ಇಂದಿನಿಂದ ನಾಲ್ಕು ದಿನ ಕೃಷಿ ಮೇಳ
ಬೆಂಗಳೂರಿನಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಕೃಷಿ ಮೇಳ ನಡೆಯಲಿದೆ. ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯಲಿರುವ ಈ ಕೃಷಿ ಮೇಳದಲ್ಲಿ 28 ನೂತನ ತಂತ್ರಜ್ಞಾನ ಬಿಡುಗಡೆ ಮಾಡಲಾಗುತ್ತಿದೆ. ಕೊರೊನಾ ಮಾರ್ಗಸೂಚಿ ಪಾಲನೆಯೊಂದಿಗೆ ಕೃಷಿ ಮೇಳ ಆಯೋಜನೆ ಮಾಡಲಾಗಿದೆ. ಪ್ರತಿ ದಿನ 15 ರಿಂದ 20 ಸಾವಿರ ಜನರು ಮೇಳಕ್ಕೆ ಭೇಟಿ ನೀಡುವ ಸಾಧ್ಯತೆಯಿದ್ದು, 450 ವಿವಿಧ ಮಳಿಗೆಗಳನ್ನ ತೆರೆಯಲಾಗುತ್ತಿದೆ. ಈ ಬಾರಿ 1 ಕೋಟಿ ಮೌಲ್ಯದ ಹಳ್ಳಿಕಾರ್ ಹೋರಿ ಹಾಗೂ ಸುಮಾರು 3 ಲಕ್ಷ ಬೆಲೆ ಬಾಳುವ ದೊಡ್ಡಬಳ್ಳಾಪುರದ ಹೋತಗಳು ಮೇಳದ ಪ್ರಮುಖ ಆಕರ್ಷಣೆಯಾಗಲಿದೆ.
ಒನಕೆ ಓಬವ್ವ ಜಯಂತಿ ಆಚರಣೆ ಮುಂದೂಡಿಕೆ
ಇಂದು ರಾಜ್ಯಾದ್ಯಂತ ಚಿತ್ರದುರ್ಗದ ವೀರನಾರಿ ಒನಕೆ ಓಬವ್ವ ಜಯಂತಿ ಆಚರಣೆ ಮಾಡಲು ರಾಜ್ಯ ಸರ್ಕಾರ ಆದೇಶಿಸಿತ್ತು. ಆದ್ರೀಗ ಒನಕೆ ಓಬವ್ವ ಜಯಂತಿ ಆಚರಣೆಯನ್ನ ಮುಂದೂಡಲಾಗಿದೆ. ರಾಜ್ಯದಲ್ಲಿ 25 ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಹೀಗಾಗಿ ಓಬವ್ವ ಜಯಂತಿ ಆಚರಣೆಯನ್ನ ಮುಂದೂಡಲಾಗಿದೆ ಅಂತಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಹಿತಿ ನೀಡಿದೆ.
ಅಪ್ಪು ಪ್ರೇರಣೆ.. ನೇತ್ರದಾನಕ್ಕೆ ಸಹಿ ಹಾಕಿದ ಜಮೀರ್
ನಟ ಪುನೀತ್ ರಾಜಕುಮಾರ್ ತಮ್ಮ ನಿಧನದ ನಂತರ ನಾಲ್ಕು ಮಂದಿಗೆ ಬೆಳಕು ನೀಡಿದ್ದರು. ಸದ್ಯ ಇದೀಗ ಶಾಸಕ ಜಮೀರ್ ಅವರು ಕೂಡ ಇದೇ ಹಾದಿಯಲ್ಲಿ ಮುನ್ನಡೆದಿದ್ದು, ನೇತ್ರದಾನ ಪತ್ರಕ್ಕೆ ಸಹಿ ಹಾಕಿದ್ದಾರೆ. ಈ ಕುರಿತು ಪೋಟೋಗಳನ್ನು ತಮ್ಮ ಟ್ವೀಟ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮರಣದ ನಂತರ ಈ ದೇಹ ಮಣ್ಣಲಿ ಮಣ್ಣಾಗುವ ಮೊದಲು ಒಂದಿಬ್ಬರ ಬಾಳಿಗೆ ಬೆಳಕಾಗಬೇಕೆಂದು ನೇತ್ರದಾನ ಮಾಡಲು ನಿರ್ಧರಿಸಿ, ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ್ದೇನೆ ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಇಂದು ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ
ಇತ್ತೀಚೆಗ ನಡೆದ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಆಯ್ಕೆಯಾಗಿರುವ ನೂತನ ವಿಧಾನಸಭಾ ಸದಸ್ಯರು ಇಂದು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಿಂಧಗಿ ಕ್ಷೇತ್ರದ ರಮೇಶ್ ಭೂಸನೂರ್ ಹಾಗೂ ಹಾನಗಲ್ ಕ್ಷೇತ್ರದ ಶ್ರೀನಿವಾಸ ಮಾನೆಯವರು ವಿಧಾನಸೌಧದಲ್ಲಿಂದು ಬೆಳಗ್ಗೆ 11 ಗಂಟೆಗೆ ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇಬ್ಬರೂ ಶಾಸಕರಿಗೆ ಪ್ರಮಾಣ ವಚನವನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬೋಧಿಸಲಿದ್ದಾರೆ.
