ಬೆಂಗಳೂರಿನ ಅಂಡರ್​ವರ್ಲ್ಡ್ ಮತ್ತೆ ಎದ್ದು ಕುಳಿತಿದೆ. ಹಂತಕರ ಅಟ್ಟಹಾಸಕ್ಕೆ ನಗರದಲ್ಲಿ ಮತ್ತೆ ನೆತ್ತರು ಹರಿದಿದೆ. ರಾಜಧಾನಿಯಲ್ಲಿ ಲಾಂಗ್ ಮಚ್ಚುಗಳು ಮತ್ತೆ ಝಳಪಿಸಿದೆ. ಹಾಡಹಗಲೇ ರೌಡಿ ಶೀಟರ್ ಬಬ್ಲಿ ಭೀಕರವಾಗಿ ಹತ್ಯೆಯಾಗಿದ್ದಾನೆ. ಕೋರಮಂಗಲದ ಯೂನಿಯನ್ ಬ್ಯಾಂಕ್ ಇಂದು ದೊಡ್ಡ ಮಟ್ಟದ ಸಂಚಲನಕ್ಕೆ ಕಾರಣವಾಗಿದೆ.

ಈ ರೌಡಿಸಂ ಅನ್ನೋದೇ ಹಾಗೆ.. ಇಲ್ಲಿ ಎಂಟ್ರಿ ಮಾತ್ರ ಇರುತ್ತೆ ಎಕ್ಸಿಟ್ ಅನ್ನೋದು ಇರಲ್ಲ. ರೌಡಿ ಅನಿಸಿಕೊಂಡವನು ಮಚ್ಚು ಕೆಳಗಿಟ್ಟಿದ್ದಾನೆ ಎಂದು ಗೊತ್ತಾದ್ರೆ ಸಾಕು, ಆತನಿಗೆ ಮುಹೂರ್ತ ಅಷ್ಟೇ ಬೇಗ ರೆಡಿಯಾಗಿರುತ್ತೆ. ಇಲ್ಲಿ ಯಾವಾಗ, ಹೇಗೆ, ಎಲ್ಲಿ ಹೆಣ ಬೀಳುತ್ತೋ ಗೊತ್ತಾಗಲ್ಲ. ಅಚಾನಕ್ಕಾಗಿ ರೌಡಿಗಳ ತಲೆ ಉರುಳಿ ಬಿಡುತ್ತೆ. ರೌಡಿಯಾದವನು ಅಲ್ಪಾಯುಷ್ಯದಲ್ಲಿ ಇಹಲೋಕ ಬಿಟ್ ಬಿಡ್ತಾನೆನ್ನವುದು ಹಳೇಯ ಮಾತು. ರೌಡಿ ಯಾವತ್ತಿದ್ರೂ ಬೀದಿ ಹೆಣನೇ ಎನ್ನವುದು ಟ್ರೇಂಡಿಕ್ ಟಾಕ್. ಮಚ್ಚು ಹಿಡಿದು ಮೆರೆದವನಿಗೆ ಅದೇ ಮಚ್ಚಿನಲ್ಲೇ ಸಾವು ಎನ್ನುವ ಭೂಗತ ಲೋಕದ ಮಾತು ಪದೇ ಪದೇ ನಿಜ ಎನ್ಸಿದೆ. ಯಾಕಂದ್ರೆ ಇಂದು ಹಾಡ ಹಗಲೇ ನಗರದಲ್ಲಿ ಮತ್ತೊಬ್ಬ ರೌಡಿಶೀಟರ್ ನ ವಿಕೆಟ್ ಬಿದ್ದಿದೆ.

