ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಸತತ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಅಬ್ಬರ ಮುಂದುವರಿದಿದ್ದು, ಭಾರೀ ಮಳೆಯಿಂದ ರಸ್ತೆ ಪಕ್ಕದ ಗುಡ್ಡ ಕುಸಿದು ಬಸಿರಿಕಟ್ಟೆ- ಹೊರನಾಡು, ಮಕ್ಕಿಕೊಪ್ಪ-ಹೊರನಾಡು ರಸ್ತೆ ಬಂದ್ ಆಗಿರುವ ಘಟನೆ ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಮದಲ್ಲಿ ನಡೆದಿದೆ.

ಭಾರೀ ಪ್ರಮಾಣದಲ್ಲಿ ಭೂಮಿ ಕುಸಿದಿರುವ ಕಾರಣ ಸಂಚಾರ ಸ್ಥಗಿತಗೊಂಡಿದ್ದು, ಸ್ಥಳಕ್ಕೆ ತಹಶಿಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಣ್ಣು ತೆರವು ಮಾಡಲು ಪಿಡಬ್ಲ್ಯೂಡಿ ಇಲಾಖೆಗೆ ಸೂಚನೆ ನೀಡಿದ್ದಾರೆ. ಸದ್ಯ ರಸ್ತೆ ಮೇಲೆ ಬಿದ್ದಿರುವ ಮಣ್ಣು ತೆರವು ಮಾಡುವ ಕಾರ್ಯ ಮುಂದುವರಿದಿದೆ. ಸಂಪರ್ಕ ಕಡಿತದಿಂದ ಗುಡ್ಡೆತೋಟ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನು ಕೊಡಗು ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದ್ದು, ಭದ್ರೆ, ತುಂಗೆ, ಹೇಮಾವತಿ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಮುಂಗಾರು ಮಳೆಯ ಅಬ್ಬರದಿಂದ ಹಲವು ಭಾಗಗಳಲ್ಲಿ ವಿದ್ಯುತ್ ಮಾರ್ಗಗಳ ಮೇಲೆ ಮರಗಳು ಉರುಳಿ ಬಿದ್ದಿದ್ದು, ಮಕ್ಕಂದೂರು, ಮದೇನಾಡು, ಪೊನ್ನಂಪೇಟೆ ಸೇರಿದಂತೆ ಗ್ರಾಮೀಣಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಅರಣ್ಯ ಇಲಾಖೆ ಹಾಗೂ ಸೆಸ್ಕ್​​​​ ಸಿಬ್ಬಂದಿ ಜಂಟಿಯಾಗಿ ವಿದ್ಯುತ್ ಮಾರ್ಗ ದುರಸ್ಥಿ ಕಾರ್ಯ ನಡೆಸಿದ್ದಾರೆ.

ಭಾರೀ ಮಳೆಯಿಂದ ದೇವರಿಗೆ ಜಲದಿಗ್ಬಂಧನ..
ಇತ್ತ ಬಾಗಲಕೋಟೆಯಲ್ಲೂ ಮಳೆ ಅಬ್ಬರ ಜೋರಾಗಿದ್ದು, ಘಟಪ್ರಭಾ ನದಿ ನೀರಿನ ಹರಿವು ಮತ್ತಷ್ಟು ಹೆಚ್ಚಳವಾಗಿದೆ. ಪರಿಣಾಮ ಮುಧೋಳ ತಾಲೂಕಿನ ಮಾಚಕನೂರು ಗ್ರಾಮದ ಹೊಳೆಬಸವೇಶ್ವರ ದೇವಸ್ಥಾನ ಜಲಾವೃತವಾಗಿದೆ. ದೇಗುಲದೊಳಗೆ ಐದು ಅಡಿಗೂ ಹೆಚ್ಚಿದ ನೀರು ನಿಂತಿದ್ದು, ದೇವರಿಗೂ ಜಲ ದಿಗ್ಬಂಧನ ಉಂಟಾಗಿದೆ.

ಹಾವೇರಿಯಲ್ಲಿ ರಾತ್ರಿ ಸುರಿದ ಬಾರಿದ ಭಾರೀ ಮಳೆಯಿಂದ ಶಿಗ್ಗಾವಿ ತಾಲೂಕಿನ ಶಿವಪುರ ತಾಂಡದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಅರ್ಜುನ್ ಶೀಲಾಪ್ಪ ನಾಯ್ಕ್ ಎಂಬುವವರಿಗೆ ಸೇರಿದ ಮನೆಯ ಗೋಡೆ ಕುಸಿದು ಬಿದ್ದಿದ್ದು, ಗೋಡೆ ಮನೆ ಹೊರಾಂಗಣ ಭಾಗಕ್ಕೆ ಕುಸಿದ ಪರಿಣಾಮ ದೊಡ್ಡ ಅನಾಹುತ ತಪ್ಪಿದೆ. ಕಳೆದ ಎರಡು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ಹಲವೆಡೆ ಮನೆ ಗೋಡೆ ಕುಸಿತವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

The post ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣನ ಅಬ್ಬರ: ಮಕ್ಕಿಕೊಪ್ಪ-ಹೊರನಾಡು ರಸ್ತೆ ಬಂದ್ appeared first on News First Kannada.

Source: newsfirstlive.com

Source link