ಕೊಪ್ಪಳ: ಕೊರೊನಾ ಎರಡನೇ ಅಲೆ ಅಬ್ಬರಿಸಿ ತಣ್ಣಗಾಗಿದೆ ಇದೀಗ ಮೂರನೇ ಅಲೆಯ ಚರ್ಚೆ ಆರಂಭವಾಗಿದೆ. ಜಗತ್ತಿನಲ್ಲಿ ಕೊರೊನಾ ನಿರ್ಮೂಲನೆಗೆ ಔಷಧಿ ಹಾಗೂ ವ್ಯಾಕ್ಸಿನ್ ಸಂಶೋಧನೆ ಈಗಲೂ ಮುಂದುವರೆದಿದೆ. ಈ ಹಲವು ವ್ಯಾಕ್ಸಿನ್ ಗಳು ಸಿದ್ಧವಾಗಿವೆ. ಜನರು ಸಾಲಿನಲ್ಲಿ ನಿಂತು ವ್ಯಾಕ್ಸಿನ್ ಪಡೆಯುತ್ತಿದ್ದಾರೆ. ಆದ್ರೆ ಇತ್ತೀಚೆಗೆ ಸದ್ದು ಮಾಡುತ್ತಿರುವ ಸುದ್ದಿ ಅಂದ್ರೆ ಅದು ಆಂಧ್ರದ ನೆಲ್ಲೂರು ಜಿಲ್ಲೆಯ ಆನಂದಯ್ಯನ ನಾಟಿ ಔಷಧಿ. ಆರಂಭದಲ್ಲಿ ಸಂಕಷ್ಟ ಎದುರಿಸಿದ ಆನಂದಯ್ಯನ ನಾಟಿ ಔಷಧಿಗೆ ಆಂಧ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ, ಇದೀಗ ಈ ಔಷಧಿ ಆಂಧ್ರದ ಮೂಲಕ ಕರ್ನಾಟಕ ಪ್ರವೇಶ ಮಾಡಿದೆ.

ಹೌದು! ಇದೀಗ ಕೊರೊನಾಗೆ ಆನಂದಯ್ಯ ಕೊಡುತ್ತಿರುವ ನಾಟಿ ಔಷಧಿಯ ಆಂಧ್ರದಲ್ಲಿ ದೊಡ್ಡಮಟ್ಟದ ಗುಣಗಾನ ನಡೆಯುತ್ತಿದೆ, ಇದೀಗ ಈ ಔಷಧಿಗೆ ಕರ್ನಾಟಕದಲ್ಲೂ ಬೇಡಿಕೆ ಹೆಚ್ಚಾಗಿದ್ದು, ಆಂಧ್ರದ ಗಡಿ ಭಾಗದ ಪ್ರದೇಶಗಳಾದ ಹಾಗೂ ಆಂಧ್ರಿಗರು ನೆಲೆಸಿರುವ ಬಳ್ಳಾರಿ, ಹೊಸಪೇಟೆ, ಹಂಪಿ ಹಾಗೂ ಆನೆಗೊಂದಿಯಲ್ಲಿ ವಿತರಣೆ ಮಾಡಲಾಗಿದೆ. ಈಗಾಗಲೇ ತಮ್ಮ ಆಧಾರ ಕಾರ್ಡ್ ಕೊಟ್ಟು ಹೆಸರನ್ನು ಜನರು ನೋಂದಣಿ ಮಾಡ್ತಾ ಇದ್ದಾರೆ. ಆಂಧ್ರದ ಆನಂದಯ್ಯ ತಯಾರಿಸಿದ ನಾಟಿ ಔಷಧಿಯನ್ನು ಜನರಿಗೆ ಸ್ವತಃ ಕಿಷ್ಕಿಂಧಾ ಹನುಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಗೋವಿಂದನಂದ ಸರಸ್ವತಿ ಸ್ವಾಮೀಜಿ ನೀಡುತ್ತಿದ್ದಾರೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಹನುಮನಹಳ್ಳಿ ಮತ್ತು ಆನೆಗೊಂದಿಯಲ್ಲಿ ಆಂಧ್ರದ ನೆಲ್ಲೂರು ಜಿಲ್ಲೆ ಕೃಷ್ಣಪಟ್ಟಣಂ ನಗರದ ಆನಂದಯ್ಯನ ಕೊರೊನಾ ನಾಟಿ ಔಷಧಿಯನ್ನ ಸಾರ್ವಜನಿಕರು ಪಡೆಯುತ್ತಿದ್ದಾರೆ.

