ರಾಜ್ಯದಲ್ಲಿ ಮುಖ್ಯಮಂತ್ರಿಗಳು ಬದಲಾವಣೆಯಿಲ್ಲ ಅಂತಾ ಉಸ್ತುವಾರಿ ಅರುಣ್​ಸಿಂಗ್​ ಅವರೇನೋ ಸ್ಪಷ್ಟವಾಗಿ ಹೇಳಿದ್ದಾರೆ. ಮೊದಲನೆಯದಾಗಿ ಬದಲಾವಣೆ ವಿಚಾರವೇ ಅವರದ್ದಾಗಿರಲಿಲ್ವಾ? ಅಥವಾ ಆ ವಿಚಾರ ಚರ್ಚೆಗೆ ಬಂದ್ರೂ ಬದಲಾವಣೆ ಅವಶ್ಯಕತೆ ಇದೆ ಅಂತಾ ಅವರಿಗೆ ಅನ್ನಿಸಲಿಲ್ವಾ? ಹೈಕಮಾಂಡ್​ ನಿರ್ಧಾರದ ಹಿಂದಿರುವ ಕಾರಣಗಳೇನು..?

ನಾಯಕತ್ವ ಬದಲಾವಣೆ ಇಲ್ಲಾ ಅನ್ನೋ ಸಂದೇಶವನ್ನ ರಾಜ್ಯ ಉಸ್ತುವಾರಿಗಳೇನೋ ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಾದ್ರೆ, ನಾಯಕತ್ವ ಬದಲಾವಣೆಯ ವಿಷಯವೇ ಚರ್ಚೆಗೆ ಬಂದಿಲ್ವಾ ಅನ್ನೋ ಪ್ರಶ್ನೆಯೂ ನಿಮ್ಮಲ್ಲಿ ಮೂಡಬಹುದು. ವಿಷಯ ಏನಂದ್ರೆ

ಕಾರಣ 1
ಕೊರೊನಾ ಸಂಕಷ್ಟದ ನಡುವೆ ಪೊಲಿಟಿಕಲ್ ಡ್ರಾಮಾ ಬೇಡ..
ಈ ಹಂತದಲ್ಲಿ ಯಡಿಯೂರಪ್ಪ ಬದಲಾವಣೆ ಸಾಧ್ಯವಿಲ್ಲ ಅನ್ನೋದು ಪಕ್ಷದ ವರಿಷ್ಠರಿಗೆ ಮನವರಿಕೆಯಾಗಿದೆ. ಅದಕ್ಕೆ ಮೂಲ ಕಾರಣ ಕೋವಿಡ್​. ಇಡೀ ದೇಶದಲ್ಲಿ ಕೋವಿಡ್​ ಸಂಕಷ್ಟಕ್ಕೆ ಒಳಗಾಗಿ ಇಡೀ ದೇಶ ಸಮಸ್ಯೆ ಅನುಭವಿಸುತ್ತಿದೆ. ಈ ಹಂತದಲ್ಲಿ ಎಲ್ಲರ ಗುರಿ ಒಂದೇ. ಕೋವಿಡ್​ ಸಂಕಷ್ಟದಿಂದ ಹೊರಬರಬೇಕು ಎನ್ನುವುದು. ಪ್ರಧಾನಿ ಮೋದಿ ಕೂಡ ಇದನ್ನೇ ಹೇಳಿದ್ದಾರೆ. ಇದಕ್ಕಾಗಿ ಇಡೀ ವ್ಯವಸ್ಥೆಯೇ ಟೊಂಕ ಕಟ್ಟಿನಿಂತಿದೆ. ಈ ಹಂತದಲ್ಲಿ ಸಿಎಂ ಬದಲಾವಣೆ ಸೂಕ್ತವಲ್ಲ ಎಂದು ಅನ್ನಿಸಿರಬಹುದು.

