– ಕೊಪ್ಪಳ, ಬೀದರ್, ದಾವಣಗೆರೆಯಲ್ಲಿ ಭಾರೀ ಮಳೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕು ಪಡೆದುಕೊಂಡಿದ್ದು, ಹಲವೆಡೆ ಭಾರೀ ಮಳೆಯಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿಯಿಡೀ ಮಳೆಯಾಗಿದೆ. ಬೆಂಗಳೂರಿನಲ್ಲಿ ನಿನ್ನೆ ವಿರಾಮ ತೆಗೆದುಕೊಂಡಿದ್ದ ವರುಣ ದೇವ ಸಂಜೆಯಿಂದ ಅಬ್ಬರಿಸಲು ಶುರು ಮಾಡಿದ. ಇತ್ತ ಬಾಗಲಕೋಟೆ, ವಿಜಯಪುರ, ದಾವಣಗೆರೆ, ಕೊಪ್ಪಳ, ಬೀದರ್ ನಲ್ಲಿ ಮಳೆಯಾಗುತ್ತಿದ್ದು, ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ.

ವಿಜಯಪುರ ನಗರದ ಎಲ್‍ಬಿಎಸ್ ಮಾರ್ಕೆಟ್‍ಗೆ ಮಳೆ ನೀರು ನುಗ್ಗಿದೆ. ಪರಿಣಾಮ ಬಟ್ಟೆ, ಪುಸ್ತಕ ಹಾಗೂ ವಿವಿಧ ಅಂಗಡಿಗಳ ಮಾಲೀಕರು ಪರದಾಡುವಂತಾಯ್ತು. ಮಳೆ ನೀರನ್ನು ಹೊರಹಾಕಲು ಹರಸಾಹಸ ಪಡುವಂತಾಯ್ತು. ದಾವಣಗೆರೆಯಲ್ಲಿ ಭಾರೀ ಮಳೆಗೆ ಕಾಡಜ್ಜಿ ಬಳಿ ಇರುವ ಕೆಇಬಿ ಸ್ಟೇಷನ್‍ಗೆ ನೀರು ನುಗ್ಗಿದೆ. ಪರಿಣಾಮ ಕಚೇರಿಯಲ್ಲಿ ಇಬ್ಬರು ಸಿಲುಕಿದ್ದು ಅವರನ್ನು ರಕ್ಷಣೆ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯಲ್ಲೂ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಕೊಪ್ಪಳ ತಾಲೂಕಿನ ಮೆಳ್ಳಿಕೇರಿಯಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಭಾರೀ ಮಳೆಗೆ ಮಂಜುನಾಥ್ ಎಂಬವರಿಗೆ ಸೇರಿದ ಮನೆ ನೆಲಸಮವಾಗಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆ ಕುಸಿದಿದ್ದು, ಭಾರೀ ಅನಾಹುತವೊಂದು ತಪ್ಪಿದೆ.

ಇನ್ನು ಬೀದರ್ ನಲ್ಲೂ ಮಳೆ ಜೋರಾಗಿದೆ. ಬೀದರ್, ಔರಾದ್, ಹುಮ್ನಾಬಾದ್, ಚಿಟ್ಟಗುಪ್ಪ ಸೇರಿದಂತೆ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದೆ. ಜಿಲ್ಲಾ ರಂಗಮಂದಿರ ಜಲಾವೃತವಾಗಿದೆ. ರಂಗಮಂದಿರದಲ್ಲಿ 3 ರಿಂದ 4 ಅಡಿಯಷ್ಟು ನೀರು ನಿಂತಿದೆ. ತಗ್ಗು ಪ್ರದೇಶಗಳಿಗೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮ ಬಳಿಯ ಕಾರಹಳ್ಳಿ ಕ್ರಾಸ್ ನಲ್ಲಿ ಬೃಹತ್ ಮರಗಳು ರಸ್ತೆಗೆ ಉರುಳಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ರೆಡ್ ಅಲರ್ಟ್:
ಜುಲೈ 21 ರವರೆಗೆ ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆ ಆಗುತ್ತೆ ಅಂತ ರೆಡ್ ಅಲರ್ಟ್ ಮುಂದುವರಿದಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಗುಂಡಲಬಾಳದಲ್ಲಿ ನದಿ ಉಕ್ಕಿ ಗುಂಡಿಬೈಲ್ ಗ್ರಾಮದ ಹಲವು ಮನೆಗಳು ಜಲಾವೃತವಾಗಿವೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡದ ಪಶ್ಚಿಮ ಘಟ್ಟದಲ್ಲಿ ನಿರಂತರ ಮಳೆಯಾಗ್ತಿದ್ದು, ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಹಾಸನದ ಸಕಲೇಶಪುರ, ಆಲೂರು ಭಾಗದಲ್ಲಿ ಕಾರ್ಮೋಡ ಕವಿದಿದ್ದು, ಆಗಾಗ್ಗೆ ಮಳೆ ಆಗ್ತಿದೆ.

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಜೋರಾಗಿದ್ದು, ಕೃಷ್ಣಾ ನದಿಗೆಯಲ್ಲಿ 56 ಸಾವಿರ ಕ್ಯೂಸೆಕ್ ನೀರು ಹರಿದು ಬರ್ತಿದೆ. ಬೆಳಗಾವಿಯ ಚಿಕ್ಕೋಡಿ ಭಾಗದ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಯಡೂರು – ಕಲ್ಲೋಳ ಜಲಾವೃತವಾಗಿದೆ. ಇದನ್ನೂ ಓದಿ: ಭಾರೀ ಮಳೆ- ಕರಾವಳಿ, ಮಲೆನಾಡು ಭಾಗದಲ್ಲಿ ರೆಡ್ ಅಲರ್ಟ್ ಮುಂದುವರಿಕೆ

The post ರಾಜ್ಯದೆಲ್ಲೆಡೆ ಮತ್ತಷ್ಟು ಚುರುಕು ಪಡೆದ ಮುಂಗಾರು-ಬೆಂಗಳೂರಿನಲ್ಲಿ ರಾತ್ರಿಯಿಡೀ ವರ್ಷಧಾರೆ appeared first on Public TV.

Source: publictv.in

Source link