ಬೆಂಗಳೂರು: ಜನ ಸಾಮಾನ್ಯರ ಪ್ರಾಣವನ್ನು ಉಳಿಸಲು ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿ ಕಾಂಗ್ರೆಸ್ ಪಕ್ಷದ ನಾಯಕರು ಇಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಈ ವೇಳೆ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ರಾಜ್ಯದ ಜನರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವಂತೆ ಆಗ್ರಹಿಸಿದರು.

ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಸಿದ್ಧರಾಮಯ್ಯ ಅವರು, ಇಂದು ಸಾಂಕೇತಿಕವಾಗಿ ಸರ್ಕಾರದ ವೈಫಲ್ಯಗಳ ವಿರುದ್ಧ ಪ್ರತಿಭಟನೆ ಮಾಡಿದ್ದೇವೆ. ಸರ್ಕಾರ ಕೋವಿಡ್ ನಿಯಂತ್ರಿಸುವಲ್ಲಿ, ತಡೆಯುವಲ್ಲಿ ಸರ್ಕಾರ ವಿಫಲ ಆಗಿದೆ. ಹಲವು ರಾಷ್ಟ್ರಗಳಿಗೆ ಕೋವಿಡ್ ನಿಂದ ಸಮಸ್ಯೆ ಆಗಿದೆ. 2019 ಡಿಸೆಂಬರ್ ನಿಂದ ಈ ಸಮಸ್ಯೆ ಎದುರಾಗಿದೆ. ಈಗ ಎರಡನೇ ಅಲೆ ನಾವು ನೋಡ್ತಿದ್ದೀವಿ. ಮೊದಲನೇ ಅಲೆಯ ನಂತರ ಎರಡನೇ ಅಲೆ ಬರುತ್ತೆ ಅಂತ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮಾಹಿತಿ ಇತ್ತು.

ತಜ್ಞರು ಸರ್ಕಾರವನ್ನು ಎಚ್ಚರಿಸಿದ್ದರೂ ಸರ್ಕಾರ ಉದಾಸೀನ ಮಾಡಿತು. ಆದ್ದರಿಂದಲೇ ಎರಡನೇ ಅಲೆಯಲ್ಲಿ ನೂರಾರು ಜನ ಸಾಯುತ್ತಿದ್ದಾರೆ. ಇದಕ್ಕೆ ನೇರ ಹೊಣೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಂದು ಆರೋಪಿಸಿದರು.

ಎರಡು ಸರ್ಕಾರಗಳು ಎರಡನೇ ಅಲೆ ಎದುರಿಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಿಲ್ಲ. ಆಕ್ಸಿಜನ್, ರೆಮ್ಡಿಸಿವಿರ್, ಬೆಡ್, ವೆಂಟಿಲೇಟರ್, ಐಸಿಯು ಯಾವುದನ್ನು ಸಿದ್ಧ ಮಾಡಿಕೊಳ್ಳಲಿಲ್ಲ. ಸರ್ಕಾರ ಈಗ ಯುದ್ಧ ಕಾಲೇ ಶಸ್ತ್ರಭ್ಯಾಸ ಮಾಡ್ತಿದೆ. ಈವರೆಗೂ ತಯಾರಿ ಮಾಡಿಕೊಳ್ಳದೇ ಈಗ ಸಿದ್ಧತೆ ಮಾಡಿಕೊಳ್ತಿದೆ. ವ್ಯಾಕ್ಸಿನ್ ನೀಡುವಲ್ಲೂ ಸರ್ಕಾರ ವಿಫಲವಾಗಿದೆ. ಮೊದಲನೇ ಡೋಸ್ ಪಡೆದವರಿಗೆ ಎರಡನೇ ಡೋಸ್ ಸಿಗ್ತಿಲ್ಲ. ಕೋವ್ಯಾಕ್ಸಿನ್ ತಗೊಂಡವರು ಎರಡನೇ ಡೋಸ್ ಕೂಡ ಅದೇ ತಗೋಬೇಕು. ಆದರೆ ಇವರ ಬಳಿ ಕೋವ್ಯಾಕ್ಸಿನ್ ಇಲ್ಲ. ಏಳು ವರ್ಷ ಪ್ರಧಾನಿ, ಮುಖ್ಯಮಂತ್ರಿ ಆಗಿದ್ದವರು ಜನರಿಗೆ ಸುಳ್ಳು ಮಾಹಿತಿ ನೀಡಿದ್ರು. ಇದು ಜನರಿಗೆ ಮಾಡಿದ ದೊಡ್ಡ ದ್ರೋಹ ಎಂದು ಆರೋಪಿಸಿದರು.

