ಬೆಂಗಳೂರು: ರಾಜ್ಯಕ್ಕೆ ಮುಂಗಾರು ಎಂಟ್ರಿ ಕೊಟ್ಟಿರುವ ಹಿನ್ನೆಲೆ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬೆಂಗಳೂರಿನ ಜನಪ್ರತಿನಿಧಿಗಳೊಂದಿಗೆ ಸಭೆ  ನಡೆಸಿದ್ರು.

ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಬಿಎಸ್​ವೈ, ಬೆಂಗಳೂರಲ್ಲಿ ಮಳೆ ವಿಕೋಪ ತಡೆಯಲು ಕೈಗೊಳ್ಳಲಾಗಿರುವ ಮುಂಜಾಗ್ರತಾ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು. ನಗರದಲ್ಲಿ 209 ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸ್ಥಳಗಳನ್ನ ಗುರುತಿಸಲಾಗಿದೆ. (58 ಅತಿ ಸೂಕ್ಷ್ಮ, 151 ಸೂಕ್ಷ್ಮ ಪ್ರದೇಶ) ಈ ಪ್ರದೇಶಗಳಲ್ಲಿ ಪ್ರವಾಹ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ರೂಪಿಸುವಂತೆ ಸಿಎಂ ಸೂಚಿಸಿದ್ದಾರೆ.

 

  • 8 ವಲಯಗಳಲ್ಲಿ ಶಾಶ್ವತ ನಿಯಂತ್ರಣ ಕೊಠಡಿಗಳಿದ್ದು, 63 ತಾತ್ಕಾಲಿಕ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ.
  • ದಿನದ 24 ಗಂಟೆಯೂ ಈ ನಿಯಂತ್ರಣಕೊಠಡಿಗಳು ಕಾರ್ಯನಿರ್ವಹಿಸಲಿದ್ದು, ಅನ್-ಸ್ಕಿಲ್ಡ್ ಕೂಲಿ, ಮೇಲ್ವಿಚಾರಕರು, ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ಅಗತ್ಯ ಸಲಕರಣೆಗಳನ್ನು ಸಂಗ್ರಹಿಸಲು ಕ್ರಮ ವಹಿಸಲಾಗುತ್ತಿದೆ.
  • ರಸ್ತೆ ಬದಿ ಮಳೆನೀರು ಚರಂಡಿಗಳ ಹೂಳು ತೆರವುಗೊಳಿಸುವುದು, ಅಡ್ಡಮೋರಿಗಳ ಹೂಳು ತೆಗೆಯುವುದು, ರಾಜ ಕಾಲುವೆಗೆ ಸಂಪರ್ಕಿಸುವ ಚರಂಡಿಗಳನ್ನು ಗುರುತಿಸಿ ಸುಸ್ಥಿತಿಯಲ್ಲಿಡಲು ಕ್ರಮ ವಹಿಸಲಾಗಿದೆ.
  • ದೊಡ್ಡ ಕಾಲುವೆಗಳಲ್ಲಿ 26 ವಾಟರ್ ಲೆವೆಲ್ ಸೆನ್ಸರ್ ಗಳನ್ನು ಅಳವಡಿಸಲಾಗಿದೆ.
  • ಬೆಂಗಳೂರು ಮೇಘ ಸಂದೇಶ ಆ್ಯಪ್​​ನಲ್ಲಿ ಮಳೆಯ ಪ್ರಮಾಣದ ಮಾಹಿತಿ ಲಭ್ಯ. ನೀರು ಸಂಗ್ರಹವಾಗಿರುವ ಸ್ಥಳಗಳು, ಜನರಿಗೆ ಸುರಕ್ಷಿತ ಮಾರ್ಗ ಬಳಕೆಯ ಕುರಿತು ಮಾಹಿತಿ ನೀಡುತ್ತದೆ.
  • ಬೆಂಗಳೂರು ನಗರದಲ್ಲಿ ತಡೆಗೋಡೆ ಇರುವ 440 ಕಿ.ಮೀ ಉದ್ದದ ರಾಜಕಾಲುವೆ ಪ್ರದೇಶಗಳ ವಾರ್ಷಿಕ ನಿರ್ವಹಣೆಗೆ ಕ್ರಮ ವಹಿಸಲಾಗಿದೆ.
  • ನಗರದ ಕೆರೆಗಳನ್ನು ದೈನಂದಿನ ಆಧಾರದಲ್ಲಿ ನಿರ್ವಹಿಸಲಾಗುತ್ತಿದ್ದು, ಮಳೆನೀರು ರಾಜಕಾಲುವೆಗಳ ಮೂಲಕ ಕೆರೆಗಳಿಗೆ ಹರಿಯುವಂತೆ ಮಾಡುವುದರಿಂದ ಪ್ರವಾಹ ತಪ್ಪಿಸಬಹುದು ಎಂದು ಸಿಎಂ ಸಲಹೆ ನೀಡಿದ್ದಾರೆ.

ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ್, ಕಂದಾಯ ಸಚಿವ ಆರ್. ಅಶೋಕ್, ವಸತಿ ಸಚಿವ ವಿ.ಸೋಮಣ್ಣ, ಅರಣ್ಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ, ಅಬಕಾರಿ ಸಚಿವ ಗೋಪಾಲಯ್ಯ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ, ಬಿಬಿಎಂಪಿ ಆಡಳಿತಾಧಿಕಾರಿ ಹಾಗೂ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

 

The post ರಾಜ್ಯಕ್ಕೆ ಮುಂಗಾರು ಎಂಟ್ರಿ: ಬೆಂಗಳೂರಲ್ಲಿ ಮಳೆ ಹಾನಿ ತಡೆಗೆ ಪೂರ್ವ ಸಿದ್ಧತೆ ಪರಿಶೀಲಿಸಿದ ಸಿಎಂ appeared first on News First Kannada.

Source: newsfirstlive.com

Source link