ಮೈಸೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮುಗಿದ ಅಧ್ಯಾಯವಾಗಿದ್ದು, ಹೈಕಮಾಂಡ್ ಹೀಗಾಗಲೇ ಈ ಬಗ್ಗೆ ಸ್ಪಷ್ಪಪಡಿಸಿದೆ. ಮತ್ತೆ ಪದೇ ಪದೇ ಈ ವಿಚಾರದ ಬಗ್ಗೆ ಚರ್ಚೆ ಬೇಡ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ನರಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, ಯಾರಾದರೂ ದೆಹಲಿಗೆ ಹೋಗಿದ್ದರೆ ಅದು ಅವರ ವೈಯಕ್ತಿಕ ವಿಚಾರ. ದೆಹಲಿಗೆ ಹೋದ ಕೂಡಲೇ ಅದಕ್ಕೆ ರಾಜಕೀಯ ಬಣ್ಣ ಹಚ್ಚುವುದು ಬೇಡ. ಇನ್ನೂ ಎರಡು ವರ್ಷ ಯಡಿಯೂರಪ್ಪ ಅವರೇ ಈ ರಾಜ್ಯದ ಸಿಎಂ ಆಗಿ ಇರುತ್ತಾರೆ. ಈ ಬಗ್ಗೆ ಮತ್ತೆ ಮತ್ತೆ ಗೊಂದಲ ಯಾರಿಗೂ ಬೇಡ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್​ ಪಕ್ಷಕ್ಕೆ ನೈತಿಕತೆ ಇಲ್ಲ..

ಇದೇ ವೇಳೆ ಕಾಂಗ್ರೆಸ್​​ ಪಕ್ಷದ ನಾಯಕರಿಗೆ ಬಿಜೆಪಿ ಆಡಳಿತ ಟೀಕಿಸುವ ನೈತಿಕತೆಯೇ ಉಳಿದಿಲ್ಲ. ಕೊರೊನಾ ಸಂಕಷ್ಟ ಕಾಲದಲ್ಲಿ ಜನರ ನೋವಿಗೆ ಸ್ಪಂದಿಸುವುದು ಮರೆತು ಹಾದಿ ಬೀದಿಯಲ್ಲಿ ನಿಂತು ಸಿಎಂ ಅಭ್ಯರ್ಥಿ ಬಗ್ಗೆ ಮಾತಾಡುತ್ತಿದ್ದಾರೆ. ಕಾಂಗ್ರೆಸ್ ಎಲ್ಲಾ ವಿಚಾರದಲ್ಲೂ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ನವರು ಬಿಜೆಪಿ ಬಗ್ಗೆ ಟೀಕಿಸುವುದು ಹಾಸ್ಯಾಸ್ಪದ ಎಂದರು.

ಹೈಕಮಾಂಡ್ ಚುನಾವಣೆ ಸ್ಪರ್ಧೆ ನಿರ್ಧರಿಸುತ್ತೆ..

ನಾನು ಚುನಾವಣೆಗೆ ನಿಲ್ಲಬೇಕೋ ಬೇಡ್ವೋ ಅಥವಾ ನಿಲ್ಲುವುದಾದರೆ ಯಾವ ಕ್ಷೇತ್ರದಿಂದ ನಿಲ್ಲಬೇಕು ಎಂಬುದು ಎರಡು ವರ್ಷದ ನಂತರ ತೀರ್ಮಾನವಾಗುತ್ತೆ. ಬಿಜೆಪಿ ಹೈಕಮಾಂಡ್ ಈ ಬಗ್ಗೆ ನಿರ್ಧಾರ ಮಾಡುತ್ತದೆ. ಅಲ್ಲಿಯವರೆಗೆ ಪಕ್ಷ ಸಂಘಟನೆಗೆ ಇಡೀ ರಾಜ್ಯ ಸುತ್ತುವುದು ನನ್ನ ಕೆಲಸ. ವರುಣಾ ಕ್ಷೇತ್ರದ ಕಾರ್ಯಕರ್ತರ ಜೊತೆ ನಿರಂತರ ಸಂಪರ್ಕದಲ್ಲಿರೋದು ನಿಜ. ಎಲ್ಲಾ ಕ್ಷೇತ್ರಗಳಲ್ಲೂ ಸಂಚರಿಸಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ಪಕ್ಷ ವಹಿಸಿರೋ ಜವಾಬ್ದಾರಿಯನ್ನು ನಾನು ನಿಭಾಯಿಸುತ್ತಿದ್ದೇನೆ ಎಂದು ತಿಳಿಸಿದರು.

ಇನ್ನು ಮೈ ಸೇವಾ ಫೌಂಡೇಶನ್ ನಿಂದ ತರಕಾರಿ ಹಾಗೂ ದಿನಸಿ‌ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿಜಯೇಂದ್ರ ಅವರು, ಮೃಗಾಲಯದಲ್ಲಿ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೃಗಾಲಯದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಆಹಾರ ಕಿಟ್ ವಿತರಣೆ ಮಾಡಿದರು. ಈ ವೇಳೆ ಪ್ರಾಧಿಕಾರಾದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಸೇರಿದಂತೆ ಇತರರು ಭಾಗಿಯಾಗಿದ್ದರು.

The post ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮುಗಿದ ಅಧ್ಯಾಯ- ಬಿ.ವೈ.ವಿಜಯೇಂದ್ರ appeared first on News First Kannada.

Source: newsfirstlive.com

Source link