ರಾಜಸ್ಥಾನ ಸಂಪುಟ ಪುನರ್​ರಚನೆ: ಎಲ್ಲ ಮಂತ್ರಿಗಳಿಂದ ರಾಜೀನಾಮೆ ಪಡೆದ ಸಿಎಂ ಅಶೋಕ್ ಗೆಹ್ಲೋಟ್ | Rajasthan Politics All Ministers Resign For Ashok Gehlot Cabinet Reshuffle


ರಾಜಸ್ಥಾನ ಸಂಪುಟ ಪುನರ್​ರಚನೆ: ಎಲ್ಲ ಮಂತ್ರಿಗಳಿಂದ ರಾಜೀನಾಮೆ ಪಡೆದ ಸಿಎಂ ಅಶೋಕ್ ಗೆಹ್ಲೋಟ್

ಅಶೋಕ್​ ಗೆಹ್ಲೋಟ್​

ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಶನಿವಾರ ತಮ್ಮೆಲ್ಲಾ ಸಚಿವ ಸಂಪುಟ ಸಹೋದ್ಯೋಗಿಗಳಿಂದ ರಾಜೀನಾಮೆ ಪಡೆದುಕೊಂಡಿದ್ದಾರೆ. ಶೀಘ್ರದಲ್ಲಿಯೇ ರಾಜಸ್ಥಾನ ಸಚಿವ ಸಂಪುಟ ಪುನರ್​ರಚನೆ ಪ್ರಕ್ರಿಯೆ ಆರಂಭವಾಗಲಿದೆ. ಗೆಹ್ಲೋಟ್ ನೇತೃತ್ವದಲ್ಲಿ ನಡೆದ ಸಂಪುಟ ಸದಸ್ಯರ ಸಭೆಯ ನಂತರ ಎಲ್ಲ ಸದಸ್ಯರೂ ರಾಜೀನಾಮೆ ನೀಡಿದ್ದಾರೆ ಎಂದು ಸಾರಿಗೆ ಸಚಿವ ಪ್ರತಾಪ್ ಸಿಂಗ್ ಕಚರಿಯಾವಸ್ ಅವರನ್ನು ಉಲ್ಲೇಖಿಸಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಗೆಹ್ಲೋಟ್ ಅವರು ಎಲ್ಲರ ರಾಜೀನಾಮೆ ಅಂಗೀಕರಿಸಿದ್ದಾರೆ.

ಭಾನುವಾರ ಮಧ್ಯಾಹ್ನ 2 ಗಂಟೆಗೆ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಗೆ ತೆರಳುವಂತೆ ನಮಗೆಲ್ಲರಿಗೂ ಸೂಚನೆ ನೀಡಲಾಗಿದೆ. ಅಲ್ಲಿ ನಮಗೆ ಮುಂದಿನ ಸೂಚನೆ ನೀಡಲಾಗುವುದು ಎಂದು ಹೇಳಿದ್ದಾರೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಪ್ರಧಾನ ಕಾರ್ಯದರ್ಶಿ ಅಜಯ್ ಮಕೆನ್ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಅಧ್ಯಕ್ಷ ಗೋವಿಂದ್ ಸಿಂಗ್ ದೊತಸ್ರಾ ಮತ್ತು ಮುಖ್ಯ ಅಶೋಕ್ ಸಿಂಗ್ ಗೆಹ್ಲೋಟ್ ಸಹ ಕಚೇರಿಯಲ್ಲಿ ಉಪಸ್ಥಿತರಿರುತ್ತಾರೆ.

ರಾಜಸ್ಥಾನದ ಶಿಕ್ಷಣ ಸಚಿವ ಗೋವಿಂದ್ ಸಿಂಗ್ ದೊತಸ್ರಾ ಮತ್ತು ಇತರ ಇಬ್ಬರು ಸಚಿವರು ಶುಕ್ರವಾರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಭೆ ಕರೆಯಬೇಕು ಎಂದು ಪ್ರಸ್ತಾವ ಮಂಡಿಸಿದ್ದರು. ನಂತರದ ಬೆಳವಣಿಗೆಯಲ್ಲಿ ಉಳಿದೆಲ್ಲ ಸಚಿವರು ರಾಜೀನಾಮೆ ನೀಡಿದ್ದಾರೆ.

ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರದಲ್ಲಿ ಸಂಪುಟ ಪುನಾರಚನೆ ನಿರೀಕ್ಷಿಸಲಾಗುತ್ತಿದೆ. ಇತ್ತೀಚಿನ ಬೆಳವಣಿಗೆಯಲ್ಲಿ ಮೂವರು ಸಚಿವರು ತಮ್ಮ ಹುದ್ದೆಗಳಿಗೆ ರಾಜಿನಾಮೆ ಸಲ್ಲಿಸಿದ್ದಾರೆ. ನಿರೀಕ್ಷಿತ ಸಂಪುಟ ಪುನಾರಚನೆಗೆ ಮುನ್ನ ಮೂವರು ಸಚಿವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದು, ತಮ್ಮ ಸ್ಥಾನವನ್ನು ತೊರೆದು ಪಕ್ಷಕ್ಕಾಗಿ ಕೆಲಸ ಮಾಡಲು ಮುಂದಾಗಿದ್ದಾರೆ.

ಕಂದಾಯ ಸಚಿವ ಹರೀಶ್ ಚೌಧರಿ, ವೈದ್ಯಕೀಯ ಮತ್ತು ಆರೋಗ್ಯ ಸಚಿವ ಡಾ.ರಘು ಶರ್ಮಾ ಮತ್ತು ಶಿಕ್ಷಣ ಸಚಿವ ಗೋವಿಂದ್ ಸಿಂಗ್ ದೋತಸ್ರಾ ರಾಜಿನಾಮೆ ನೀಡಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್ ಸುದ್ದಿಗಾರರಿಗೆ ತಿಳಿಸಿದ್ದಾರೆ. “ನಮ್ಮ ರಾಜಸ್ಥಾನ ಕ್ಯಾಬಿನೆಟ್‌ನ ಮೂವರು ಭರವಸೆಯ ಸಚಿವರು ಇಂದು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ, ಸಚಿವ ಸ್ಥಾನದಿಂದ ಕೆಳಗಿಳಿಯಲು ಮುಂದಾಗಿದ್ದಾರೆ. ಅವರು ಪಕ್ಷಕ್ಕಾಗಿ ಕೆಲಸ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ” ಎಂದು ಮಾಕೆನ್ ಹೇಳಿದ್ದಾರೆ.

ಸಚಿವರ ರಾಜಿನಾಮೆಯ ಕುರಿತಂತೆ ಪ್ರತಿಕ್ರಿಯಿಸಿರುವ ಮಾಕೆನ್, “ಕಾಂಗ್ರೆಸ್ ಪಕ್ಷವು ಅವರನ್ನು ಗೌರವಿಸುತ್ತದೆ. ಪಕ್ಷಕ್ಕಾಗಿ ಕೆಲಸ ಮಾಡಲು ಬಯಸುವ ಇಂತಹ ಭರವಸೆಯ ಜನರು ಇದ್ದಾರೆ ಎಂದು ನಮಗೆ ಸಂತೋಷವಾಗಿದೆ” ಎಂದು ಹೇಳಿದ್ದಾರೆ. ಗೋವಿಂದ್ ಸಿಂಗ್ ದೋತಸ್ರಾ ಅವರು ಪ್ರಸ್ತುತ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷರಾಗಿದ್ದರೆ, ರಘು ಶರ್ಮಾ ಅವರನ್ನು ಇತ್ತೀಚೆಗೆ ಗುಜರಾತ್‌ನ ಉಸ್ತುವಾರಿಯಾಗಿ ಮತ್ತು ಹರೀಶ್ ಚೌಧರಿ ಅವರನ್ನು ಪಂಜಾಬ್‌ಗೆ ಉಸ್ತುವಾರಿಯಾಗಿ ನೇಮಿಸಲಾಗಿದೆ.

ಇದನ್ನೂ ಓದಿ: ಗೆಹ್ಲೋಟ್- ಪೈಲಟ್ ಭಿನ್ನಾಭಿಪ್ರಾಯದ ನಡುವೆಯೇ ಬಿಎಸ್ಪಿಯಿಂದ ಪಕ್ಷಕ್ಕೆ ಸೇರಿದ 6 ಶಾಸಕರಿಂದ ಕಾಂಗ್ರೆಸ್​ಗೆ ಹೊಸ ತಲೆನೋವು
ಇದನ್ನೂ ಓದಿ: ವರ್ಗಾವಣೆಗೆ ಲಂಚ ಕೊಡ್ತೀರಾ: ಶಿಕ್ಷಕರಿಗೆ ಪ್ರಶ್ನೆ ಕೇಳಿ ಪೇಚಿಗೆ ಸಿಲುಕಿದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್

TV9 Kannada


Leave a Reply

Your email address will not be published. Required fields are marked *