ರಾಜ್ಯದ ಹಲವೆಡೆ ಭಾರೀ ಮಳೆ: ತಡರಾತ್ರಿ ಮನೆಗಳಿಗೆ ನೀರು.. ನೂರಾರು ಎಕರೆ ಬೆಳೆ ನಾಶ

ರಾಜ್ಯದ ಹಲವೆಡೆ ಭಾರೀ ಮಳೆ: ತಡರಾತ್ರಿ ಮನೆಗಳಿಗೆ ನೀರು.. ನೂರಾರು ಎಕರೆ ಬೆಳೆ ನಾಶ

ಚಿತ್ರದುರ್ಗ: ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಮಳೆಯ ಅರ್ಭಟ ಜೋರಾಗಿದೆ. ಚಿತ್ರದುರ್ಗ ನಗರದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಕೆರೆ ಕೊಳ್ಳಗಳು ತುಂಬಿ ಹರಿದು ಅವಾಂತರ ಸೃಷ್ಟಿಸಿದೆ. ಧಾರಾಕಾರ ಮಳೆಗೆ ಜನರು ತತ್ತರಿಸಿದ್ದು ಜನಜೀವನ ಸಂಪೂರ್ಣ ಅಸ್ಯವ್ಯಸ್ತಗೊಂಡಿದೆ.

ನಿನ್ನೆ ತಡರಾತ್ರಿ ಸುರಿದ ಭಾರೀ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಪರದಾಟ ನಡೆಸಿದರು. ನಗರದ ಗುಮಾಸ್ತ ಕಾಲೋನಿಯಲ್ಲಿ ಮಳೆ ನೀರು ನದಿಯಂತೆ ಹರಿದಿದ್ದು ರಸ್ತೆಗಳು ಜಲಾವೃತಗೊಂಡಿದ್ದವು.

ಅವೈಜ್ಞಾನಿಕ ರಸ್ತೆ, ಚರಂಡಿ ನಿರ್ಮಾಣದಿಂದ ಚರಂಡಿ ನೀರು ಸಮೇತ ಮಳೆ ನೀರು ಮನೆಗೆಳಿಗೆ ನುಗ್ಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಮಳೆ ನೀರನ್ನು ಮನೆಯಿಂದ ಹೊರ ಹಾಕಲು ರಾತ್ರಿ ಇಡೀ ಹರಸಾಹಸ ಪಟ್ಟಿದ್ದಾರೆ.

ನಿರಂತರ ಮಳೆಯಿಂದ ನಗರದ ಹೊರವಲಯದಲ್ಲಿರುವ ಐತಿಹಾಸಿಕ ಮಲ್ಲಾಪುರ ಕೆರೆ ಕೋಡಿ ಬಿದ್ದಿದ್ದು ಅಪಾರ ಪ್ರಮಾಣದ ನೀರು ಹರಿದು ಹೋಗುತ್ತಿದೆ. ಇನ್ನು ಜಿಲ್ಲೆಯ ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು, ತಾಲ್ಲೂಕಿನ ಹಲವು ಭಾಗಗಳಲ್ಲಿ ವರುಣನ ಆರ್ಭಟ ಜೋರಾಗಿದೆ.

ದಾವಣಗೆರೆ ಜಿಲ್ಲೆಯಲ್ಲೂ ವರುಣ ತನ್ನ ಆರ್ಭಟ ಮುಂದುವರೆಸಿದ್ದು, ತಡರಾತ್ರಿ ಐದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ ನೂರಾರು ಎಕರೆ ಬೆಳೆ ನಾಶ ಮಾಡಿ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ.

ವಿಜಯನಗರ ಜಿಲ್ಲೆಯಲ್ಲಿ ವರ್ಷಧಾರೆ ಮುಂದುವರೆದಿದ್ದು, ಹರಪನಹಳ್ಳಿ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೊಲಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ತಾಲೂಕಿನ ಬೇವಿನಹಳ್ಳಿ ದೊಡ್ಡ ತಾಂಡದ ಕೃಷ್ಣಾ ನಾಯ್ಕರ ಎಂಬ ರೈತನ ಗದ್ದೆಗೆ ನೀರು ನುಗ್ಗಿ ನೂರಾರು ಎಕರೆ ಮೆಕ್ಕೆಜೋಳ, ಸಹಿತ ಅಡಿಕೆ ಗಿಡಗಳು ಜಲಾವೃತಗೊಂಡಿದ್ದು, ಚೆಂಡೂ ಹೂವು ಬೆಳೆ ಸಂಪೂರ್ಣ ನಾಶವಾಗಿದ್ದು ರೈತ ಕಂಗಾಲಾಗಿದ್ದಾನೆ.

The post ರಾಜ್ಯದ ಹಲವೆಡೆ ಭಾರೀ ಮಳೆ: ತಡರಾತ್ರಿ ಮನೆಗಳಿಗೆ ನೀರು.. ನೂರಾರು ಎಕರೆ ಬೆಳೆ ನಾಶ appeared first on News First Kannada.

Source: newsfirstlive.com

Source link