
ಬಿ.ಸಿ.ನಾಗೇಶ್
ಪಠ್ಯಪುಸ್ತಕ ಪರಿಷ್ಕರಣೆ ಮುಗಿದಿದೆ, ಪುಸ್ತಕಗಳು ಪ್ರಿಂಟ್ ಕೂಡ ಆಗಿವೆ. ಹೀಗಾಗಿ ಈಗ ಆ ವಿಚಾರದ ಕುರಿತು ಚರ್ಚೆ ಅನಗತ್ಯ. ಅಂದು ಕುವೆಂಪು ಪಠ್ಯ ತೆಗೆದಾಗ, ಅವಮಾನ ಆದಾಗ ಪ್ರಶ್ನಿಸಿರಲಿಲ್ಲ. ಬಿಜೆಪಿಯನ್ನ ತೆಗಳುವುದೇ ಅವರ ಕೆಲಸ, ಅದನ್ನೇ ಮಾಡ್ತಿದ್ದಾರೆ ಅಷ್ಟೇ. ಇದರ ಹಿಂದೆ ಒಂದು ವ್ಯವಸ್ಥಿತ ಷಡ್ಯಂತ್ರವಿದೆ ಎಂದು ಸಚಿವ ಬಿ.ಸಿ.ನಾಗೇಶ್ ಆರೋಪಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆಯ ವಿವಾದ ತಾರಕ್ಕೇರಿದೆ. ನಾಡಿನ ಪ್ರಮುಖ ಸಾಹಿತಿಗಳ ಬರಹಗಳನ್ನು ಕೈಬಿಟ್ಟು ಹೆಗ್ಡೇವಾರ್, ಚಕ್ರವರ್ತಿ ಸೂಲಿಬೆಲೆಯವರ ಲೇಖನ ಸೇರ್ಪಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಸದ್ಯ ಈಗ ಈ ಗೊಂದಲಕ್ಕೆ ಸಂಬಂಧಿಸಿ ಶಿಕ್ಷಣ ಇಲಾಖೆ ಸಚಿವ ಬಿ.ಸಿ.ನಾಗೇಶ್ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ.
2017ರಲ್ಲಿ ನಡೆದ ಘಟನೆ ಬಗ್ಗೆ ಕೆಲವರು ಈಗ ಮಾತಾಡುತ್ತಿದ್ದಾರೆ. ವಾಟ್ಸಾಪ್ನಲ್ಲಿ ಬಂದಿದ್ದನ್ನು ಫಾರ್ವರ್ಡ್ ಮಾಡಿದ್ದಾರೆ. ಅಂದು ಉನ್ನತ ಮಟ್ಟದ ತನಿಖೆ ಆಗಿ ಬಿ ರಿಪೋರ್ಟ್ ಸಲ್ಲಿಕೆಯಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ಬಿ ರಿಪೋರ್ಟ್ ಸಲ್ಲಿಸಿದೆ. ರೋಹಿತ್ ನಿರ್ದೋಷಿ ಅಂತಾ ಕಾಂಗ್ರೆಸ್ ಅವಧಿಯಲ್ಲೇ ಹೇಳಲಾಗಿದೆ. ರೋಹಿತ್ ಚಕ್ರತೀರ್ಥ RSS ಹುಡುಗ ಅಂತ ವಿರೋಧ ಮಾಡಲಾಗಿತ್ತು. ನನಗೂ ಇದಕ್ಕೂ ಸಂಬಂಧವಿಲ್ಲ ಅಂತ ರೋಹಿತ್ ಸ್ಪಷ್ಟಪಡಿಸಿದ್ದಾರೆ. ಅದನ್ನು ಯಾರು ಬರೆದಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿಯವರ ಗಮನಕ್ಕೆ ತರ್ತೇನೆ. ನಾಡಗೀತೆಗೆ ಅವಮಾನ ಆಗಿದೆ ಅನ್ನೋದು ಶ್ರೀಗಳ ಮನಸ್ಸಿನಲ್ಲಿ ಇತ್ತು. ಈ ಬಗ್ಗೆ ನಿರ್ಮಲಾನಂದನಾಥಶ್ರೀಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ಸ್ವಾಮೀಜಿ ಸಹ ಹೇಳಿದ್ದಾರೆ. ರೋಹಿತ್ ಚಕ್ರತೀರ್ಥ ಬಗ್ಗೆ ವಿರೋಧ ಮಾಡುವುದು ಸರಿಯಲ್ಲ. ಹಂಪನಾ ಸೇರಿ ಕೆಲ ಸಾಹಿತಿಗಳು ಯಾಕೆ ಹೀಗೆ ಮಾಡ್ತಿದ್ದಾರೋ ಗೊತ್ತಿಲ್ಲ. ಸಾಹಿತಿಗಳ ಬಗ್ಗೆ ನನಗೆ ಅಪಾರ ಗೌರವ ಇದೆ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸಚಿವ ಬಿ.ಸಿ.ನಾಗೇಶ್ ಸುದ್ದಿಗೋಷ್ಠಿ ನಡೆಸಿ ರೋಹಿತ್ ಚಕ್ರತೀರ್ಥರ ಬಗ್ಗೆ ನಡೆಯುತ್ತಿರುವ ಚರ್ಚೆಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.