ಅಪ್ಪು ಮರೆಯಾದ ನೋವು ಅದು ಎಂದಿಗೂ ಮರೆಯಲಾಗದ ನೋವು. ಪೃಥ್ವಿಯಲ್ಲಿ ಅರಸನಂತೆ ಬಿಂದಾಸ್ ಆಗಿ ಬದುಕಿದ್ದ ಈ ಸ್ಯಾಂಡಲ್ವುಡ್ ಅರಸ, ಪರಮಾತ್ಮನಿಗೆ ಬೆಟ್ಟದ ಹೂ ನೀಡೋಕೆ ಆಕಾಶದಲ್ಲಿ ಚಲಿಸುವ ಮೋಡಗಳ ಜೊತೆ ಸಾಗಿ ಬಿಟ್ಟಿದ್ದಾರೆ. ಅಪ್ಪು ಎಂದಾಕ್ಷಣ ಕಣ್ಮುಂದೆ ಬರೋದೇ ಬೆಟ್ಟದ ಹೂ ಚಿತ್ರ. ಬೆಟ್ಟದ ಹೂ ಶೂಟಿಂಗ್ ವೇಳೆ ಅಪ್ಪು ಜೊತೆ ಕಳೆದ ಕ್ಷಣಗಳನ್ನ ಅಲ್ಲಿಯ ಜನರು ನೆನೆದು ಕಣ್ಣೀರು ಹಾಕುತ್ತಿದ್ದಾರೆ.
ಅಪ್ಪು ಚಿಕ್ಕವಯಸ್ಸಿನಲ್ಲಿಯೇ ನಟನೆಯ ಗೆಜ್ಜೆಗಳನ್ನ ಕಟ್ಟಿಕೊಂಡು ಬಂದವರು. ಅಪ್ಪು ಮೊದಲ ಸಿನಿಮಾ ಪ್ರೇಮದ ಕಾಣಿಕೆಯಾದ್ರೂ, ಅಪ್ಪು ಅನ್ನೋ ಕರುನಾಡಿನ ಈ ಯುವರತ್ನನಿಗೆ ಸಾಕಷ್ಟು ಜನಪ್ರಿಯತೆ, ಹೆಸರು ತಂದು ಕೊಟ್ಟಿದ್ದು, ಬೆಟ್ಟದ ಹೂ ಸಿನಿಮಾ.
ಅಂದು ಆ ಪುಟ್ಟ ಬಾಯಲ್ಲಿ ಶೆರ್ಲಿ ಮೇಡಂ ಅನ್ನೋದು, ರಾಮಾಯಣ ಬುಕ್‍ಗಾಗಿ ಹಣವನ್ನ ಕೂಡಿಟ್ಟ ಬೆಟ್ಟದ ಹೂವಿನ ದೃಶ್ಯಗಳು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.
ಬೆಟ್ಟದ ಹೂ ಸಿನಿಮಾ ಶೂಟಿಂಗ್ ವೇಳೆ, ಕಾಫಿನಾಡಿನ ದಟ್ಟ ಹಸಿರ ಕಾನನದಲ್ಲಿ ಅಪ್ಪು ಹಾಕಿದ್ದ ಹೆಜ್ಜೆ ಗುರುತುಗಳು ಇಂದಿಗೂ ಅಚ್ಚಳಿಯದೆ ಉಳಿದಿದೆ. ಬೆಟ್ಟದ ಹೂ ಚಿತ್ರದ ಪಳೆಯುಳಿಕೆಗಳು ಮಲೆನಾಡಲ್ಲಿ ಇಂದಿಗೂ ಜೀವಂತವಾಗಿವೆ. ಪುನೀತ್ ಓದಿದ ಶಾಲೆ, ರಾಮಾಯಣ ಪುಸ್ತಕ ಖರೀದಿಸಿದ ಅಂಗಡಿ, ಪ್ರಾರ್ಥನೆ ಮಾಡಿದ ಶಾಲಾ ಆವರಣ ಇಂದಿಗೂ ಹಾಗೇ ಇದೆ.