ಕಾರಣ 2
ಸಿಎಂ ಬದಲಾದ್ರೆ, ಸರ್ಕಾರದ ವಿರುದ್ಧ ಅಪಪ್ರಚಾರದ ಭಯ..
ನಮಗೆಲ್ಲರಿಗೂ ತಿಳಿದಿರುವಂತೆ ಕೋವಿಡ್​​ ಸೋಂಕಿತರನ್ನು ಉಳಿಸಲು ಇಡೀ ವೈದ್ಯ ಸಮೂಹ ಜೊತೆಗೆ ನರ್ಸ್​ಗಳು, ಆಶಾ ಕಾರ್ಯಕರ್ತರು, ಪೊಲೀಸರು, ಜೊತೆಗೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಗಲಿರುಳು ಎನ್ನದೇ ದುಡಿಯುತ್ತಿದ್ದಾರೆ. ಎಷ್ಟೊ ಜನರು ಮನೆ ಮಠ ಎಲ್ಲವನ್ನೂ ಮರೆತೂ ಕೋವಿಡ್​ ನಿಯಂತ್ರಣಕ್ಕಾಗಿ ಹರಸಾಹಸ ಪಡುತ್ತಿದ್ದಾರೆ. ಕೋವಿಡ್​ ವಾರಿಯರ್​ಗಳು ಪ್ರಾಣವನ್ನೂ ಲೆಕ್ಕಿಸದೇ ಹೋರಾಡುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಬದಲಾವಣೆಯಂತಹ ಪ್ರಹಸನಕ್ಕೆ ಕೈ ಹಾಕಿದರೆ, ಬಿಜೆಪಿಗೆ ಮುಜುಗರವಾಗೋದಂತೂ ಸತ್ಯ. ಜೊತೆಗೆ ಜನರು ಕಷ್ಟದಲ್ಲಿದ್ದಾಗ ಅದನ್ನು ಬಗೆಹರಿಸುವುದು ಬಿಟ್ಟು ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ ಎಂಬ ಕೆಟ್ಟ ಹೆಸರು ಬರುವುದು ಪಕ್ಕಾ. ಹಾಗಾಗಿ ಬಿಜೆಪಿ ವರಿಷ್ಠರು ಇಂತಹ ನಿರ್ಧಾರದಿಂದ ಹಿಂದೆ ಸರಿದಿರಬಹುದು.

ಕಾರಣ 3
ಯಡಿಯೂರಪ್ಪ ರಾಜಕೀಯ ತೂಕದ ಪರ್ಯಾಯ ನಾಯಕರಿಲ್ಲ..
ರಾಜ್ಯ ಬಿಜೆಪಿಗೆ ಒಂದು ಸ್ಥಾನದಿಂದ ನೂರು ಸ್ಥಾನದವರೆಗೂ ಸಂಖ್ಯೆಯನ್ನು ಏರಿಸಿದ ಕೀರ್ತಿ ಯಡಿಯೂರಪ್ಪ ಅವರಿಗೇ ಸಲ್ಲುತ್ತದೆ. ಅವರ ಅವಿರತ ಹೋರಾಟದಿಂದಾಗಿ ದಕ್ಷಿಣ ಭಾರತದಲ್ಲಿ ಕಮಲ ಅರಳಲು ಸಾಧ್ಯವಾಗಿದೆ. ಆದರೆ, ಅವರಿಗೆ ಪರ್ಯಾಯ ನಾಯಕರು ಇರಬಹುದಾದರೂ ಅವರಿಗೆ ಸಾಮರ್ಥ್ಯಕ್ಕೆ ಹೋಲಿಕೆ ಮಾಡುವಂತ ನಾಯಕರು ಸದ್ಯಕ್ಕೆ ಬಿಜೆಪಿ ವರಿಷ್ಠರಿಗೆ ಕಾಣದಿರಬಹದು. ಕೋವಿಡ್​ನಂತಹ ಪರಿಸ್ಥಿತಿ, ಸರ್ಕಾರದ ಇಮೇಜ್​ ಹೆಚ್ಚು ಮಾಡುವಂತ ನಾಯಕ ಸದ್ಯಕ್ಕೆ ಅವರಿಗೆ ಕಾಣದಿರಬಹುದು.

