ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿರೋ ಹಿನ್ನೆಲೆ, ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಹೆಚ್ಚಿದ ಹಿನ್ನಲೆ ಎರಡು ಜಲಾಶಯಗಳಿಂದ ನೀರು ಬಿಡುಗಡೆ ಮಾಡಲಾಗಿದೆ. ಪ್ರವಾಹ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಾರವಾರದ ಕದ್ರಾ ಹಾಗೂ ಯಲ್ಲಾಪುರ ತಾಲ್ಲೂಕಿನ ಕೊಡಸಳ್ಳಿ ಜಲಾಶಯಗಳಿಂದ ನೀರು ಹೊರಕ್ಕೆ ಬಿಡಲಾಗಿದೆ.

ಕದ್ರಾ ಜಲಾಶಯಕ್ಕೆ 15,212 ಕ್ಯೂಸೆಕ್ ಒಳಹರಿವು ಇದ್ದು, ಆರು ಗೇಟ್‌ಗಳ ಮೂಲಕ 18,155 ಕ್ಯೂಸೆಕ್ ನೀರನ್ನ ಹೊರಕ್ಕೆ ಬಿಡಲಾಗಿದೆ. ಈ ಜಲಾಶಯ ಗರಿಷ್ಠ 34.50 ಮೀಟರ್ ಸಾಮರ್ಥ್ಯವಿದ್ದು, ಸದ್ಯ 31.32 ಮೀಟರ್ ಭರ್ತಿಯಾಗಿದೆ.

ಇನ್ನು ಕೊಡಸಳ್ಳಿ ಜಲಾಶಯಕ್ಕೆ 7,455 ಕ್ಯೂಸೆಕ್ ಒಳಹರಿವು ಇದ್ದು,  7,970 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಗರಿಷ್ಠ 75.50 ಮೀಟರ್ ಸಾಮರ್ಥ್ಯದ ಕೊಡಸಳ್ಳಿ ಜಲಾಶಯ, ಸದ್ಯ 71.55 ಮೀಟರ್ ಭರ್ತಿಯಾಗಿದೆ. ನೀರು ರಿಲೀಸ್​ ಮಾಡಿರೋ ಹಿನ್ನೆಲೆ ಜಲಾಶಯ ವ್ಯಾಪ್ತಿಯ ನಿವಾಸಿಗಳಿಗೆ ಕೆಪಿಸಿಎಲ್ ಮುನ್ನೆಚ್ಚರಿಕೆ ನೀಡಿದೆ.

ಅತ್ತ ಬಾಗಲಕೋಟೆಯಲ್ಲಿ ಕೃಷ್ಣಾ ನದಿ ಅಬ್ಬರ ಜೋರಾಗಿದೆ. ರಬಕವಿಬನಹಟ್ಟಿ ತಾಲ್ಲೂಕಿನ ಹಿಪ್ಪರಗಿ ಬ್ಯಾರೇಜ್ ಒಳಹರಿವು 1 ಲಕ್ಷ 42 ಸಾವಿರ ಕ್ಯೂಸೆಕ್ ಇದ್ದು, ಹೊರಹರಿವು 1 ಲಕ್ಷ 41 ಸಾವಿರ ಕ್ಯೂಸೆಕ್ ಇದೆ. ಕೃಷ್ಣಾ ತೀರದಲ್ಲಿ ಹದಿನೆಂಟು ಹಳ್ಳಿಗಳಿಗೆ ಪ್ರವಾಹ ಭೀತಿ ಎದುರಾಗಿದೆ.

ಮಲೆನಾಡಿನಲ್ಲಿ ಸುರಿಯುತ್ತಿರೋ ಧಾರಕಾರ ಮಳೆ ಬಳ್ಳಾರಿ, ವಿಜಯನಗರ ಜಿಲ್ಲೆಯ ಜನರಿಗೆ ವರವಾಗಿದೆ. ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದುಬರ್ತಿದ್ದು ಒಳಹರಿವು ಹೆಚ್ಚಳವಾಗಿದೆ.ನಿನ್ನೆ ಒಂದೇ ದಿನ ನಾಲ್ಕು ಟಿಎಂಸಿ ನೀರು ಹರಿದು ಬಂದಿದೆ.

100 ಟಿಎಂಸಿ ಸಾಮಾರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ ಸದ್ಯ 16.110 ಟಿಎಂಸಿ ನೀರು ಸಂಗ್ರಹವಾಗಿದೆ. ಇದೇ ವೇಳೆ ಕಳೆದ ವರ್ಷ 6.132 ಟಿಎಂಸಿ ನೀರು ಸಂಗ್ರಹವಾಗಿತ್ತು.  ಸದ್ಯ 42,742 ಕ್ಯೂಸೆಕ್ ನೀರು ಒಳಹರಿವು ಇದ್ದು, ಈ ಬಾರಿಯೂ ನಿರೀಕ್ಷೆಗೂ ಮುಂಚೆ ಜಲಾಶಯ ಭರ್ತಿಯಾಗೋ ಸಾಧ್ಯತೆ ಇದೆ ಅಂತ ನ್ಯೂಸ್ ಫಸ್ಟ್‌ಗೆ ತುಂಗಭದ್ರಾ ಜಲಾಶಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

The post ರಾಜ್ಯದ ಹಲವೆಡೆ ಭಾರೀ ಮಳೆ: ಜಲಾಶಯಗಳಿಂದ ನೀರು ಬಿಡುಗಡೆ appeared first on News First Kannada.

Source: newsfirstlive.com

Source link