ಕೋರಮಂಗಲಕ್ಕೆ ಕೋರಮಂಗಲವೇ ಕಂಪಿಸಿ ಬಿಟ್ಟಿದೆ. ಏರಿಯಾಗೆ ಏರಿಯಾನೆ ನಡುಗಿ ಹೋಗಿದೆ. ಸೈಲೆಂಟಾಗಿದ್ದ ಕೋರಮಂಗಲದಲ್ಲಿ ನೆತ್ತರು ಹರಿದಿದೆ. ಹಂತಕರ ನೆತ್ತರ ದಾಹಕ್ಕೆ ಬ್ಯಾಂಕ್​ನೊಳಗಡೆ ರೌಡಿಶೀಟರ್ ಹೆಣ ಬಿದ್ದಿದೆ. ಬನಶಂಕರಿಯಲ್ಲಿ ಹಾಡಹಗಲೇ ಹತ್ಯೆಯಾದ ಮದನ್​ ರಕ್ತದ ಕಲೆ ಒಣಗುವ ಮುನ್ನವೇ ನಗರದಲ್ಲಿ ಮತ್ತೊಂದು ಹೆಣ ಉರುಳಿದೆ.

ರೌಡಿಶೀಟರ್ ಬಬ್ಲಿ ಮೇಲೆ ಡೆಡ್ಲಿ ಅಟ್ಯಾಕ್
ಬೀದಿ ಹೆಣವಾದ ಆಡುಗೋಡಿ ರೌಡಿಶೀಟರ್!


ಬ್ಯಾಂಕ್​ ಸುತ್ತಾ ಎಲ್ಲಿ ನೋಡಿದ್ರೂ ಬರೀ ಪೊಲೀಸರು. ಬ್ಯಾಂಕ್​ ನಲ್ಲಿ ಪೊಲೀಸರಿಗೆ ಏನ್ ಕೆಲ್ಸ ಅನ್ಕೊಂಡ್ರಾ..?. ಕೋರಮಂಗಲದ 8ನೇ ಬ್ಲಾಕ್​ನಲ್ಲಿರುವ ಈ ಯೂನಿಯನ್ ಬ್ಯಾಂಕ್ ಭೀಕರ ಹತ್ಯೆಯೊಂದಕ್ಕೆ ಸಾಕ್ಷಿಯಾಗಿದೆ. ಇದೇ ಯೂನಿಯನ್ ಬ್ಯಾಂಕ್​ನೊಳಗೆ ಮರ್ಡರ್​ ನಡೆದು ಹೋಗಿದೆ. ಹಾಡ ಹಗಲೇ ನಟ್ಟ ನಡುವೆ ಹಂತಕರ ಮಚ್ಚಿನೇಟಿಗೆ ಆಡುಗೋಡಿಯ ರೌಡಿಶೀಟರ್ ಹೆಣವಾಗಿ ಹೋಗಿದ್ದಾನೆ. ಹೆಸರು ಜೋಸೆಫ್. ಈತನಿಗೆ ಭೂಗತ ಲೋಕದಲ್ಲಿ ನಾಮಕರಣ ಕೂಡ ಮಾಡಲಾಗಿತ್ತು. ಬಬ್ಲಿ ಅಲಿಯಾಸ್ ಜೋಸೆಫ್ ಎಂದು.

ಮಡದಿ-ಮಗಳ ಜೊತೆ ಹೋಗುತ್ತಿದ್ದಾಗ ಅಟ್ಯಾಕ್
ತಪ್ಪಿಸಿಕೊಳ್ಳಲು ಬ್ಯಾಂಕ್​ನೊಳಗಡೆ ನುಗ್ಗಿದ ಬಬ್ಲಿ
ಬ್ಯಾಂಕ್​ಗೆ ಓಡಿ ಹೋದ್ರು ಉಳಿಯಲಿಲ್ಲ ಪ್ರಾಣ

