ರಾಜಸ್ಥಾನ ಸಂಪುಟ ಪುನರ್​ರಚನೆ: ನನಗೀಗ ತುಂಬ ಸಂತೋಷವಾಗಿದೆ ಎಂದ ಸಚಿನ್​ ಪೈಲಟ್ | Congress leader Sachin Pilot said that he was glad about Cabinet rejig in Rajasthan


ರಾಜಸ್ಥಾನ ಸಂಪುಟ ಪುನರ್​ರಚನೆ: ನನಗೀಗ ತುಂಬ ಸಂತೋಷವಾಗಿದೆ ಎಂದ ಸಚಿನ್​ ಪೈಲಟ್

ಸಚಿನ್ ಪೈಲಟ್​

ಜೈಪುರ: ರಾಜಸ್ಥಾನದಲ್ಲಿ ಇಂದು ಸಂಪುಟ ಮರುರಚನೆ (Rajasthan Cabinet Rejig ) ಯಾಗುತ್ತಿದ್ದು, 15 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಾರೆ. ಅದರಲ್ಲೂ 12 ಹೊಸಬರೇ ಆಗಿದ್ದು, ಐವರು ಸಚಿನ್ ಪೈಲಟ್​ ಬಣದವರಾಗಿದ್ದಾರೆ. ರಾಜಸ್ಥಾನ ಕ್ಯಾಬಿನೆಟ್​ ಮರುರಚನೆ ವಿಳಂಬವಾದರೂ ಅಂತಿಮವಾಗಿ ಇಂದು ವಿಸ್ತರಣೆಯಾಗುತ್ತಿರುವ ಬಗ್ಗೆ ಮಾಜಿ ಉಪಮುಖ್ಯಮಂತ್ರಿ ಸಚಿನ್​ ಪೈಲಟ್​ ಸಂತೋಷ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನದ ಸಂಪುಟ ವಿಸ್ತರಣೆ ಬಗ್ಗೆ ನಾನು ವಿಷಯ ಪ್ರಸ್ತಾಪ ಮಾಡಿದ್ದೆ. ಅದನ್ನೀಗ ಪಕ್ಷದ ಹೈಕಮಾಂಡ್​ ಮತ್ತು ರಾಜ್ಯ ಸರ್ಕಾರ ಮಾನ್ಯ ಮಾಡಿದ್ದು ಖುಷಿಯಾಗಿದೆ ಎಂದು ಹೇಳಿದ್ದಾರೆ.  

ಕೆಲವೇ ಹೊತ್ತಲ್ಲಿ ರಾಜಸ್ಥಾನದಲ್ಲಿ ನೂತನ ಮಂತ್ರಿಗಳು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈ ಬೆನ್ನಲ್ಲೇ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಸಚಿನ್ ಪೈಲಟ್​, ಇಂದು ಹೊಸಮಂತ್ರಿಗಳು ಸಂಪುಟ ಸೇರ್ಪಡೆಯಾಗುತ್ತಿದ್ದಾರೆ. ಹಲವು ಹಂತದ ಚರ್ಚೆಯ ಬಳಿಕ ಪಕ್ಷ ಮತ್ತು ನಾಯಕತ್ವ ಈ ನಿರ್ಧಾರ ತೆಗೆದುಕೊಂಡಿದೆ. ಈ ಮೂಲಕ ರಾಜಸರ್ಕಾರದಿಂದ ಸಾರ್ವಜನಿಕರಿಗೆ ಒಂದು ಸಕಾರಾತ್ಮಕ ಸಂದೇಶ ಹೋಗಿದೆ. ನಾವು ಪದೇಪದೆ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡುತ್ತಲೇ ಇದ್ದೆವು. ಇದೀಗ ಹೈಕಮಾಂಡ್​ ಮತ್ತು ರಾಜ್ಯ ಸರ್ಕಾರ ಅದನ್ನು ಪರಿಗಣಿಸಿದೆ ಎಂದು ಹೇಳಿದ್ದಾರೆ.

ಇನ್ನು ತಮ್ಮ ಬಣದ ಐವರಿಗೆ ಮಂತ್ರಿ ಸ್ಥಾನ ಸಿಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ನಾಯಕತ್ವದಡಿ ಇಡೀ ಕಾಂಗ್ರೆಸ್ ಪಕ್ಷ ಕೆಲಸ ಮಾಡುತ್ತಿದೆ. ಬಿಜೆಪಿ ನಡೆಸುತ್ತಿರುವ ದುಷ್ಕೃತ್ಯಗಳನ್ನು ಜನರ ಎದುರು ತೆರೆದಿಡಲು ಕಾಂಗ್ರೆಸ್ ಕಾರ್ಯಕರ್ತರು ಒಟ್ಟಾಗಿ ಶ್ರಮಿಸಬೇಕು. ಕಾಂಗ್ರೆಸ್​​ನಲ್ಲಿ ಯಾವುದೇ ಬಣಗಳೂ ಇಲ್ಲ. ಸಂಪುಟ ವಿಸ್ತರಣೆಯ ನಿರ್ಧಾರವನ್ನು ಎಲ್ಲರೂ ಸೇರಿ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

ನಾನು ದೆಹಲಿಗೆ ಹೋಗಿ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿದ್ದೇನೆ. ನಾವು ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದೇವೆ. ನನಗೆ ಕೊಡಲಾದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತೇನೆ..ಕಳೆದ 20ವರ್ಷಗಳಿಂದಲೂ ನಿಷ್ಠೆಯಿಂದ ನಿಭಾಯಿಸುತ್ತಿದ್ದೇನೆ. ಪಕ್ಷ ನನ್ನನ್ನು ಎಲ್ಲಿಗೇ ಕಳಿಸಿದರೂ ಅಲ್ಲಿ ನಾನು ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.  ಈ ಬಾರಿ ನಾಲ್ಕು ದಲಿತರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಎಐಸಿಸಿ ದಲಿತರು, ಹಿಂದುಳಿದ ಮತ್ತು ಬಡವರಿಗೆ ಪ್ರಾತಿನಿಧ್ಯ ನೀಡಲು ಬಯಸುತ್ತದೆ ಎಂಬುದಕ್ಕೆ ಇದೇ ಜ್ವಲಂತ ಉದಾಹರಣೆ ಎಂದೂ ಹೇಳಿದ್ದಾರೆ.  ಕಳೆದ ವರ್ಷವೂ ರಾಜಸ್ಥಾನ ರಾಜಕಾರಣದಲ್ಲಿ ಹೈಡ್ರಾಮಾ ನಡೆದಿತ್ತು. ಆಗ ಸಚಿನ್​ ಪೈಲಟ್​ ಮತ್ತು ಅವರ ಬಣದ 18 ಶಾಸಕರು ಬಂಡಾಯ ಎದ್ದು, ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಅದಾದ ಬಳಿಕ ಕಾಂಗ್ರೆಸ್ ಹೈಕಮಾಂಡ್​ ಕೂಡ ಮಧ್ಯಪ್ರವೇಶ ಮಾಡಿತ್ತು.

ಇದನ್ನೂ ಓದಿ: ರಾಜಸ್ಥಾನದಲ್ಲಿ ಇಂದು ನೂತನ ಸಚಿವರ ಪ್ರಮಾಣವಚನ ಸ್ವೀಕಾರ; ಸಚಿನ್​ ಪೈಲಟ್ ಬಣದ ಐವರಿಗೆ ಮಂತ್ರಿ ಸ್ಥಾನ

TV9 Kannada


Leave a Reply

Your email address will not be published. Required fields are marked *