ರಾಜ್ಯದ 650 ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಪುನೀತ್​ ರಾಜ್​ಕುಮಾರ್​ಗೆ ಶ್ರದ್ಧಾಂಜಲಿ | Theater Owners Mourn to Puneeth Rajkumar Death in Karnataka


ರಾಜ್ಯದ 650 ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಪುನೀತ್​ ರಾಜ್​ಕುಮಾರ್​ಗೆ ಶ್ರದ್ಧಾಂಜಲಿ

ಪುನೀತ್​ ರಾಜ್​ಕುಮಾರ್​

ಪುನೀತ್​ ರಾಜ್​ಕುಮಾರ್​​ ಸಿನಿಮಾಗಳು ಸ್ಯಾಂಡಲ್​ವುಡ್​ನಲ್ಲಿ ಒಳ್ಳೆಯ ಬಿಸ್​ನೆಸ್​ ಮಾಡುತ್ತಿತ್ತು. ಪುನೀತ್​ ಸಿನಿಮಾ ರಿಲೀಸ್​ ಆಗುತ್ತಿದೆ ಎಂದರೆ ಚಿತ್ರಮಂದಿರಗಳಿಗೆ ಹೊಸ ಕಳೆ ಬರುತ್ತಿತ್ತು. ಅಭಿಮಾನಿಗಳು ಅದ್ಭುತವಾಗಿ ಥಿಯೇಟರ್​ಗಳನ್ನು ಸಿಂಗರಿಸುತ್ತುದ್ದರು. ಆದರೆ, ಈಗ ಪುನೀತ್​ ನಿಧನ ಹೊಂದಿದ್ದಾರೆ. ಇದು ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಈ ಕಾರಣಕ್ಕೆ ರಾಜ್ಯದ ಎಲ್ಲಾ 650 ಚಿತ್ರಮಂದಿರಗಳಲ್ಲಿ ಇಂದು (ನವೆಂಬರ್ 7) ಸಂಜೆ 6 ಗಂಟೆಗೆ ಪುನೀತ್ ರಾಜ್​​ಕುಮಾರ್​​ಗೆ ವಿಶೇಷ ಹಾಡನ್ನು ಹಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಗಿದೆ.

ಪ್ರದರ್ಶಕರ ವಲಯ ಮತ್ತು ಥಿಯೇಟರ್ ಸಿಬ್ಬಂದಿಗಳಿಂದ ಶ್ರದ್ದಾಂಜಲಿ ಕಾರ್ಯಕ್ರಮಕ್ಕೆ ಸಿದ್ದತೆ ಮಾಡಿಕೊಂಡಿದ್ದರು. ಪುನೀತ್ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ, ದೀಪ ಬೆಳಗಿ ಶ್ರದ್ಧಾಂಜಲಿ ಅರ್ಪಿಸಲಾಗಿದೆ. ಚಿತ್ರ ರಿಲೀಸ್ ಆಗುವ ಮೊದಲ ದಿನ ಮೊದಲ ಶೋಗೆ ಪುನೀತ್​ ಥಿಯೇಟರ್​​ಗೆ ಬರುತ್ತಿದ್ದರು. ಥಿಯೇಟರ್ ಸಿಬ್ಬಂದಿಯನ್ನು ಆತ್ಮೀಯವಾಗಿ ಮಾತನಾಡಿಸುತ್ತಿದ್ದರು. ಆದರೆ, ಅಂತಹ ಪುನೀತ್​ ಈಗ ನಮ್ಮ ಜತೆ ಇಲ್ಲ. ಈ ಕಾರಣಕ್ಕೆ ಪುನೀತ್​ ರಾಜ್​ಕುಮಾರ್ ಅವರ ಜತೆಗಿನ ನೆನಪನ್ನು ಥಿಯೇಟರ್ ಸಿಬ್ಬಂದಿ ಮೆಲುಕು ಹಾಕುತ್ತಿದ್ದಾರೆ.
ಗೀತ ಸಾಹಿತಿ ನಾಗೇಂದ್ರ ಪ್ರಸಾದ್ ರಚಿಸಿದ ಹಾಡಿನ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಗಿದೆ. ಪುನೀತ್​ ಅವರನ್ನು ನೆನೆದು ಎಲ್ಲರೂ ಕಣ್ಣೀರು ಹಾಕಿದ್ದಾರೆ.  ಇನ್ನು, ಈ ವೇಳೆ ನೂರಾರು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮೇಣದಬತ್ತಿ ಹಚ್ಚಿ, ದೀಪ ಬೆಳಗಲಾಗಿದೆ.

ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದವರು ಪುನೀತ್​ ರಾಜ್​ಕುಮಾರ್​. ಹೃದಯಾಘಾತದಿಂದ ಸಡನ್​ ಆಗಿ ಅವರು ಇಹಲೋಕ ತ್ಯಜಿಸಿದ ಬಳಿಕ ಅಪಾರ ಸಂಖ್ಯೆಯ ಅಭಿಮಾನಿ ಬಳಗಕ್ಕೆ ತೀವ್ರ ನೋವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಚಿಕ್ಕ ಮಕ್ಕಳು ಸಂಕಟಪಡುತ್ತಿದ್ದಾರೆ. ಪುನೀತ್​ ಅವರ ಸಿನಿಮಾಗಳನ್ನು ಎಲ್ಲ ವರ್ಗದ ಪ್ರೇಕ್ಷಕರು ಇಷ್ಟಪಡುತ್ತಿದ್ದರು. ಮಕ್ಕಳು ಕೂಡ ಅಪ್ಪು ಅಭಿನಯವನ್ನು ಮನಸಾರೆ ಮೆಚ್ಚಿಕೊಂಡಿದ್ದರು. ಆದರೆ ಈಗ ಪುನೀತ್​ ಇಲ್ಲ ಎಂಬ ಕಹಿ ಸತ್ಯದಿಂದ ಪುಟಾಣಿಗಳಿಗೆ ನೋವಾಗಿದೆ.

ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಪುನೀತ್​ ರಾಜ್​ಕುಮಾರ್​ ಸಮಾಧಿಗೆ ಪ್ರತಿ ದಿನ ಭಾರಿ ಸಂಖ್ಯೆಯ ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ. ಪೋಷಕರ ಜೊತೆ ಮಕ್ಕಳು ಕೂಡ ಸರದಿ ಸಾಲಿನಲ್ಲಿ ಬಂದು ಅಪ್ಪು ಸಮಾಧಿಗೆ ನಮಿಸುತ್ತಿದ್ದಾರೆ. ಸಮಾಧಿ ಎದುರು ಪುನೀತ್​ ಸಿನಿಮಾಗಳ ಹಾಡುಗಳನ್ನು ಹೇಳಿ ನಮನ ಸಲ್ಲಿಸಲಾಗುತ್ತಿದೆ.

ಇದನ್ನೂ ಓದಿ: Puneeth Rajkumar: ಪುನೀತ್ ಸಮಾಧಿ ದರ್ಶನದ ಅವಧಿ ಇಂದು 7 ಗಂಟೆವರೆಗೆ ವಿಸ್ತರಣೆ; ನಾಳೆ ಕಾರ್ಯ ಮುಗಿಸಿದ ನಂತರ ದರ್ಶನಕ್ಕೆ ಅವಕಾಶ

ಪುನೀತ್​ ಸಮಾಧಿ ಬಳಿ ಬಂದು ಹಾಡು ಹೇಳಿದ ಮಕ್ಕಳು; ಪುಟ್ಟ ಹೃದಯಗಳಿಗೆ ಅಪ್ಪು ಎಂದರೆ ಪಂಚಪ್ರಾಣ

TV9 Kannada


Leave a Reply

Your email address will not be published. Required fields are marked *