ರಾಜ್ಯಸಭೆಯಲ್ಲಿ 12 ಸಂಸದರು ಅಮಾನತು; ಮಹತ್ವದ ಸಭೆ ಕರೆದ ವಿರೋಧ ಪಕ್ಷಗಳು


ನವದೆಹಲಿ: ಸಂಸತ್ ಮಳೆಗಾಲದ ಅಧಿವೇಶನದ ಕೊನೆಯ ದಿನ ವಿರೋಧ ಪಕ್ಷಗಳು ತೀವ್ರ ಗದ್ದಲ ಸೃಷ್ಟಿಸಿ ಅಶಿಸ್ತಿನ ವರ್ತನೆ ತೋರಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಸಭೆಯ 12 ಮಂದಿ ವಿರೋಧ ಪಕ್ಷದ ಸಂಸದರನ್ನು ಅಮಾನತು ಮಾಡಲಾಗಿದೆ. ನಿನ್ನೆ ಚಳಿಗಾಲದ ಅಧಿವೇಶನ ಆರಂಭ ಆಗುತ್ತಿದ್ದಂತೆಯೇ ಉಪಸಭಾಪತಿ ತಮ್ಮ ನಿರ್ಧಾರವನ್ನ ಪ್ರಕಟಿಸಿದ್ದಾರೆ. ಆರು ಮಂದಿ ಕಾಂಗ್ರೆಸ್‌, ಟಿಎಂಸಿಯ ತಲಾ ಇಬ್ಬರು ಮತ್ತು ಶಿವಸೇನೆ ಹಾಗೂ ಸಿಪಿಎಂ ಮತ್ತು ಸಿಪಿಐನಿಂದ ತಲಾ ಒಬ್ಬರನ್ನ ಅಮಾನತು ಮಾಡಲಾಗಿದೆ.

ಕಾಂಗ್ರೆಸ್‌ನ ಫೂಲೋ ದೇವಿ ನೇತಮ್, ಛಾಯಾ ವರ್ಮಾ, ರಿಪುನ್ ಬೋರಾ, ರಾಜಮಣಿ ಪಟೇಲ್, ಸೈಯದ್ ನಾಸಿರ್ ಹುಸೇನ್, ಅಖಿಲೇಶ್ ಪ್ರಸಾದ್ ಸಿಂಗ್, ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ ಅನಿಲ್ ದೇಸಾಯಿ, ಟಿಎಂಸಿಯ ಡೋಲಾ ಸೇನ್ ಮತ್ತು ಶಾಂತಾ ಛೆಟ್ರಿ, ಸಿಪಿಎಂನಿಂದ ಎಲಮರಮ್ ಕರೀಂ, ಸಿಪಿಐನಿಂದ ಬಿನೋಯ್ ವಿಶ್ವಂ ಅವರನ್ನ ಅಮಾನತು ಮಾಡಿ ಉಪ ಸಭಾಪತಿ ಹರಿವಂಶ ನಾರಾಯಣ ಸಿಂಗ್ ಆದೇಶಿಸಿದ್ದಾರೆ.

ಮುಂಗಾರು ಅಧಿವೇಶನದ ಕೊನೆಯ ದಿನವಾದ ಆಗಸ್ಟ್ 11 ರಂದು 12 ಜನ ಸಂಸದರು ರಾಜ್ಯ ಸಭೆಯಲ್ಲಿ ಹೇಗೆ ವರ್ತಿಸಿದರು ಎಂಬುದು ಇಡೀ ದೇಶಕ್ಕೆ ತಿಳಿದಿದೆ.. ಎಲ್ಲಾ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಲಭ್ಯವಿವೆ.. ಅವರೇ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದಾರೆ. ಅದು ಕೊನೆಯ ದಿನವಾದ್ದರಿಂದ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಚಳಿಗಾಲದ ಅಧಿವೇಶನದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಕ್ಷಮೆಯಾಚಿಸಲು ಅವರನ್ನೂ ವಿನಂತಿಸಿದ್ದೇವೆ. ಆದರೆ ಅವರು ಕ್ಷಮೆ ಕೇಳಲು ನಿರಾಕರಿಸಿದ್ದಾರೆ.
-ಪ್ರಹ್ಲಾದ್ ಜೋಶಿ, ಸಂಸದೀಯ ವ್ಯವಹಾರಗಳ ಸಚಿವ

ಇನ್ನು, ರಾಜ್ಯಸಭೆಯ 12 ಸದಸ್ಯರ ಅಮಾನತು ವಿಚಾರವಾಗಿ ಇಂದು ವಿಪಕ್ಷಗಳ ಮಹತ್ವದ ಸಭೆ ನಡೆಯಲಿದೆ.. ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕಚೇರಿಯಲ್ಲಿ ಪ್ರತಿಪಕ್ಷಗಳ ಸಭೆಯನ್ನು ಕರೆದಿದ್ದು, ಮುಂದಿನ ಹೋರಾಟದ ಕುರಿತು ಚರ್ಚಿಸಲಿದ್ದಾರೆ.. ಅಧಿವೇಶದಲ್ಲಿ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ತಯಾರಿ ನಡೆಸುತ್ತಿವೆ. ಅಮಾನತ್ತಾಗಿರುವ 12 ಸಂಸದರ ಪೈಕಿ ಆರು ಮಂದಿ ಕಾಂಗ್ರೆಸ್ ಸದಸ್ಯರಿದ್ದಾರೆ. ಶಿವಸೇನಾ ಹಾಗೂ ಟಿಎಂಸಿಯ ಇಬ್ಬರು ಸಂಸದರು ಹಾಗೂ ಸಿಪಿಐ ಹಾಗೂ ಸಿಪಿಐಎಂನ ಒಬ್ಬರು ಸಂಸದರು ಅಮಾನತುಗೊಂಡಿದ್ದಾರೆ.

News First Live Kannada


Leave a Reply

Your email address will not be published. Required fields are marked *