ಬೆಂಗಳೂರು: ಅಕಾಲಿಕ ನಿಧನ ಹೊಂದಿದ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಇಂದು ರಾಜ್ಯಾದ್ಯಂತ ಏಕ ಕಾಲಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹಯೋಗದೊಂದಿಗೆ ಚಿತ್ರಮಂದಿರಗಳ ಮುಂದೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ.
ಇದರ ನಿಮಿತ್ತ ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಅಪ್ಪುಗಾಗಿ ವಿಶೇಷ ಗೀತೆಯನ್ನ ಪ್ರಸಾರ ಮಾಡುವ ಮೂಲಕ ನಮನವನ್ನ ಸಲ್ಲಿಸಲಾಗಿದೆ. ಕಾರ್ಯಕ್ರಮದಲ್ಲಿ ರಾಜ್ಯ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆವಿ ಚಂದ್ರಶೇಖರ್ ಹಾಗೂ ಚಿತ್ರ ಸಾಹಿತಿ ವಿ ನಾಗೇಂದ್ರ ಪ್ರಸಾದ್ ಸೇರಿದಂತೆ ಸಾಕಷ್ಟು ಅಭಿಮಾನಿಗಳು ಪಾಲ್ಗೊಂಡಿದ್ದಾರೆ.
ಹುಬ್ಬಳ್ಳಿ: ನಗರದ ಪ್ರಮುಖ ಚಿತ್ರಮಂದಿರ ಅಪ್ಸರಾದಲ್ಲಿ ಪುನೀತ್ ಭಾವಚಿತ್ರಕ್ಕೆ ಮೊಂಬತ್ತಿ ಬೆಳಗಿ, ಮೌನಾಚರಣೆ ಮಾಡಿ ನಮನ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಭಜರಂಗಿ 2 ಖ್ಯಾತಿಯ ಖಳನಟ ವಜ್ರಗಿರಿ ಭಾಗವಹಿಸಿದ್ದಾರೆ.
ಬಿಕ್ಕಿ ಬಿಕ್ಕಿ ಅತ್ತ ಅಜ್ಜಿ
ಧಾರವಾಡ: ಇನ್ನು ನಗರದ ಪದ್ಮ ಥಿಯೇಟರ್ ನಲ್ಲಿ ಜಿಲ್ಲಾ ಚಿತ್ರ ಮಂದಿರಗಳ ಮಾಲೀಕರ ಸಂಘದ ಸಹಭಾಗಿತ್ವದಲ್ಲಿ ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಈ ವೇಳೆ ಅಪ್ಪು ಅಪ್ಪಟ ಅಭಿಮಾನಿಯಾದ ಅಜ್ಜಿಯೊಬ್ಬರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಎಲ್ಲರಿಗೂ ಬೇಕಾಗಿದ್ದ ಅಪ್ಪು ನೀನು..ಎಂದು ಅಕ್ಕಿ ಬಿಕ್ಕಿ ಬಿಕ್ಕಿ ಅಳುತ್ತಿರುವುದನ್ನ ಕಂಡ ಜನರು ಭಾವುಕರಾಗಿದ್ದಾರೆ.
ಅಭಿಮಾನಿಗಳಿಂದ ಅನ್ನಸಂತರ್ಪಣೆ
ರಾಯಚೂರು: ಇತ್ತ ರಾಯಚೂರಿನ ಪೂರ್ಣಿಮ ಚಿತ್ರಮಂದಿರದಲ್ಲಿ ಸಹ ಪುನೀತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸಮರ್ಪಿಸಲಾಯಿತು. ಅಭಿಮಾನಿಗಳ ಆರಾಧ್ಯ ದೈವವಾಗಿರುವ ಪುನೀತ್ ರಾಜಕುಮಾರ ಇನ್ನಿಲ್ಲವಾಗಿದ್ದರೂ ಅವರ ಅಭಿನಯಿಸಿದ ಚಿತ್ರಗಳು, ಅವರ ಸಮಾಜಸೇವೆಗಳ ಮೂಲಕ ಪವರ್ ಸ್ಟಾರ್ ಕನ್ನಡಿಗರ ಮನ ಮನೆಗಳಲ್ಲಿ ಚಿರಸ್ಥಾಯಿಯಾಗಿದ್ದಾರೆ ಅಂತ ಅಭಿಮಾನಿಗಳು ಜೈಕಾರ ಕೂಗಿದರು. ಬಳಿಕ ಅನ್ನ ಸಂತರ್ಪಣೆ ಮಾಡಲಾಯಿತು.