ಕಾರಣ 4
ಸಿಎಂ ಬದಲಾವಣೆ ಲಿಂಗಾಯತ ಸಮುದಾಯಕ್ಕೆ ತಪ್ಪು ಸಂದೇಶ..
ಬಿ.ಎಸ್​.ಯಡಿಯೂರಪ್ಪ ಲಿಂಗಾಯತ ಸಮುದಾಯಕ್ಕೆ ಸೇರಿದವರು. ನಮ್ಮ ರಾಜ್ಯದಲ್ಲಿ ಲಿಂಗಾಯತರು ಬಹುಸಂಖ್ಯಾತರು. ಜೊತೆಗೆ ಈ ಸಮುದಾಯ ಯಡಿಯೂರಪ್ಪನವರನ್ನು ತಮ್ಮ ಸಮುದಾಯದ ಪ್ರಶ್ನಾತೀತ ನಾಯಕ ಎಂದು ಒಪ್ಪಿಕೊಂಡಿದೆ. ಪರಿಸ್ಥಿತಿ ಹೀಗಿರುವಾಗ ಕೇವಲ ವಯಸ್ಸಿನ ಕಾರಣ ನೀಡಿ ಯಡಿಯೂರಪ್ಪನವರನ್ನು ಬದಲಾವಣೆ ಮಾಡಿದರೆ, ಲಿಂಗಾಯಿತ ಸಮುದಾಯಕ್ಕೆ ತಪ್ಪು ಸಂದೇಶ ಹೋಗಬಹುದು. ಒಂದೇ ವೇಳೆ ಲಿಂಗಾಯಿತ ಸಮುದಾಯ ಅಸಮಧಾನಗೊಂಡರೆ, ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಹೆಚ್ಚಿನ ಹಾನಿ ಸಂಭವಿಸಬಹುದು ಎಂಬ ಅಂದಾಜಿನ ಮೇಲೆ ಸದ್ಯ ಸಿಎಂ ಬದಲಾವಣೆಯಂತಹ ಕಾರ್ಯಕ್ಕೆ ಕೈ ಹಾಕದಿರಲು ನಿರ್ಧರಿಸಿರಬಹುದು.

ಕಾರಣ 5
ಜಗದೀಶ್ ಶೆಟ್ಟರ್‌ರನ್ನು ಸಿಎಂ ಮಾಡಿದಾಗ ಪಕ್ಷಕ್ಕೆ ಸಿಗದ ಮತ ಲಾಭ..
ಒಂದೇ ವೇಳೆ ಮತ್ತೊಬ್ಬ ಲಿಂಗಾಯತರನ್ನೇ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದರೆ, ಆ ಸಮುದಾಯ ಪಕ್ಷದ ಜೊತೆ ಉಳಿಯಬಹುದಾದರೂ ಈ ಹಿಂದೆ ಕೈಗೊಂಡ ಅಂತಹ ನಿರ್ಧಾರ ಫಲ ನೀಡಿಲ್ಲ. ಜಗದೀಶ್​ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ ನಂತರ ನಡೆದ ಚುನಾವಣೆಯಲ್ಲಿ ಲಿಂಗಾಯತರು ಬಿಜೆಪಿಗಿಂತ ಹೆಚ್ಚಾಗಿ ಯಡಿಯೂರಪ್ಪ ಅವರು ಸ್ಥಾಪಿಸಿದ್ದ ಕರ್ನಾಟಕ ಜನತಾ ಪಾರ್ಟಿಗೆ ಹೆಚ್ಚಿನ ಒಲವನ್ನು ತೋರಿದ್ದರು. ಹಾಗಾಗಿ ಸಮುದಾಯದ ಬೇರೆ ನಾಯಕನನ್ನು ಆಯ್ಕೆ ಮಾಡಿದರೂ ಲಿಂಗಾಯತ ಮತಗಳು ಪಕ್ಷದ ಪರವಾಗಿ ಉಳಿಯಲಿವೆ ಎಂಬ ನಂಬಿಕೆ ಈ ಸಂದರ್ಭದಲ್ಲಿ ಇಲ್ಲದಿರಬಹುದು. ಆ ಕಾರಣಕ್ಕೂ ವರಿಷ್ಠರು ಸಿಎಂ ಬದಲಾವಣೆ ಪ್ರಸ್ತಾಪದಿಂದ ಹಿಂದೆ ಸರಿದಿರಬಹುದು.