ಹುಟ್ಟಿದ ಒಂದೇ ವರ್ಷಕ್ಕೆ ಅಪ್ಪನ ಜೊತೆ ತೆರೆ ಹಂಚಿಕೊಂಡ ಪುನೀತ್, ನಟಿಸಿದ ಚಿತ್ರಗಳೆಲ್ಲಾ ಸೂಪರ್ ಹಿಟ್. ಅಪ್ಪು ಕಾಫಿನಾಡಿಗೆ ಬಂದಾಗೆಲ್ಲಾ ಸ್ನೇಹಿತರು, ಸಂಬಂಧಿಗಳ ಜೊತೆ ಆ ಚಿತ್ರದ್ದೇ ಹೆಚ್ಚು ಮಾತುಕತೆ ನಡೆಸುತ್ತಿದ್ರು.
ಬದಲಾದ ಕಾಲಘಟ್ಟದಲ್ಲಿ ಒಂದಷ್ಟು ಬದಲಾವಣೆಗೊಂಡಿವೆ ಅನ್ನೋದು ಬಿಟ್ರೆ, ಅಂದು ಚಿತ್ರೀಕರಣಗೊಂಡ ಸ್ಥಳಗಳು ಹೇಗಿದ್ದವು ಇಂದಿಗೂ ಹಾಗೇ ಇದೆ. ಪುನೀತ್ ಓದುತ್ತಿದ್ದ ಶಾಲೆ, ತಾಯಿ ಶಾರದೆ ಲೋಕ ಪೂಜಿತ ಜ್ಞಾನದಾತು ನಮೋಸ್ತುತೆ ಎಂದು ಪ್ರಾರ್ಥನೆ ಸಲ್ಲಿಸಿದ ಜಾಗ, ಶೆರ್ಲಿ ಮೇಡಂಗಾಗಿ ಬೆಟ್ಟಕ್ಕೆ ಹೋಗಿ ತರುತ್ತಿದ್ದ ಹೂವಿನ ಬೆಟ್ಟ, ಹಣ ಕೂಡಿಟ್ಟು ರಾಮಾಯಣ ಪುಸ್ತಕ ಖರೀದಿಸಲು ಅಂಗಡಿ ಬಾಗಿಲಿಗೆ ಹೋಗಿ ಬರುತ್ತಿದ್ದ ಅಂಗಡಿ ಎಲ್ಲವೂ ಇಂದಿಗೂ ಹಾಗೇ ಇದೆ. ಆದರೆ, ಅಪ್ಪು ಮಾತ್ರ ಇಲ್ಲ.
ಇನ್ನು ಬೆಟ್ಟದ ಹೂ ಚಿತ್ರದ ಹೈಲೈಟ್ ಅಂದ್ರೆ ಎರಡು ರೂಪಾಯಿ ಹಣ ಹಾಗೂ ರಾಮಾಯಣ ಪುಸ್ತಕ. ಆ ಪುಸ್ತಕ ಖರೀದಿಗೆ ಎಳೆ ಹುಡ್ಗ ಪುನೀತ್ ಮಾಡುವ ಹೋರಾಟ ಎಷ್ಟು ಅನ್ನೋದು ಗೊತ್ತಿಲ್ಲದವರೇ ವಿರಳ. ಚಿತ್ರಕ್ಕಾಗಿ ಅಂದು ಪುಸ್ತಕದ ಮಳಿಗೆಯಾಗಿದ್ದ ಅಂಗಡಿ, 35 ವರ್ಷಗಳಿಂದ ಚಿಲ್ಲರೆ ಅಂಗಡಿಯಾಗೇ ಉಳಿದಿದೆ.
ಸರಿಯಾಗಿಯೇ ಹಲ್ಲುವಬಾರದ ಸಮಯದಲ್ಲಿಯೇ ಕರುನಾಡ ಮಂದಿಗೆ ಪ್ರೇಮದ ಕಾಣಿಕೆಯನ್ನ ನೀಡಿದ್ದ ಅಪ್ಪುಗೆ , ವೃತ್ತಿ ಜೀವನದಲ್ಲಿ ಬೆಟ್ಟದ ಹೂ, ಬಹುದೊಡ್ಡ ಯಶಸ್ಸು, ಜನಪ್ರಿಯತೆ ತಂದು ಕೊಟ್ಟಿತ್ತು. ಈ ಚಿತ್ರದ ಅಭಿನಯಕ್ಕಾಗಿ ಅಪ್ಪುಗೆ ಬಾಲ ಕಲಾವಿದನಾಗಿರಬೇಕಾದರೇ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿತ್ತು. 1985ರಲ್ಲಿ ಬಿಡುಗಡೆಯಾಗಿದ್ದ ಬೆಟ್ಟದ ಹೂ ಸಿನಿಮಾ ಟಿವಿಯಲ್ಲಿ ಪ್ರಸಾರ ಮಾಡಿದ್ರೆ, ಮನೆ ಮಂದಿಯಲ್ಲಾ ಇಂದು ತಮ್ಮ ಮಕ್ಕಳ ಜೊತೆ ಕೂತು ಸಿನಿಮಾ ನೋಡ್ತಾರೆ. ಪುನೀತ್ ರಾಜ್ಕುಮಾರ್ಗೆ ಹತ್ತು ವರ್ಷವಿದ್ದಾಗಲೇ ‘ಬೆಟ್ಟದ ಹೂವು’ ಸಿನಿಮಾ ಚಿತ್ರೀಕರಿಸಲಾಗಿತ್ತು. ಸಿನಿಮಾ ರಿಲೀಸ್ ಆಗಿ ಇಂದಿಗೆ 36 ವರ್ಷವಾದ್ರೂ ಸಿನಿಮಾ ತನ್ನ ಹೊಳಪನ್ನ ಕಳೆದುಕೊಂಡಿಲ್ಲ.
