ಬೆಂಗಳೂರು: ರಾಜ್ಯದ ಹಲವೆಡೆ ವರುಣರಾಯ ಅಬ್ಬರಿಸಿದ್ದಾನೆ. ಕೊಡಗು ಜಿಲ್ಲೆಯಲ್ಲಿ ಇಂದಿನಿಂದ 3 ದಿನ ಭಾರೀ ಮಳೆಯ ಮುನ್ಸೂಚನೆ ಇದೆ. ಮುಂದಿನ 24 ಗಂಟೆಗಳಲ್ಲಿ 204 ಮಿಲಿ ಮೀಟರ್‍ಗೂ ಹೆಚ್ಚು ಮಳೆ ಬೀಳುವ ಸಂಭವ ಇದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ.

ಕಾವೇರಿ ನದಿ ನೀರಿನ ಮಟ್ಟ ಏರಿಕೆಯಾಗಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಬೆಟ್ಟ-ಗುಡ್ಡ, ನದಿ ತೀರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಡಳಿತ ಆದೇಶಿಸಿದೆ. ಅನಾಹುತ ತಪ್ಪಿಸಲು ಎನ್‍ಡಿಆರ್‍ಎಫ್ ತಂಡ ನಿಯೋಜಿಸಲಾಗಿದೆ.

ಗಡಿ ಜಿಲ್ಲೆ ಬೀದರ್ ಜಿಲ್ಲೆ ಔರಾದ್‍ನಲ್ಲಿ ಭಾರೀ ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕೋಡಿಯಲ್ಲಿ ಕೃಷ್ಣಾ ನದಿ ನೀರಿನ ಹರಿವು ಏರಿಕೆಯಾಗಿದ್ದು, ನದಿ ತೀರದ ಜನರಿಗೆ ಎಚ್ಚರಿಕೆ ರವಾನಿಸಲಾಗಿದೆ. ಕಾಗವಾಡ ತಾಲೂಕಿನಲ್ಲಿ ಡಂಗೂರ ಸಾರಿಸಿ ಗ್ರಾಮಸ್ಥರನ್ನು ಎಚ್ಚರಿಸಲಾಗ್ತಿದೆ. ಇದನ್ನೂ ಓದಿ: ವೈಷ್ಣವಿಯಂತೆ ಇನ್ನೊಬ್ಬರು ಮನೆಯಲ್ಲಿ ಮಾತನಾಡಲು ಸಾಧ್ಯವಿಲ್ಲ: ಸುದೀಪ್

ಉತ್ತರ ಕನ್ನಡ ಜಿಲ್ಲೆಯಲ್ಲೂ ಅಬ್ಬರದ ಮಳೆ ಸುರಿಯುತಿದ್ದು, ಕಾರವಾರ ಕಡಲತೀರದಲ್ಲಿ ಬಿರುಗಾಳಿ ಸಹಿತ ಅಬ್ಬರದ ಅಲೆಗಳು ಏಳುತ್ತಿವೆ. ಜಿಲ್ಲೆಯಾದ್ಯಂತ ಭಾರೀ ಮಳೆಯಿಂದ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ. ಇತ್ತ ಉಡುಪಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆ ಇನ್ನೆರಡು ದಿನ ಮಳೆ ಮುನ್ಸೂಚನೆ ನೀಡಿದ್ದು, ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

10 ದಿನಗಳಿಂದ ಕ್ಷೀಣಿಸಿದ್ದ ಮುಂಗಾರು ಚುರುಕು ಪಡೆದಿದ್ದು, ಭಾರೀ ಮಳೆಗೆ ರಸ್ತೆ ಮೇಲೆ ನೀರು ಬಂದು ವಾಹನ ಓಡಾಟಕ್ಕೆ ವ್ಯತ್ಯಯವಾಗಿದೆ. ನದಿ, ಸಮುದ್ರ ತೀರದ ಜನ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

The post ರಾಜ್ಯದ ಹಲವೆಡೆ ಭಾರೀ ಮಳೆ- ಎಲ್ಲೆಲ್ಲಿ ಏನೇನಾಗಿದೆ..? appeared first on Public TV.

Source: publictv.in

Source link