ಕಾರಣ 6
ಸದ್ಯ ಶೇ.70 ರಷ್ಟು ಶಾಸಕರು ಯಡಿಯೂರಪ್ಪರ ಪರವಿದ್ದಾರೆ..
ಯಾವುದೇ ನಾಯಕನ ಮೇಲೆ ಆ ಪಕ್ಷದ ಶಾಸಕರು ವಿಶ್ವಾಸ ಕಳೆದುಕೊಂಡರೆ ನಾಯಕತ್ವ ಬದಲಾವಣೆ ವಿಚಾರ ಹೆಚ್ಚು ಚರ್ಚೆಗೆ ಬರಲಿದೆ. ಆದರೆ, ಸದ್ಯದ ಸಂದರ್ಭದಲ್ಲಿ ಬಿಜೆಪಿಯಲ್ಲಿ ಅಸಮಧಾನ ಇರುವುದು ನಿಜವಾದರೂ ಪಕ್ಷದಲ್ಲಿ ಹೆಚ್ಚಿನ ಶಾಸಕರು ಈಗಲೂ ಯಡಿಯೂರಪ್ಪನವರ ನಾಯಕತ್ವರ ಪರವಾಗಿದ್ದಾರೆ. ಮತ್ತೆ ಕೆಲವು ನಾಯಕರು ಯಡಿಯೂರಪ್ಪ ಪರವೂ ಇಲ್ಲ ವಿರೋಧವೂ ಇಲ್ಲ. ಅವರ ನಿಷ್ಠೆ ಪಕ್ಷದ ಮೇಲೆ ಹಾಗಾಗಿ ವಿರೋದಿಸುವವರ ಸಂಖ್ಯೆ ಕಡಿಮೆ ಇದೆ ಎನ್ನಲಾಗಿದೆ. ಹಾಗಾಗಿಯೇ ಪಕ್ಷದ ವರಿಷ್ಠರು ಯಾವುದೇ ತೀರ್ಮಾನ ಕೈಗೊಳ್ಳಲು ಹಿಂದೇಟು ಹಾಕುತ್ತಿರಬಹುದು.

ಕಾರಣ 7
ಅಸಮಾಧಾನಗೊಂಡ ಶಾಸಕರು ಸಹಿ‌ ಸಂಗ್ರಹಕ್ಕೆ ಮುಂದಾಗಿಲ್ಲ..
ಯಡಿಯೂರಪ್ಪನವರ ನಾಯಕತ್ವವನ್ನು ವಿರೋಧಿಸುತ್ತಿರುವವರು ದೆಹಲಿಯ ನಾಯಕರನ್ನ ಭೇಟಿ ಮಾಡಿ ತಮಗಾಗುತ್ತಿರುವ ಅನ್ಯಾಯ ಅಥವಾ ಯಾಕೆ ಸಿಎಂ ಬದಲಾವಣೆ ಮಾಡಬೇಕು ಎಂದು ಮನವರಿಕೆ ಮಾಡುತ್ತಿದ್ದಾರೆಯೇ ಹೊರತು ಯಾವುದೇ ಸಹಿ ಸಂಗ್ರಹಕ್ಕೆ ಮುಂದಾಗಿಲ್ಲ. ಕಾರಣ ಹೆಚ್ಚಿನ ಸಂಖ್ಯೆಯ ಶಾಸಕರು ಈಗಲೂ ಯಡಿಯೂರಪ್ಪ ಪರವಾಗಿದ್ದಾರೆ. ಒಂದು ವೇಳೆ ಕಡಿಮೆ ಶಾಸಕರಿಂದ ಸಹಿ ಸಂಗ್ರಹವಾದರೆ, ಅದು ನಾಯಕತ್ವ ವಿರೋಧಿಸುತ್ತಿರುವ ಬಣಕ್ಕೆ ಹಿನ್ನಡೆ ಎಂದೇ ಅರ್ಥೈಸಲಾಗುತ್ತೆ. ಇದು ಕೂಡ ಪಕ್ಷದ ವರಿಷ್ಠರು ಯಾವುದೇ ಸಾಹಸಕ್ಕೆ ಕೈ ಹಾಕದಿರಲು ಕಾರಣವಾಗಿರಬಹುದು.