ಮಧ್ಯಾಹ್ನ 12.30 ರ ಆಸು ಪಾಸು. ದೊಡ್ಡ ದುರಂತವೊಂದನ್ನ ಬ್ಯಾಂಕ್ ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿತ್ತು ಅನ್ಸುತ್ತೆ. ಆಡುಗೋಡಿ ರೌಡಿಶೀಟರ್ ಬಬ್ಲಿ ತನ್ನ ಮಡದಿ ಹಾಗು ಮಗಳ ಜೊತೆಗೆ ಹೋಗ್ತಿದ್ದ. ದಾರಿಮಧ್ಯೆನೇ ಬಬ್ಲಿಗೆ ತನ್ನ ಪಾಲಿನ ಯಮಧೂತರು ಸಿಕ್ಕಿದ್ರು. ಸಾವಿನ ಮುನ್ಸೂಚನೆ ಸಿಗ್ತಿದ್ದಂಗೆ ಬಬ್ಲಿ ತನ್ನ ಬೈಕ್​ನ ವೇಗವನ್ನು ಹೆಚ್ಚಿಸಿದ್ದಾನೆ. ಯೂನಿಯನ್ ಬ್ಯಾಂಕ್​ ಎದುರು ಥಟ್ ಎಂದು ತನ್ನ ಬೈಕ್​ ಗೆ ಬ್ರೇಕ್ ಹಾಕಿದ ಬಬ್ಲಿ, ಕೀಯನ್ನು ಬೈಕಿನಲ್ಲಿ ಬಿಟ್ಟು ಬ್ಯಾಂಕ್​ನೊಳಗಡೆ ಓಡಿ ಹೋಗಿದ್ದಾನೆ. ಬ್ಯಾಂಕ್​ ಒಳಗಡೆ ಹೋದ್ರೆ ಹಂತಕರಿಂದ ತಪ್ಪಿಸಿಕೊಳ್ಳಬಹುದೆಂದುಕೊಂಡ ಬಬ್ಲಿ, ನೇರವಾಗಿ ಮ್ಯಾನೇಜರ್ ಕ್ಯಾಬೀನ್​ಗೆ ನುಗ್ಗಿದ್ದಾನೆ.


ಆದ್ರೆ ಬ್ಯಾಂಕ್​ನೊಳಗಡೆ ನುಗ್ಗಿದ್ರು ಬಬ್ಲಿಯ ಪ್ರಾಣ ಮಾತ್ರ ಉಳಿಯಲಿಲ್ಲ. ಅದಾಗ್ಲೆ ರಕ್ತದ ರುಚಿ ನೋಡಲೇ ಬೇಕೆಂದು ನಿರ್ಧರಿಸಿ ಬಂದಿದ್ದ ಹಂತಕರು ಬ್ಯಾಂಕ್​ನೊಳಗಡೆ ಮಾರಕಾಸ್ತ್ರಗಳೊಂದಿಗೆ ನುಗ್ಗಿದ್ದಾರೆ. ಬ್ಯಾಂಕ್​ನೊಳಗಿದ್ದ ಬಬ್ಲಿಯ ಮನಸೋ ಇಚ್ಚೇ ಮಚ್ಚು ಬೀಸಿದ್ದಾರೆ. ಮೃಗೀಯ ರೂಪದಲ್ಲಿದ್ದ ಎರಗಿದ ಹಂತಕರು ಬರೋಬ್ಬರಿ 25 ಬಾರಿ ಚಾಕುವಿನಿಂದ ಇರಿದು ಬಬ್ಲಿಯ ಕಥೆ ಮುಗಿಸಿದ್ದಾರೆ. ಹಂತಕರ ದಾಳಿಗೆ ಪ್ರತಿರೋಧ ತೋರಲಾಗದೆ ಮಡದಿ,ಮಗಳ ಎದುರೇ ಬಬ್ಲಿ ವಿಲ ವಿಲ ಒದ್ದಾಡುತ್ತಾ ಉಸಿರು ಚೆಲ್ಲಿದ್ದಾನೆ. ಬಬ್ಲಿ ಸತ್ತು ಹೋಗಿದ್ದಾನೆಂದು ಕನ್ಫರ್ಮ್ ಆಗ್ತಿದ್ದಂಗೆ, ಬ್ಯಾಂಕ್​ ಹೊರಗಡೆನೇ ಮಾರಾಕಾಸ್ತ್ರಗಳನ್ನು ಬಿಸಾಕಿ ಹಂತಕರು ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.

ಹಳೇಯ ದ್ವೇಷಕ್ಕೆ ಬಿತ್ತಾ ಬಬ್ಲಿಯ ಹೆಣ?

