– ಈಗ ಸರ್ಕಾರಿ ಕಾರಲ್ಲಿ ಬಂದಿದ್ದು ಯಾಕೆ? ತನಿಖೆಗೆ ಎಂಎಲ್‍ಸಿ ಒತ್ತಾಯ

ಚಿಕ್ಕಮಗಳೂರು: ಪಾರ್ಟಿ ಮಾಡಲು ಕಾಡಿಗೆ ಹೋಗುತ್ತಿದ್ದಾರೆ ಎಂದು ತಿಳಿದು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸ್ಥಳಿಯರೇ ಗಾಡಿಗಳನ್ನು ಅಡ್ಡ ಹಾಕಿ ತರಾಟೆಗೆ ತೆಗೆದುಕೊಂಡು ವಾಪಸ್ ಕಳಿಸಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಶಾಂತವೇರಿ ಗ್ರಾಮದಲ್ಲಿ ನಡೆದಿದೆ.

ಮೇ 20ರ ಗುರುವಾರ ಅರಣ್ಯ ಇಲಾಖೆಯ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಎಂಟತ್ತು ಕಾರುಗಳಲ್ಲಿ ತರೀಕೆರೆ ತಾಲೂಕಿನ ಶಾಂತವೇರಿ ಗ್ರಾಮದಲ್ಲಿ ಹೋಗುತ್ತಿದ್ದಾಗ ಸ್ಥಳಿಯರೇ ಅಡ್ಡ ಹಾಕಿ ಪ್ರಶ್ನಿಸಿ ವಾಪಸ್ ಕಳುಹಿಸಿದ್ದಾರೆ. ಅವರೆಲ್ಲಾ ಅರಣ್ಯದಲ್ಲಿ ಪಾರ್ಟಿ ಮಾಡಲು ಹೋಗುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಹಳ್ಳಿಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಜಿಲ್ಲಾದ್ಯಂತ ಲಾಕ್‍ಡೌನ್ ಇದ್ದು, 144 ಸೆಕ್ಷನ್ ಕೂಡ ಜಾರಿಯಲ್ಲಿದೆ. ಆದರೆ, ಬೇರೆಯವರಿಗೆ ಬುದ್ಧಿವಾದ ಹೇಳಬೇಕಾದ ನೀವೇ ಹೀಗೆ ಮಾಡಿದರೆ ಹೇಗೆಂದು ಅಧಿಕಾರಿಗಳ ವಿರುದ್ಧ ಕಿಡಿ ಕಾರಿ  ಎಲ್ಲ ಕಾರುಗಳನ್ನು ವಾಪಸ್ ಕಳಿಸಿದ್ದಾರೆ.

ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಕೂಡ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ. ಎಸ್ಪಿ-ಡಿಸಿ ಗಮನಕ್ಕೆ ತಂದಿದ್ದೇನೆ. ರಾಜ್ಯ ಮಟ್ಟದ ಅಧಿಕಾರಿಗಳು, ಫಾರೆಸ್ಟ್, ಪೊಲೀಸ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಕೆಮ್ಮಣ್ಣುಗುಂಡಿ ಬಳಿ ಪಾರ್ಟಿ ಮಾಡಲು ಬಂದಿದ್ದಾರೆ. ಇಂತಹಾ ಕ್ಲಿಷ್ಟ ಪರಿಸ್ಥಿತಿಯಲ್ಲಿ ರಾಜ್ಯದ ಹಿರಿಯ ಅಧಿಕಾರಿಗಳು ಯಾವ ಕಾರ್ಯಕ್ರಮಕ್ಕಾಗಿ ಅಲ್ಲಿಗೆ ಬಂದಿದ್ದರು. ಎಲ್ಲರೂ ರಾಜ್ಯ ಮಟ್ಟದವರೇ. ಎಲ್ಲಾ ಗಾಡಿಗಳು ರಾಜ್ಯ ಮಟ್ಟದ್ದೇ. ಸರ್ಕಾರಿ ಕಾರು ಉಪಯೋಗಿಸಿಕೊಂಡು ಮೋಜು-ಮಸ್ತಿಗೆ ಬಂದಿದ್ದಾರೆ. ಆ ಪಂಚಾಯಿತಿಯವರು ಅವರಿಗೆ ಪ್ರಶ್ನೆ ಮಾಡಿದ್ದಾರೆ.   ಯಾವ ಕಾರಣಕ್ಕೆ ಬಂದಿದ್ದೇವೆ ಎಂದು ಜನರ ಮುಂದೆ ಅಧಿಕಾರಿಗಳು ಹೇಳಬೇಕು ಎಂದು ಆಗ್ರಹಿಸಿದ್ದಾರೆ.

