ಬೆಂಗಳೂರು: ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಗಳು ರದ್ದಾಗುತ್ತಾ ಅನ್ನೋ ಪ್ರಶ್ನೆಯೊಂದು ಮೂಡಿದೆ. ಕೇಂದ್ರ ಸಿಬಿಎಸ್‍ಇ 12ನೇ ತರಗತಿಯ ಪರೀಕ್ಷೆ ರದ್ದುಗೊಳಿಸಿದ ಬೆನ್ನಲ್ಲೇ ಈ ಪ್ರಶ್ನೆ ಉದ್ಬವವಾಗಿದೆ.

ಶೀಘ್ರದಲ್ಲಿ ಸೂಕ್ತ ತೀರ್ಮಾನ: ಸಿಬಿಎಸ್‍ಇ ಹನ್ನೆರಡನೇ ತರಗತಿಯ ಪರೀಕ್ಷೆಗಳನ್ನು ರದ್ದು ಮಾಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಈ ಕುರಿತಂತೆ ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿ ಶೀಘ್ರ ತೀರ್ಮಾನ ಪ್ರಕಟಿಸಲಾಗುತ್ತದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಈ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಸಚಿವರು, ಕೇಂದ್ರೀಯ ಮಂಡಳಿಯು ಪರೀಕ್ಷೆ ರದ್ದು ಮಾಡಿರುವ ಹಿನ್ನೆಲೆ, ರಾಜ್ಯ ಪಠ್ಯಕ್ರಮ ಅನುಸರಿಸಿ ಓದುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಸ್ಥಿತಿಗತಿಗಳು, ಮೌಲ್ಯಮಾಪನದ ಅವಶ್ಯಕತೆ ಕುರಿತಂತೆ ಈಗಾಗಲೇ ರೂಪಿತವಾಗಿರುವ ಅಭಿಪ್ರಾಯಗಳ ವಿಸ್ತೃತ ಚರ್ಚೆ ನಡೆಸಿ ವಿದ್ಯಾರ್ಥಿಗಳ ಆರೋಗ್ಯ ಹಾಗೂ ಭವಿಷ್ಯದ ಹಿತದೃಷ್ಟಿಯಿಂದ ಶೀಘ್ರದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.

ಸದ್ಯ ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಗಳನ್ನ ಮುಂದೂಡಲಾಗಿದೆ. ಕೊರೊನಾ ಹೆಚ್ಚಳ ಹಿನ್ನೆಲೆ ಪರೀಕ್ಷೆ ದಿನಾಂಕ ಇನ್ನೂ ಅಂತಿಮವಾಗಿಲ್ಲ. ಈಗ ಕೇಂದ್ರ ಸರ್ಕಾರ ಸಿಬಿಎಸ್‍ಇ 12ನೇ ತರಗತಿಗಳ ಪರೀಕ್ಷೆಗಳನ್ನ ರದ್ದು ಮಾಡಿದೆ. ಹೀಗಾಗಿ ರಾಜ್ಯದಲ್ಲಿ ಪರೀಕ್ಷೆ ನಡೆಸುವ ಕುರಿತು ಇನ್ನೆರಡು ದಿನಗಳಲ್ಲಿ ಸರ್ಕಾರದಿಂದ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಚಾಮರಾಜನಗರ ಪ್ರವಾಸದಲ್ಲಿದ್ದು, ಬೆಂಗಳೂರಿಗೆ ಬಂದ ಕೂಡಲೇ ತಜ್ಞರ ಜೊತೆ ಸಭೆ ನಡೆಸಲಿದ್ದಾರೆ. ತಜ್ಞರು, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಸಭೆ ಬಳಿಕ ಸರ್ಕಾರ ತನ್ನ ಅಂತಿಮ ನಿರ್ಧಾರ ಪ್ರಕಟಿಸಲಿದೆ.

