ಬೆಳಗಾವಿ: ಜಿಲ್ಲೆಯಲ್ಲೊಂದು ಸಿಡಿ ಸದ್ದು ಮಾಡಿ, ಇಡೀ ರಾಜಕಾರಣವನ್ನೇ ತಲ್ಲಣಗೊಳಿಸಿತ್ತು. ಇದೀಗ ಅದೇ ಕುಂದಾನಗರಿಯಲ್ಲೇ ಮತ್ತೊಂದು ಸಿಡಿ ಸ್ಫೋಟಗೊಳ್ಳಲು ಅಣಿಯಾಗ್ತಿದೆ. ಬೆಳಗಾವಿ ಸರ್ಕಾರಿ ನೌಕರರ ಸಂಘದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ತಿಕ್ಕಾಟ ತಾರಕಕ್ಕೇರಿದ್ದು, ಅದು ಸಿಡಿ ರೂಪ ಪಡೆದುಕೊಂಡು ಬಿಟ್ಟಿದೆ.
ಜಿಲ್ಲಾಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಇಲ್ಲ, ನಾವ್ ಅವರ ಸಿಡಿ ರಿಲೀಸ್ ಮಾಡ್ತೇವೆ ಅಂತ ಒಕ್ಕೊರಲಿನಿಂದ ಹೇಳ್ತಿರೋ ಇವರೆಲ್ಲ ಬೆಳಗಾವಿ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಗದೀಶ್ ಪಾಟೀಲ್ ವಿರುದ್ಧವೇ ಪದಾಧಿಕಾರಿಗಳು ತಿರುಗಿ ಬಿದ್ದಿದ್ದಾರೆ. ನೌಕರರ ಸಂಘದಲ್ಲೀಗ ಜಿಲ್ಲಾಧ್ಯಕ್ಷರ ಸಿಡಿ ಬಾಂಬ್ ಸ್ಫೋಟಗೊಂಡಿದೆ.
‘ರಿಸೈನ್ ಮಾಡಿ, ಇಲ್ದಿದ್ರೆ ಸಿಡಿ ಬರುತ್ತೆ’
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಜಗದೀಶ್ ಪಾಟೀಲ್ ರಾಜೀನಾಮೆ ನೀಡುವಂತೆ ನೌಕರರು ಪಟ್ಟು ಹಿಡಿದಿದ್ದಾರೆ. ಏಳು ದಿನಗಳಲ್ಲಿ ರಾಜೀನಾಮೆ ನೀಡದಿದ್ರೆ, ಅವರ ಸಿಡಿ ಬಿಡುಗಡೆಗೊಳಿಸೋದಾಗಿ ನೌಕರರು ಬೆದರಿಕೆ ಒಡ್ಡಿದ್ದಾರೆ. ಏಕೆಂದ್ರೆ, ಜಿಲ್ಲಾಧ್ಯಕ್ಷ ಜಗದೀಶ್ ಪಾಟೀಲ್, ರಾತ್ರಿ ವೇಳೆ ಕುಡಿದು ಬಂದು ಪದಾಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಅಂತಲೂ ಆರೋಪಿಸಿದ್ದಾರೆ. ನೌಕರರ ಹೆಸರಿನಲ್ಲಿ ಜಗದೀಶ್ ಪಾಟೀಲ್ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಯಾರಾದ್ರೂ ಇವರ ವಿರುದ್ಧ ಧ್ವನಿ ಎತ್ತಿದ್ರೆ, ಅವರಿಗೆ ಧಮ್ಕಿ ಹಾಕುತ್ತಿದ್ದಾರೆ ಅಂತ ಜಗದೀಶ್ ಪಾಟೀಲ್ ವಿರುದ್ಧ ಸರಣಿ ನೌಕರರು ಆರೋಪ ಮಾಡಿದ್ದಾರೆ. ಇನ್ನು, ತಮ್ಮ ಮೇಲೆ ಬಂದಿರೋ ಆರೋಪಗಳನ್ನ ಜಿಲ್ಲಾಧ್ಯಕ್ಷ ಜಗದೀಶ್ ಪಾಟೀಲ್ ನಿರಾಕರಿಸಿದ್ದಾರೆ.
ಜಿಲ್ಲಾಧ್ಯಕ್ಷರ ಮೇಲೆ ಷಡ್ಯಂತ್ರ?
ತಾಲೂಕಾಧ್ಯಕ್ಷರು ಜಿಲ್ಲಾಧ್ಯಕ್ಷ ಜಗದೀಶ್ ಪಾಟೀಲ್ ವಿರುದ್ಧ ತಿರುಗಿ ಬೀಳಲು ಕಾರಣ ರಾಜ್ಯಾಧ್ಯಕ್ಷ ಷಡಕ್ಷರಿ ಮತ್ತು ಜಗದೀಶ್ ಪಾಟೀಲ್ ನಡುವಿನ ವೈಮನಸ್ಸಂತೆ. ಜನವರಿಯಲ್ಲಿ ಷಡಕ್ಷರಿ ಅವರು ರಾಜ್ಯಾಧ್ಯಕ್ಷ ಸ್ಥಾನವನ್ನ ಬಿಟ್ಟು ಕೊಡುವ ಒಪ್ಪಂದವಾಗಿತ್ತು. ಆದ್ರೆ, ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟು ಕೊಡಲು ರಾಜ್ಯಾಧ್ಯಕ್ಷ ಷಡಕ್ಷರಿ ನಕಾರ ಮಾಡಿದ್ದಾರಂತೆ. ಈ ಹಿನ್ನೆಲೆ ಜಿಲ್ಲಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಷಡ್ಯಂತ್ರ ಮಾಡಿದ್ದಾರೆ ಎಂದು, ಜಿಲ್ಲಾಧ್ಯಕ್ಷ ಜಗದೀಶ್ ಪಾಟೀಲ್ ಆರೋಪಿಸಿದ್ದಾರೆ. ಹೀಗಾಗಿ, ಕಾನೂನು ಹೋರಾಟ ನಡೆಸುವುದಾಗಿ ಜಿಲ್ಲಾಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ.
ನನ್ನ ಮೇಲೆ ಬಂದಿರೋ ಆರೋಪಗಳೆಲ್ಲಾ ಸತ್ಯಕ್ಕೆ ದೂರ ಅಂತ ಜಿಲ್ಲಾಧ್ಯಕ್ಷರು ಹೇಳ್ತಿದ್ರೆ, ಇತ್ತ ತಾಲೂಕಾಧ್ಯಕ್ಷರು ಸಿಡಿ ಬಿಡುಗಡೆ ಮಾಡುವ ಬೆದರಿಕೆ ಹಾಕ್ತಿದ್ದಾರೆ. ಅಂದುಕೊಂಡಂತೆ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಿಗೆ ಸೇರಿದ ಸಿಡಿ ಬಿಡುಗಡೆಯಾಗುತ್ತಾ? ಅಥವಾ ಇದು ಕೇವಲ ಬೆದರಿಕೆಗೆ ಮಾತ್ರ ಸೀಮಿತವಾಗುತ್ತಾ ಅಂತ ಕಾದು ನೋಡಬೇಕಿದೆ.
ವಿಶೇಷ ವರದಿ: ಶ್ರೀಕಾಂತ್ ಕುಬಕಡ್ಡಿ, ನ್ಯೂಸ್ಫಸ್ಟ್, ಬೆಳಗಾವಿ.