ಹೀಗೆ ಪುನೀತ್ಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದ್ದ ಬೆಟ್ಟದ ಹೂ ಸಿನಿಮಾ ಶೂಟ್ ಆಗಿದ್ದ ಸ್ಥಳವನ್ನ ಕೂಡ ಪುನೀತ್ ಮರೆತ್ತಿಲ್ಲ. ಆ ಸ್ಥಳಕ್ಕೆ 33 ವರ್ಷಗಳ ನಂತರ ವಿಸಿಟ್ ಕೊಟ್ಟು ಮೂರು ದಶಕಗಳ ಹಿಂದಿನ ನೆನೆಪಿನ ಬುತ್ತಿಯನ್ನ ಬಿಚ್ಚಿಟ್ಟಿದ್ರು.
ಪ್ರವಾಸ ಪ್ರಿಯನಾಗಿದ್ದ ಪುನೀತ್ ರಾಜ್‍ಕುಮಾರ್, ತಾವು ಶೂಟಿಂಗ್ ನಡೆಸಿದ ಸ್ಥಳಗಳಿಗೆ ಹೋಗಿ ಹಳೆಯ ನೆನಪನ್ನ ಮೆಲುಕು ಹಾಕುತ್ತಾರೆ. ನಟಸಾರ್ವಭೌಮ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಚಿಕ್ಕಮಗಳೂರಲ್ಲಿ ಅತ್ತಿಗುಂಡಿ ಕಡೆಯಿಂದ ಪ್ರಯಾಣಿಸುತ್ತಿದ್ದರು. ಆಗ ಅವರಿಗೆ ‘ಬೆಟ್ಟದ ಹೂವು’ ಸಿನಿಮಾದ ಚಿತ್ರೀಕರಣ ನಡೆದ ಸ್ಥಳ ನೆನಪಾಗಿದೆ. ಕೂಡಲೇ ಕಾರನ್ನು ಅತ್ತಿಗುಂಡಿಯಲ್ಲಿ ಶೂಟಿಂಗ್ ಸೆಟ್ ಕಡೆ ತಿರುಗಿಸಿ, ಬೆಟ್ಟದ ಹೂ ಸಿನಿಮಾ ಶೂಟಿಂಗ್ ನಡೆದ ಸ್ಥಳಕ್ಕೆ ಹೋಗಿದ್ರು. ನಂತರ ಅಲ್ಲಿಯ ಸ್ಥಳೀಯರ ಸಹಾಯದಿಂದ ಶೂಟ್ ನಡೆದ ಸ್ಥಳಕ್ಕೆ ಭೇಟಿ ಕೊಟ್ಟಿದ್ರು.
ಹೊಸಪೇಟೆಗೂ ಅಪ್ಪುಗೂ ಅವಿನಾಭಾವ ಸಂಬಂಧ
ಹೊಸಪೇಟೆಗೂ ಪುನೀತ್ಗೂ ಒಂತರ ಬಿಡಿಸಲಾಗದ ನಂಟು. ದೊಡ್ಮನೆ ಹುಡ್ಗ ಸಿನಿಮಾದ ಹಾಡಿನ ಚಿತ್ರೀಕರಣ ಹೊಸಪೇಟೆಯಲ್ಲಿಯೇ ನಡೆದಿತ್ತು. ಈ ಸ್ಥಳಕ್ಕೆ ಪುನೀತ್ ಹಲವು ಬಾರಿ ಭೇಟಿ ಕೊಟ್ಟಿದ್ರು. ಇದೀಗ ಅಪ್ಪು ಅಭಿಮಾನಿಗಳು, ಹೊಸಪೇಟೆಯಲ್ಲಿ ಪುನೀತ್ ರಾಜ್‍ಕುಮಾರ್ ಸರ್ಕಲ್ ನಿರ್ಮಾಣಕ್ಕೆ ಒತ್ತಡ ಹಾಕುತ್ತಿದ್ದಾರೆ.