ನ.15ರಂದು ಸಿಎಂಗಳೊಂದಿಗೆ ಕೇಂದ್ರ ವಿತ್ತ ಸಚಿವೆ ಸಭೆ
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನವೆಂಬರ್ 15 ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಕೋವಿಡ್-19 ಎರಡನೇ ಅಲೆಯ ನಂತರದಲ್ಲಿ ದೇಶದ ಆರ್ಥಿಕತೆ ಬೆಳವಣಿಗೆಯ ಹಾದಿಯಲ್ಲಿದ್ದು, ಹೂಡಿಕೆ, ಮೂಲಸೌಕರ್ಯ ಸ್ಥಾಪನೆಗೆ ಸಂಬಂಧಿಸಿದಂತೆ, ಚರ್ಚೆ ಮಾಡಲಿದ್ದಾರೆ. ವರ್ಚ್ಯುಯಲ್ ಮೋಡ್ನಲ್ಲಿ ಮಧ್ಯಾಹ್ನ 3 ರಿಂದ 6 ಗಂಟೆಗೆ ಸಭೆ ನಡೆಯಲಿದೆ ಎಂದು ಕೇಂದ್ರಾಡಳಿತ ಪ್ರದೇಶದಲ್ಲಿರುವ ಆಡಳಿತಗಾರರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಹಲವು ರಾಜ್ಯಗಳಲ್ಲಿಂದು ಭಾರೀ ಮಳೆ ಸಾಧ್ಯತೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಹಲವು ಭಾಗಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ತಮಿಳುನಾಡಿನಲ್ಲಿ ಇಂದು ಮಾತ್ರವಲ್ಲದೇ ಮುಂದಿನ ಮೂರ್ನಾಲ್ಕು ದಿನಗಳ ಕಾಲ ವರುಣನ ಆರ್ಭಟ ಮುಂದುವರೆಯಲಿದೆ. ಇನ್ನು ತಿರುಚಿರಾಮಳ್ಳಿ, ಚೆನ್ನೈ ಮತ್ತು ಪುದುಚೇರಿ ಭಾಗಗಳಲ್ಲಿ ಭಾರೀ ಮಳೆಯಾಗಲಿದ್ದು, ಇದೇ ಪರಿಸ್ಥಿತಿ ಎರಡ್ಮೂರು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದೆ.
ನ.29ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭ
ನವೆಂಬರ್ 29ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದೆ ಎಂದು ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ತಿಳಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. ಕಳೆದ ವರ್ಷ ಕೋವಿಡ್ನಿಂದ ಚಳಿಗಾಲದ ಅಧಿವೇಶನ ನಡೆಯಲಿಲ್ಲ. ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಚಳಿಗಾಲದ ಅಧಿವೇಶನದ ದಿನಾಂಕ ನಿಗದಿ ಮಾಡಲಾಗಿದ್ದು, ನ.29 ರಿಂದ ಡಿಸೆಂಬರ್ 23ರವರೆಗೆ ಅಧಿವೇಶನ ನಡೆಯಲಿದೆ ಅಂತ ತಿಳಿಸಿದ್ದಾರೆ.