ವ್ಯಾಕ್ಸಿನ್ ಇಲ್ಲದೇ ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ಕೊಡ್ತೀವಿ ಅಂದಿದ್ದೇಕೆ? ಮೇ ಮೂರು ಅಥವಾ ನಾಲ್ಕನೇ ವಾರ ವ್ಯಾಕ್ಸಿನ್ ಬರುತ್ತೆ ಅಂತ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹೇಳ್ತಾರೆ. ಆರೋಗ್ಯ ಸಚಿವರು ಹದಿನೈದು ದಿನ ಬಿಟ್ಟು ವ್ಯಾಕ್ಸಿನ್ ಕೊಡ್ತೀವಿ ಅಂತಾರೆ, ಆದರೆ ಇತ್ತ ಸಿಎಂ ವ್ಯಾಕ್ಸಿನ್ ನೀಡಿಕೆ ಉದ್ಘಾಟನೆ ಮಾಡ್ತಾರೆ. ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ಕೊಡಲು ಈ ಸರ್ಕಾರದ ಬಳಿ ಒಂದೇ ಒಂದು ವ್ಯಾಕ್ಸಿನ್ ಇಲ್ಲ. ಮೇ ಎರಡರಂದು ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೇ ಸರಣಿ ಸಾವು ಸಂಭವಿಸಿತು. ಆಕ್ಸಿಜನ್ ಇಲ್ಲದೇ 28 ಜನರು ಸತ್ತು ಹೋದರು. ಚಾಮರಾಜನಗರ ಅಷ್ಟೇ ಅಲ್ಲ, ರಾಜ್ಯಾದ್ಯಂತ ಹೀಗೆ ಜನ ಸತ್ತಿದ್ದಾರೆ. ಜನರಿಗೆ ಈ ಸರ್ಕಾರ ಎಕಾನಾಮಿಕ್ ಪ್ಯಾಕೇಜ್ ಘೋಷಣೆ ಮಾಡಬೇಕು. ಸರ್ಕಾರ ಬಡ ಜನರಿಗೆ ನೆರವಾಗಬೇಕು.

ಆಕ್ಸಿಜನ್ ಕೊಡದೇ ಈ ಸರ್ಕಾರ ಜನರನ್ನ ಸಾಯಿಸ್ತಿದೆ. ಸ್ಟೇಟ್ ಗೌವರ್ನಮೆಂಟ್ ಈಸ್ ಡೆಡ್, ಸೆಂಟ್ರಲ್ ಗೌವರ್ನಮೆಂಟ್ ಈಸ್ ಡೆಡ್. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸತ್ತು ಹೋಗಿವೆ. ರಾಜ್ಯಕ್ಕೆ ಆರೂವರೆ ಕೋಟಿ ವ್ಯಾಕ್ಸಿನ್ ಬೇಕು. ಆದರೆ ಈ ಸರ್ಕಾರದ ಬಳಿ ಒಂದೇ ಒಂದು ವ್ಯಾಕ್ಸಿನ್ ಇಲ್ಲ. ಎರಡು ಮೂರು ವರ್ಷಗಳೇ ಬೇಕಾಗುತ್ತೆ. ಇದನ್ನೊಂದು ಅಭಿಯಾನ ಮಾಡಿ. ಎಲ್ಲರಿಗೂ ವ್ಯಾಕ್ಸಿನ್ ಕೊಡುವ ಅಭಿಯಾನ ಮಾಡಿ. ಎರಡು ಮೂರು ತಿಂಗಳಲ್ಲಿ ಎಲ್ಲರಿಗೂ ವ್ಯಾಕ್ಸಿನ್ ಕೊಡಬೇಕು. ಇದನ್ನೇ ನಾವು ಈ ಸಾಂಕೇತಿಕ ಧರಣಿ ಮೂಲಕ ಹೇಳಿದ್ದೇವೆ ಎಂದರು.

The post ರಾಜ್ಯದ ಜನರಿಗೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿ- ಸಿದ್ದರಾಮಯ್ಯ ಆಗ್ರಹ appeared first on News First Kannada.

Source: newsfirstlive.com

Source link