ಇಂದು ಕೊಲೆಯಾದ ಬಬ್ಲಿ ಏನು ಸಾಚ ಅಲ್ಲ. ನಟೋರಿಯಸ್ ಪಾತಕಿ ಪಳನಿಯ ಅಳಿಯನಾಗಿದ್ದ ಈ ಬಬ್ಲಿ 2011 ರ ಮೊದ್ಲು ರೌಡಿಸಂ ಫೀಲ್ಡ್ ನಲ್ಲಿ ಫುಲ್ ಆಕ್ಟೀವ್ ಆಗಿದ್ದ. ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಅಶೋಕ್ ನಗರ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಅರುಣ್ ಎಂಬಾತನ ಅಫ್ ಮರ್ಡರ್ ಕೇಸ್ ನಲ್ಲಿ ಇದೇ ಬಬ್ಲಿಯ ಹೆಸರು ತಳಕು ಹಾಕಿಕೊಂಡಿತ್ತು. ಅರುಣನ ಮೇಲೆ 307 ಮಾಡಿದ್ದಕ್ಕೆ ಅರುಣನ ಹುಡುಗರು ರಿವೇಂಜ್ ತೀರಿಸಿಕೊಂಡ್ರಾ ಎಂಬ ಅನುಮಾನ ಕೂಡ ಮೂಡಿದೆ.


ಅಷ್ಟೇ ಅಲ್ಲ, ಇತ್ತೀಚಿಗಷ್ಟೇ ಬನಶಂಕರಿಯಲ್ಲಿ ಹಾಡ ಹಗಲೇ ಹತ್ಯೆಯಾದ ಮದನ್ ಹಾಗೂ ಇಂದು ಹತ್ಯೆಯಾದ ಬಬ್ಲಿ ಒಟ್ಟೊಟ್ಟಿಗೆ ಇದ್ದವರು. ಇವರ ಬಾಸ್ ನಾಗನ ಜೊತೆ ಗುರುತಿಸಿಕೊಂಡವರು. ನಾಗನ ವಿರೋಧಿ ಟೀಂ ವಾರದ ಹಿಂದೆಯಷ್ಟೇ ಬನಶಂಕರಿಯ ದೇವಾಸ್ಥಾನದ ಎದುರು ಮದನ್ ಕಥೆ ಮುಗಿಸಿತ್ತು. ಇದೀಗ ಅದೇ ನಾಗನ ವಿರೋಧಿ ಗ್ಯಾಂಗ್ ನಾಗನ ಮತ್ತೊಬ್ಬ ಶಿಷ್ಯ ಬಬ್ಲಿಯ ಹೆಣ ಉರುಳಿಸಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ದಶಕದ ಹಿಂದೆ ಲಾಂಗ್ ಮಚ್ಚು ಹಿಡಿದು ಮೆರೆದಿದ್ದ ಬಬ್ಲಿ ಇಂದು ಅದೇ ಮಚ್ಚಿಗೆ ಆಹಾರವಾಗಿದ್ದಾನೆ. ವಿಷ್ಯಾ ತಿಳಿಯುತ್ತಿದ್ದಂಗೆ ಆಗ್ನೇಯ ವಿಭಾಗ ಡಿಸಿಪಿ‌‌ ಜೋಷಿ‌ ಶ್ರೀನಾಥ್ ಮಹದೇವ್ ಸ್ಥಳ ಪರಿಶೀಲನೆ ನಡೆಸುತ್ತಿದ್ದು, ಹಂತಕರಿಗಾಗಿ ಬಲೆ ಬೀಸಿದ್ದಾರೆ. ಬ್ಯಾಂಕ್​ನೊಳಗಡೆ ಕೃತ್ಯ ನಡೆದಿರುವುದರಿಂದ ಬ್ಯಾಂಕ್​ನಲ್ಲಿದ್ದ ಸಿಸಿ ಕ್ಯಾಮೆರಾಗಳು, ಪೊಲೀಸರಿಗೆ ಹಂತಕರ ಸುಳಿವು ನೀಡುವ ಸಾಧ್ಯತೆ ಇದೆ.

The post ರಾಜಧಾನಿಯಲ್ಲಿ ಮತ್ತೆ ಝಳಪಿಸಿದ ಮಚ್ಚು, ಲಾಂಗ್; ಬ್ಯಾಂಕ್​ನಲ್ಲೇ ನಡೀತು ರೌಡಿಶೀಟರ್​ ಹತ್ಯೆ appeared first on News First Kannada.

Source: newsfirstlive.com

Source link