ಮುಖ್ಯ ಸರ್ಕಲ್ ಒಂದಕ್ಕೆ ಪುನೀತ್ ರಾಜ್‍ಕುಮಾರ್ ಸರ್ಕಲ್ ಅಂತ ನಾಮಕರಣ ಮಾಡುವಂತೆ ಬೇಡಿಕೆ ಮುಂದಿಟ್ಟಿದ್ದಾರೆ. ಹೊಸಪೇಟೆಯ ಶಾನಭಾಗ ವೃತ್ತದಲ್ಲಿ ನಟ ಪುನೀತ್ ರಾಜಕುಮಾರ್ ಪುತ್ತಳಿ ಹಾಗೂ ಸರ್ಕಲ್ ನಿರ್ಮಾಣಕ್ಕೆ ಒತ್ತಾಯ ಮಾಡಿದ್ದಾರೆ.
ಕಿಷ್ಕಿಂದ ಅಂಜನಾದ್ರಿ ಶ್ರದ್ಧಾಕೇಂದ್ರ ಅಂದ್ರೆ ಅಪ್ಪುಗೆ ಅಚ್ಚುಮೆಚ್ಚು
ಪವರ್ ಪುನೀತ್ ರಾಜ್ ಕುಮಾರ್ ಅವರಿಗೆ ತಾಲ್ಲೂಕಿನ ಕಿಷ್ಕಿಂದಾ ಅಂಜನಾದ್ರಿ ಅತ್ಯಂತ ಇಷ್ಟವಾದ ಶ್ರದ್ಧಾಕೇಂದ್ರ. ಈ ಭಾಗದಲ್ಲಿ ‘ರಣವಿಕ್ರಮ’, ‘ದೊಡ್ಮನೆ ಹುಡುಗ’, ‘ಜೇಮ್ಸ್’ ಸೇರಿದಂತೆ ಹಲವು ಚಿತ್ರಗಳನ್ನು ಚಿತ್ರೀಕರಣ ಮಾಡಲಾಗಿತ್ತು. ಈ ಸಂದರ್ಭದಲ್ಲಿ ನಿತ್ಯವೂ ಅಂಜನಾದ್ರಿ ಬೆಟ್ಟವನ್ನು ಹತ್ತಿ ಆಂಜನೇಯನ ದರ್ಶನ ಪಡೆಯುತ್ತಿದ್ದರು.
ಈ ಸ್ಥಳಕ್ಕೆ ಪುನೀತ್ ಹಲವು ಭಾರಿ ಭೇಟಿ ನೀಡಿದ್ರು. ಅದರಲ್ಲೂ ಅಪ್ಪು, ಜೇಮ್ಸ್ ಸಿನಿಮಾದ ಅಂತಿಮ ಚಿತ್ರೀಕರಣಕ್ಕಾಗಿ ಪೇಟೆ ಭಾಗಕ್ಕೆ ಆಗಮಿಸಿದ ಸಂದರ್ಭದಲ್ಲಿ ಅಂಜನಾದ್ರಿಗೆ ಬಂದು ಆಂಜನೇಯನ ದರ್ಶನ ಪಡೆದು ಈ ಭಾಗದ ಸೇತುವೆ ಮಣಿಭದ್ರೇಶ್ವರ ತಳವಾರಘಟ್ಟ ಆನೆಗೊಂದಿ ಭಾಗವನ್ನು ವೀಕ್ಷಿಸಿ ತೆರಳಿದ್ದರು.ಗಂಗಾವತಿ ತಾಲ್ಲೂಕಿನ ಆನೆಗೊಂದಿ ಅಂಜನಾದ್ರಿ ರಾಣಾಪುರ್ ಲೇಕ್ ವಾಣಿ ಭದ್ರೇಶ್ವರ ಮಲ್ಲಾಪುರ ಏಳು ಗುಡ್ಡ ಪ್ರದೇಶ ಹೀಗೆ ಹಲವಾರು ಸ್ಥಳಗಳನ್ನು ಪುನೀತ್ ರಾಜ್ ಕುಮಾರ್ ಸುತ್ತಾಡಿದ್ದರು.
