ಕೋಲ್ಕತ್ತಾ: 2021ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ 77 ಬಿಜೆಪಿ ಶಾಸಕರ ಪೈಕಿ ಇಂದು ಇಬ್ಬರು ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರೊಂದಿಗೆ ಬಿಜೆಪಿ ಸಂಖ್ಯಾಬಲ 75ಕ್ಕೇ ಕುಸಿದಿದೆ.

ಬಿಜೆಪಿ ಜಗನ್‍ನಾಥ್ ಸರ್ಕಾರ್ ಹಾಗೂ ನಿತಿಶ್ ಪ್ರಮಾಣಿಕ್ ರಾಜೀನಾಮೆ ನೀಡಿದ್ದು, ಇಬ್ಬರು ಕ್ರಮವಾಗಿ ಸಾಂತಿಪುರ, ದಿನ್‍ಮಠ ಕ್ಷೇತ್ರಗಳಿಂದ ಆಯ್ಕೆಯಾಗಿದ್ದರು. ಇಂದು ವಿಧಾನಸಭಾ ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಆ ಬಳಿಕ ಮಾತನಾಡಿರುವ ನಿತಿಶ್ ಪ್ರಮಾಣಿಕ್, ಪಕ್ಷದ ಸೂಚನೆ ಮೇರೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ಹೇಳಿದರು.

ಇನ್ನು ಚುನಾವಣೆಯಲ್ಲಿ 292 ಸ್ಥಾನಗಳಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ 213 ಸೀಟ್ ಪಡೆದು ಅಧಿಕಾರ ಪಡೆದುಕೊಂಡಿತ್ತು. ವಿಧಾನಸಭಾ ಚುನಾವಣೆಯಲ್ಲಿ ಈಗಾಗಲೇ ಸಂಸದರಾಗಿದ್ದ ನಾಲ್ವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಇದರಲ್ಲಿ ಜಗನ್‍ನಾಥ್ ಸರ್ಕಾರ್ ಹಾಗೂ ನಿತಿಶ್ ಪ್ರಮಾಣಿಕ್ ಗೆಲುವು ಪಡೆದಿದ್ದರು. ಆದರೆ ಲಾಕೆಟ್ ಚಟರ್ಜಿ ಹಾಗೂ ಬಾಬುಲ್ ಸುಪ್ರಿಯೋ ಸೋಲುಂಡಿದ್ದರು. ಈ ಹಿನ್ನೆಯಲ್ಲಿ ಸಂಸದರಾಗಿ ಮುಂದುವರಿಯಲು ಪಕ್ಷ ಸೂಚನೆ ನೀಡಿದ ಕಾರಣ ಇಬ್ಬರು ತಮ್ಮ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಉಳಿದಂತೆ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ಮುಂದಿನ 6 ತಿಂಗಳ ಒಳಗಡೆ ಚುನಾವಣೆ ನಡೆಯಲಿದೆ.

The post ರಾಜೀನಾಮೆ ಕೊಟ್ಟ ಪ.ಬಂಗಾಳ ನೂತನ ಇಬ್ಬರು ಬಿಜೆಪಿ ಶಾಸಕರು- ಕಾರಣವೇನು ಗೊತ್ತಾ? appeared first on News First Kannada.

Source: newsfirstlive.com

Source link