ಸ್ವಾಮೀಜಿ ನಿನ್ನೆಯಿಂದ ಕೊಪ್ಪಳ ಮತ್ತು ಬಳ್ಳಾರಿ ‌ಜಿಲ್ಲೆ ವ್ಯಾಪ್ತಿಯ ಅಂಜನಾದ್ರಿ ಬೆಟ್ಟದ ಸುತ್ತಲಿನ ಗ್ರಾಮದಲ್ಲಿ ಆನಂದಯ್ಯನ ನಾಟಿ ಔಷಧಿ ಹಂಚಿಕೆ ಮಾಡುತ್ತಿದ್ದಾರೆ. ಆಂಧ್ರದಿಂದ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ನಾಟಿ ಔಷಧಿಯನ್ನು ಜನರಿಗೆ ಉಚಿತ ಹಂಚಿಕೆ ಮಾಡುತ್ತಿದ್ದಾರೆ. ಆಧಾರ ಕಾರ್ಡ್ ಪಡೆದು ಪ್ರತಿ ಒಂದು ಕುಟುಂಬಕ್ಕೆ ಒಂದು ಪ್ಯಾಕೆಟ್ ನೀಡಲಾಗುತ್ತಿದ್ದು, ಒಂದು ಪ್ಯಾಕೆಟ್ ನಲ್ಲಿನ ಔಷಧಿಯನ್ನು 7 ಜನರಿಗೆ ತೆಗೆದುಕೊಳ್ಳಬಹುದಂತೆ. ಜನರಂತೂ ಮುಗಿಬಿದ್ದು ಔಷಧಿ ಪಡೆಯುತ್ತಿದ್ದಾರೆ. ಮೂರನೇ ಅಲೆ ಭಯ ಇರುವ ಜನರಂತೂ ಗುಣಮುಖರಾದ್ರೆ ಸಾಕು ಹಾಗೂ ಕೊರೊನಾ ಸೋಂಕು ಹರಡದಿದ್ದರೆ ಸಾಕು ಎನ್ನುವಂತೆ ಆನಂದಯ್ಯನ ನಾಟಿ ಔಷಧಿಗೆ ಮೊರೆಹೋಗಿದ್ದಾರೆ. ಅದರಲ್ಲೂ ಈ ಭಾಗದಲ್ಲಿ ಆಂಧ್ರಿಗರು ಹೆಚ್ಚಾಗಿ ನೆಲೆಸಿರುವುದರಿಂದ ಆನಂದಯ್ಯ ಔಷಧಿಗೆ ಇನ್ನಷ್ಟು ಬೇಡಿಕೆ ಹೆಚ್ಚಾಗಿದೆ.

ಒಟ್ಟಾರೆ ಆನಂದಯ್ಯನ ನಾಟಿ ಔಷಧಿಯಿಂದ ಕೊರೊನಾ ಸೇರಿದಂತೆ ಇನ್ನಿತರ ಕಾಯಿಲೆಗಳು ವಾಸಿಯಾಗುತ್ತಿವೆ ಎನ್ನುವುದು ಜನರ ಅಭಿಪ್ರಾಯ ಆಂಧ್ರದ ಮೂಲೆ ಮೂಲೆ‌ಯಿಂದ‌ ನೆಲ್ಲೂರು ಜಿಲ್ಲೆಗೆ ಹೊರಟು ಔಷಧಿ‌ ಪಡೆಯುವವರ ಸಂಖ್ಯೆಯೂ ಹೆಚ್ಚಾಗಿದೆ. ಇದೀಗ ಕರ್ನಾಟಕದ ಆಂಧ್ರದ ಗಡಿ ಭಾಗದ ಬಳ್ಳಾರಿ, ಹೊಸಪೇಟೆ, ಹಂಪಿ, ಆನೆಗೊಂದಿ‌ ಭಾಗದಲ್ಲೂ ವಿತರಣೆಯಾಗುತ್ತಿದೆ‌. ಇದು ಎಲ್ಲರಲ್ಲೂ ಪರಿಣಾಮ ಬೀರುತ್ತಾ? ಕಾಯಿಲೆ ವಾಸಿಯಾಗುತ್ತಾ? ಎನ್ನುವ ಪ್ರಶ್ನೆಗಳು ಮೂಡಿವೆ.

The post ರಾಜ್ಯಕ್ಕೂ ಕಾಲಿಟ್ಟ ಆಂಧ್ರದ ಆನಂದಯ್ಯನ ನಾಟಿ ಔಷಧಿ: ಮುಗಿಬಿದ್ದರು ಗಡಿ ಜಿಲ್ಲೆಗಳ ಜನ appeared first on News First Kannada.

Source: newsfirstlive.com

Source link