ಹೀಗೆ ಅಪ್ಪು, ಶೂಟಿಂಗ್ ಮಾಡಿದ ಸ್ಥಳಗಳಿಗೆ ಮತ್ತೆ ಮತ್ತೆ ಹೋಗುತ್ತಿದ್ದರು. ಆದ್ರೆ ಪರಮಾತ್ಮ, ಶೂಟಿಂಗ್ ಸ್ಥಳಗಳಿಗೆ ಹೋಗಿ ಬರಿಗೈಯಲ್ಲಿ ಹಿಂದಿರುಗುತ್ತಿರಲಿಲ್ಲ. ಅಲ್ಲಿಯ ಸ್ಥಳೀಯರ ಜೊತೆ ಬೆರೆತು, ಅವರ ಕಷ್ಟಗಳಿಗೂ ಹೆಗಲು ಕೊಡ್ತಿದ್ರು. ರಣವಿಕ್ರಮ ಚಿತ್ರೀಕರಣ ಸಂದರ್ಭದಲ್ಲಿ ಗಂಗಾವತಿಯ ಹಿರೇಜಂತಕಲ್ ಪ್ರೌಢಶಾಲೆಗೆ ಸುಮಾರು 3ಲಕ್ಷ ಹಾಗೂ ಜೇಮ್ಸ್ ಚಿತ್ರೀಕರಣ ಸಂದರ್ಭದಲ್ಲಿ ಮಲ್ಲಾಪುರ ಶಾಲೆಗೆ ಸುಮಾರು 2 ಲಕ್ಷ ಹಣವನ್ನ ಕೊಟ್ಟು ಉಧಾರತೆ ಮೆರೆದಿದ್ರು.
ಅಂದು ಮಯೂರ ಸಿನಿಮಾದಲ್ಲಿ ಡಾ.ರಾಜ್‍ಕುಮಾರ್ ಸಮಯದಲ್ಲಿ ಅಪ್ಪುವಿನ ಜನನವಾಗಿತ್ತು. ಪ್ರೇಮದ ಕಾಣಿಕೆಯ ಮೂಲಕ ಚಂದನವನದ ಮನೆಗೆ ಈ ದೊಡ್ಮನೆ ಹುಡುಗನ ಎಂಟ್ರಿಯಾಗಿತ್ತು. ಅಪ್ಪು ಮೂಲಕ ಪರದೆಯ ಮೇಲೆ ಹೀರೋ ಆಗಿ ಮಿಂಚಿದ್ರು. ವಿವಿಧ ನಿರ್ದೇಶಕರು ಬರೆದಿದ್ದ 46 ವಿವಿಧ ಸ್ಕ್ರಿಪ್ಟ್ಗಳಿಗೆ ಜೀವ ತುಂಬಿದ್ರು. ಆದ್ರೆ ದೇವರು ಬರೆದ ಒಂದೇ ಒಂದು ಸ್ಕ್ರಿಪ್ಟ್ಗೆ ಅಪ್ಪು ಮರುಮಾತನಾಡಲಾಗದೆ, 46ನೇ ವಯಸ್ಸಿಗೆ ಉಸಿರು ನಿಲ್ಲಿಸಲೇ ಬೇಕಾಯಿತು.
46 ಸಿನಿಮಾಗಳಲ್ಲಿ ನಟಿಸಿದ್ದ ಅಪ್ಪು, 46ನೇ ವರ್ಷಕ್ಕೆ ಜೀವನದ ಪಯಣವನ್ನ ಮುಗಿಸಲೇ ಬೇಕಾಯಿತು. ಅಂದು ರಾಮಾಯಣ ಪುಸ್ತಕ ಖರೀದಿಸಿದ್ದ ಅಂಗಡಿ, ಓದಿದ ಶಾಲೆ ,ಓಡಾಡಿದ ಜಾಗ ಎಲ್ಲವು ಇಂದು ಹಾಗೆಯೇ ಇದೆ. ಆದ್ರೆ ಆ ಬೆಟ್ಟದ ಹೂ ಮಾತ್ರ ಬಾಡಿ ಹೋಗಿದೆ.