ಅಧಿಕಾರಿಗಳು ಕಾರಣ ಕೊಡುವುದನ್ನು ಬಿಟ್ಟು ಸ್ಥಳಿಯರ ಮೇಲೆ ಕ್ರಿಮಿನಲ್ ಕೇಸ್ ಹಾಕುವ ವ್ಯವಸ್ಥೆಯನ್ನ ಅಧಿಕಾರಿಗಳು ಮಾಡುತ್ತಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಅವರ ಮೇಲೆ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇಂತಹಾ ಪರಿಸ್ಥಿತಿಯಲ್ಲಿ ಮೋಜು-ಮಸ್ತಿಗೆ ಏಕೆ ಬಂದಿದ್ದರು? ಯಾವ ಉದ್ದೇಶಕ್ಕೆ ಬಂದಿದ್ದರು ಎಂಬುದು ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ.

ಶಾಂತವೇರಿ ಬಳಿ ಹುಲಿ ಸಾವನ್ನಪ್ಪಿತ್ತು. ಅದರ ಪರಿಶೀಲನೆಗೆ ಹೋಗುತ್ತಿದ್ದರು ಎಂಬ ಮಾತುಗಳೂ ಅಧಿಕಾರಿಗಳ ವಲಯದಲ್ಲೇ ಕೇಳಿ ಬರುತ್ತಿದೆ. ಜೊತೆಗೆ, ಕೆಮ್ಮಣ್ಣುಗುಂಡಿಯಲ್ಲಿ ಇರುವ ಪ್ರವಾಸೋದ್ಯಮ ಇಲಾಖೆ ಸೇರಿದ ಅತಿಥಿ ಗೃಹಗಳನ್ನ ಫಾರೆಸ್ಟ್ ಇಲಾಖೆಗೆ ನೀಡಲು ಸರ್ಕಾರ ಚಿಂತಿಸುತ್ತಿದ್ದು ಅದರ ಪರಿವೀಕ್ಷಣೆಗೂ ಬಂದಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ. ಅದು ಎಷ್ಟರ ಮಟ್ಟಿಗಿನ ಸತ್ಯ-ಸುಳ್ಳು ಎಂಬುದನ್ನು ಅರಣ್ಯ ಇಲಾಖೆ ಸ್ಪಷ್ಟಪಡಿಸಬೇಕಿದೆ. ರಾಜ್ಯಾದ್ಯಂತ ಲಾಕ್ ಡೌನ್ ಘೋಷಣೆಯಾಗಿರುವಾಗ ಈ ಗ್ರಾಮಕ್ಕೆ ಬೆಂಗಳೂರಿನಿಂದ ಬರುವ ಅಗತ್ಯ ಏನಿತ್ತು ಎನ್ನುವುದು ಗ್ರಾಮಸ್ಥರ ಪ್ರಶ್ನೆ.

The post ರಾಜ್ಯಮಟ್ಟದ ಹಿರಿಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಳ್ಳಿಗರಿಂದ ಕ್ಲಾಸ್ appeared first on Public TV.

Source: publictv.in

Source link