ಪ.ಬಂಗಾಳ ಸಚಿವ ಸುಬ್ರತಾ ಸಹಾ ಕಾರಿನ ಮೇಲೆ ದಾಳಿ
ಪಶ್ಚಿಮ ಬಂಗಾಳದ ಸಚಿವ ಸುಬ್ರತಾ ಸಹಾರ ವಾಹನದ ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿ ನಡೆಸಿದೆ. ಅಪಘಾತವೊಂದರಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ, ಅವರ ಮನೆಯಿಂದ ಹೊರಟಿದ್ದ ಸಮಯದಲ್ಲಿ ಗುಂಪೊಂದು ಸಚಿವರಿದ್ದ ಕಾರಿನ ಮೇಲೆ ಹತ್ತಾರು ಜನರು ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್ ದಾಳಿಯ ಸಂದರ್ಭದಲ್ಲಿ ಸಚಿವರಿಗೆ ಯಾವುದೇ ತೊಂದರೆಯಾಗಿಲ್ಲ. ಘಟನಾ ಸಂಬಂಧ ತನಿಖೆ ನಡೆಸಲಾಗುತ್ತಿದೆ ಅಂತಾ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜರ್ಮನ್ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳ: ಮತ್ತೆ ಲಾಕ್!?
ಜರ್ಮನಿಯಲ್ಲಿ ನಿನ್ನೆ ದಾಖಲೆ ಸಂಖ್ಯೆಯಲ್ಲಿ ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರವು ಮಾಹಿತಿ ನೀಡಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 39 ಸಾವಿರದ 676 ಕೊರೊನಾ ಪ್ರಕರಣ ದಾಖಲಾಗಿದೆ. ಒಂದು ವೇಳೆ ದೇಶದಲ್ಲಿ ಲಸಿಕಾ ಅಭಿಯಾನವನ್ನ ವೇಗಗೊಳಿಸದಿದ್ದರೆ ಮತ್ತೊಮ್ಮೆ ಲಾಕ್‌ಡೌನ್ ಮಾಡುವ ಅಗತ್ಯ ಎದುರಾಗಬಹುದು. ದೇಶದಲ್ಲಿ ಲಸಿಕೆ ಹಾಕಿಸಿಕೊಳ್ಳುತ್ತಿರುವವರ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ. ಹೀಗೆ ಮುಂದುವರೆದರೆ ಮರಣ ಪ್ರಮಾಣದಲ್ಲಿ ಏರಿಕೆಯಾಗಬಹುದು ಅಂತಾ ತಜ್ಞರು ತಿಳಿಸಿದ್ದಾರೆ.
ಕುವೈತ್ ನಟಿಯಿಂದ ಬಿಲ್ ಗೇಟ್ಸ್ಗೆ ಮದುವೆ ಪ್ರಪೋಸಲ್
ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ತಮ್ಮ ಪತ್ನಿ ಮೆಲಿಂದಾ ಗೇಟ್ಸ್ರಿಂದ ವರ್ಷದ ಪ್ರಾರಂಭದಲ್ಲೇ ಡಿವೋರ್ಸ್ ಪಡೆದಿದ್ದರು. ಹೀಗೆ ಪತ್ನಿಯಿಂದ ದೂರವಾದ ಬಿಲ್ ಗೇಟ್ಸ್ಗೆ ಸದ್ಯ ಮದುವೆ ಪ್ರಪೋಸಲ್ ಬಂದಿದೆ. ಕುವೈತ್ನ ನಟಿ ಕಮ್ ಗಾಯಕಿ ಆಗಿರುವ ಶಾಮ್ಸ್ ಬಂದರ್ ಅಲ್-ಅಸ್ಲಾಮಿ, ಬಿಲ್ ಗೇಟ್ಸ್ರನ್ನು ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. 41 ವರ್ಷದ ಅಸ್ಲಾಮಿ ತನ್ನ ಪತ್ನಿಯಿಂದ ದೂರವಾಗಿದ್ದಾರೆ. ಈ ಹಿನ್ನಲೆ ಬಿಲ್ ಗೇಟ್ಸ್ರನ್ನು ವರಿಸಲು ಅವರು ಮುಂದಾಗಿದ್ದಾರೆ.