ಕಾರಣ 8
ಸಿಎಂ ಬದಲಾಯಿಸಿದ್ರೆ, ಯಡಿಯೂರಪ್ಪರ ಜೊತೆಗೆ ಸಂಘರ್ಷಕ್ಕೆ ಕಾರಣ..
ಒಂದು ವೇಳೆ ವರಿಷ್ಠರು ಬದಲಾವಣೆ ಪ್ರಯತ್ನಕ್ಕೆ ಕೈಹಾಕಿದರೆ ಯಡಿಯೂರಪ್ಪ ಜೊತೆ ಸಂಘರ್ಷಕ್ಕೆ ಕಾರಣವಾಗಬಹುದು ಎಂಬ ಲೆಕ್ಕಾಚಾರವೂ ವರಿಷ್ಠರಲ್ಲಿ ಇರಬಹುದು. ಯಾಕಂದ್ರೆ ಸಿಎಂ ಬದಲಾವಣೆ ಚರ್ಚೆಯ ನಡುವೆಯೇ ಈಗಾಗಲೇ ವೀರಶೈಯ ಯುವ ವೇದಿಕೆಯ ಸದಸ್ಯರು ರಾಜ್ಯದ ಹಲವೆಡೆ ಯಡಿಯೂರಪ್ಪ ಪರವಾದ ಧನಿ ಎತ್ತಿದ್ದಾರೆ. ಕೆಲವು ಮಠಾಧೀಶರು ಕೂಡ ಯಡಿಯೂರಪ್ಪ ಬದಲಾಯಿಸದಂತೆ ಬಹಿರಂಗವಾದ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಬದಲಾವಣೆಯ ಪ್ರಯತ್ನ ನಡೆದರೆ ಇಂತಹ ಹೇಳಿಕೆಗಳು ತೀವ್ರ ಸ್ವರೂಪ ಪಡೆದುಕೊಳ್ಳಬಹುದು. ಇದು ಸಂಘರ್ಷಕ್ಕೆ ಕಾರಣವಾಗಬಹುದು ಹಾಗಾಗಿ ವರಿಷ್ಠರು ಯಾವುದೇ ತೀರ್ಮಾನ ಕೈಗೊಳ್ಳದೇ ಇರಬಹುದು.

ಕಾರಣ 9
ನಾಯಕತ್ವ ಬದಲಾವಣೆ ಆರ್‌ಎಸ್‌ಎಸ್‌ನ ಪ್ರಮುಖರು ಕುರಿತು ಮೌನ..
ನಮಗೆಲ್ಲಾ ತಿಳಿದಿರುವಂತೆ ಬಿಜೆಪಿಯಲ್ಲಿ ಯಾವುದೇ ಪ್ರಮುಖ ತೀರ್ಮಾನ ಕೈಗೊಳ್ಳಬೇಕಾದರೂ ಸಹ ಆರ್​ಎಸ್​ಎಸ್​ ಸಲಹೆಯನ್ನು ಪರಿಗಣಿಸಲೇಬೇಕು. ಅವರ ಸಲಹೆ ಮಾರ್ಗದರ್ಶನವಿಲ್ಲದೇ ಪಕ್ಷದ ಮುಖಂಡರೂ ಸಹ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ. ಸದ್ಯ ರಾಜ್ಯದಲ್ಲಿ ಎದ್ದಿರುವ ಬದಲಾವಣೆಯ ಕೂಗಿನ ಬಗ್ಗೆ ಆರ್​ಎಸ್​ಎಸ್​ ಮುಖಂಡರು ಯಾವುದೇ ಸಲಹೆ ನೀಡದೆ ಮೌನ ವಹಿಸಿದ್ದಾರೆ ಎನ್ನಲಾಗಿದೆ. ಇದು ಕೂಡ ಪಕ್ಷದ ವರಿಷ್ಠರು ಸಿಎಂ ಬದಲಾವಣೆಯಂತಹ ಯಾವುದೇ ಪ್ರಯತ್ನಕ್ಕೆ ಮುಂದಾಗದಿರಲು ಕಾರಣವಾಗಿರಬಹುದು.

ಒಟ್ನಲ್ಲಿ ಕಾರಣಗಳು ಏನೇ ಇದ್ದರೂ ಯಡಿಯೂರಪ್ಪನವರು ಸದ್ಯಕ್ಕಂತೂ ಸೇಫ್​ ಆಗಿದ್ದಾರೆ. ಈ ಅವಕಾಶವನ್ನು ಬಳಸಿಕೊಂಡು ಜನಪರವಾದ ಕೆಲಸಗಳನ್ನು ಮಾಡಿದರೆ ಅವರಿಗೂ ಕ್ಷೇಮ ರಾಜ್ಯದ ಜನರಿಗೂ ಕ್ಷೇಮ.

The post ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಬಿಜೆಪಿ ಹೈಕಮಾಂಡ್ ಹಿಂದೇಟು..? ಇಲ್ಲಿವೆ 9 ಕಾರಣ appeared first on News First Kannada.

Source: newsfirstlive.com

Source link