ ನಂ5 37 ವರ್ಷದ ವ್ಯಕ್ತಿ, ದೆಹಲಿ ನಿವಾಸಿ ತಾಂಜೇನಿಯಾದಿಂದ ಆಗಮಿಸಿದ್ದರಿಂದ ಸೋಂಕು ಪತ್ತೆಯಾಗಿದೆ. ಕೇಸ್ ನಂ 6 ಪುಣೆ ನಿವಾಸಿಯಾಗಿದ್ದು, ಫಿನ್ ಲ್ಯಾಂಡ್ನಿಂದ ಬಂದ ಪರಿಣಾಮ ಸೋಂಕಿತರಾಗಿದ್ದಾರೆ. ಇನ್ನೂ ಕೇಸ್ ನಂ 7,8,9 ಈ ಸೋಂಕಿತರೆಲ್ಲಾ ಪಿಂಪ್ರಿ ಚಿಂಚ್ವಾಡ್ ನಿವಾಸಿಗಳಾಗಿದ್ದು, ಈ ಕುಟುಂಬ ನೈಜೀರಿಯಾದಿಂದ ಬಂದಿದ್ದಾರೆ ಎನ್ನಲಾಗಿದೆ. ಕೇಸ್ ನಂ 10, 11, 12 ಈ ಸೋಂಕಿತರೆಲ್ಲಾ ಪಿಂಪ್ರಿ ಚಿಂಚ್ವಾಡ್ ನಿವಾಸಿಗಳಾಗಿದ್ದು, ನೈಜೀರಿಯಾದಿಂದ ಬಂದ ಸೋಂಕಿತರ ಕುಟುಂಬ ಸಂಪರ್ಕದಲ್ಲಿದ್ದ ಕಾರಣ ಈ ಮೂವರಿಗೆ ಸೋಂಕು ದೃಢವಾಗಿದೆ.
ಪತ್ತೆಯಾಗಿರುವ 5 ಸೋಂಕಿತರಲ್ಲಿ ನಾಲ್ವರಿಗೆ ವಿದೇಶ ಪ್ರಯಾಣ ಮಾಡಿದ್ದರಿಂದ ಸೋಂಕು ದೃಢವಾಗಿದೆ. ಆದ್ರೆ ಬೆಂಗಳೂರಿನ ವೈದ್ಯನಿಗೆ ಮಾತ್ರ ಸೋಂಕು ಹೇಗೆ ಬಂತು ಅನ್ನೋದು ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಈ ಸೋಂಕಿತನ ಮೂಲ ಹುಡುಕಲು ಆರೋಗ್ಯ ಇಲಾಖೆ ಎಲ್ಲಾ ರೀತಿಯಲ್ಲೂ ಕಸರತ್ತು ನಡೆಸ್ತಿದ್ದು, ಈ ಒಂದೇ ಒಂದು ಕೇಸ್ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.