ಪರೀಕ್ಷೆ ರದ್ದು: ಸಿಬಿಎಸ್‍ಇ 12ನೇ ತರಗತಿ ಪರೀಕ್ಷೆ ರದ್ದುಗೊಳಿಸಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಕೊರೋನಾ ಪರಿಸ್ಥಿತಿ ಹೀಗಿರುವಾಗ 12ನೇ ಕ್ಲಾಸ್ ರದ್ದು ಮಾಡಬಾರದೇಕೆ ಅಂತ ಸೋಮವಾರ ಸುಪ್ರೀಂಕೋರ್ಟ್ ಪ್ರಶ್ನಿಸಿತ್ತು. ಇದಕ್ಕೆ ಉತ್ತರಿಸಲು ಕೇಂದ್ರ ಸರ್ಕಾರ 3 ದಿನಗಳ ಸಮಯ ಪಡೆದಿತ್ತು. ಇವತ್ತು ಸಂಜೆ 5.30ರ ಹೊತ್ತಿಗೆ ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಸ್ಮೃತಿ ಇರಾನಿ ಸೇರಿದಂತೆ ತಜ್ಞರು ಮತ್ತು ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಿದ್ರು. ಸಭೆಯಲ್ಲಿ ವ್ಯಾಪಕ ಚರ್ಚೆ ನಡೀತು. ಬಳಿಕ, ಕೊರೊನಾ ಸಾಂಕ್ರಾಮಿಕ ರೋಗದ ಹಾವಳಿಗೆ ನಮ್ಮ ವಿದ್ಯಾರ್ಥಿಗಳು ತುತ್ತಾಗಬಾರದು ಅಂತ ಪರೀಕ್ಷೆಯನ್ನು ರದ್ದುಗೊಳಿಸುತ್ತಿರೋದಾಗಿ ಮೋದಿ ಹೇಳಿದ್ರು.

ವಿದ್ಯಾರ್ಥಿಗಳ ಆರೋಗ್ಯ, ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಹಾಗಾಗಿ, ವಿದ್ಯಾರ್ಥಿಸ್ನೇಹಿ ನಿರ್ಧಾರ ತೆಗೆದುಕೊಂಡಿದ್ದೇವೆ ಅಂತ ಪ್ರಧಾನಿ ಹೇಳಿದ್ರು. ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬಯಸಿದ್ದೇ ಆದಲ್ಲಿ ಕೊರೊನಾ ಸಹಜ ಸ್ಥಿತಿಗೆ ಬಂದ ಮೇಲೆ ಪರೀಕ್ಷೆ ತೆಗೆದುಕೊಳ್ಳಬಹುದು. ಇಲ್ಲವಾದಲ್ಲಿ ಸಿಬಿಎಸ್‍ಇ ಬೇಕಾದರೆ ಹೊಸ ಆಬ್ಜೆಕ್ಟೀವ್ ಮಾದರಿ ಬಳಸಬಹುದು. ಹಿಂದಿನ 3 ಇಂಟರ್ ನಲ್ ಪರೀಕ್ಷೆಗಳ ಅಂಕ ಆಧರಿಸಿ ಫಲಿತಾಂಶ ಕೊಡಬಹುದು ಅಂತ ಮೋದಿ ಹೇಳಿದ್ದಾರೆ. ಏಪ್ರಿಲ್ 18ರಂದು ಸಿಬಿಎಸ್‍ಇ 10ನೇ ಕ್ಲಾಸ್ ಪರೀಕ್ಷೆ ರದ್ದುಗೊಳಿಸಿ, 12ನೇ ಕ್ಲಾಸ್ ಎಕ್ಸಾಂ ಮುಂದೂಡಲಾಗಿತ್ತು. ಇದೀಗ ರದ್ದು ಮಾಡಲಾಗಿದೆ.

The post ರಾಜ್ಯದಲ್ಲಿಯೂ SSLC, ದ್ವಿತೀಯ ಪಿಯು ಪರೀಕ್ಷೆ ರದ್ದಾಗುತ್ತಾ? appeared first on Public TV.

Source: publictv.in

Source link