ಬೆಂಗಳೂರು: ಒಂದು ವಿರೋಧ ಪಕ್ಷವಾಗಿ ಕಾಂಗ್ರೆಸ್​ ಆಡಳಿತ ಯಂತ್ರಕ್ಕೆ ತಪ್ಪುಗಳ ಎತ್ತಿ ಹಿಡಿದು ಚುರುಕು ಮುಟ್ಟಿಸೋ ಕೆಲಸ ಮಾಡ್ಬೇಕು. ಆದ್ರೆ, ರಾಜ್ಯ ಕಾಂಗ್ರೆಸ್​ನಲ್ಲಿ ಬಣ ರಾಜಕೀಯದ ಒಳ ಬೇಗುದಿಯೇ ಆರದ ಗಾಯದಂತಾಗಿತ್ತು. ಪದಾಧಿಕಾರಿಗಳ ವಿಚಾರದಲ್ಲೂ ಈ ಬಣ ಬಡಿದಾಟ ತೀವ್ರಗೊಳ್ಳೋದಕ್ಕೆ ಶುರುವಾಗಿತ್ತು. ಇದಕ್ಕೆ ಕಡಿವಾಣ ಹಾಕೋದಕ್ಕೆ ಹೈಕಮಾಂಡ್ ಸರ್ವರಿಗೂ ಸಮಪಾಲು ಸೂತ್ರ ಹೆಣೆದಿದೆ.

 

ರಾಜ್ಯ ಕಾಂಗ್ರೆಸ್​ನಲ್ಲಿ ಬಣ ರಾಜಕಾರಣದ ಹೊಗೆಯಾಡ್ತಿರೋದು ರಹಸ್ಯವಾಗೇನೂ ಉಳಿದಿಲ್ಲ. ಯಾವುದೇ ಒಂದು ಹುದ್ದೆ ನೇಮಕದಲ್ಲಿ ಅಥವಾ ಇನ್ಯಾವುದೋ ವಿಚಾರದಲ್ಲಿ ಇದು ಬಹಿರಂಗವಾಗ್ತಿತ್ತು. ಯೂತ್​ ಕಾಂಗ್ರೆಸ್​ ಫೈಟ್​ನಲ್ಲೂ ಹಿರಿಯರ ನಡುವೆ ಒಳಯುದ್ಧ ನಡೆದಿರೋದು ಗೊತ್ತೇ ಇದೆ. ಮುಂದಿನ ಸಿಎಂ ಗುದ್ದಾಟ ಸೃಷ್ಟಿಯಾಗಿದ್ದು ಇದೇ ಬಣ ಬಡಿದಾಟದಿಂದಲೇ. ಈ ನಡುವೆ ಪದಾಧಿಕಾರಿ ನೇಮಕ ಸಂಬಂಧ ಕಾಂಗ್ರೆಸ್​​​ನಲ್ಲಿ ಪೈಪೋಟಿ ಶುರುವಾಗಿದೆ. ಪಟ್ಟಿಯಲ್ಲಿ ತಮ್ಮ ಬೆಂಬಲಿಗರ ಬಲ ಹೆಚ್ಚಿಸಿಕೊಳ್ಳಲು ತೆರೆಮರೆಯಲ್ಲೇ ಚಕ್ರವ್ಯೂಹ ಸಿದ್ಧಗೊಳ್ತಿದೆ. ​​

ಕೈಪಡೆ ‘ಪವರ್​​’ ಸೆಂಟರ್​​!
ಪ್ರತಿ ನಿತ್ಯ ವಿಪಕ್ಷ ನಾಯಕ ಸಿದ್ದರಾಮಯ್ಯರ ಮನೆಗೆ ಹಲವು ಬೆಂಬಲಿಗರು ಆಗಮಿಸ್ತಿದ್ದಾರೆ. ಕೆಲ ಕಾಲ ಮಾತುಕತೆಯನ್ನೂ ನಡೆಸಿ, ಪದಾಧಿಕಾರಿ ಪಟ್ಟಿಯಲ್ಲಿ ಸ್ಥಾನ ಕಲ್ಪಿಸುವಂತೆ ಸಿದ್ದರಾಮಯ್ಯರ ಮೇಲೆ ಒತ್ತಡ ಹೇರುತ್ತಿದ್ದಾರೆ. ಸದ್ಯ, ಪಟ್ಟಿಯನ್ನ ಹೈಕಮಾಂಡ್​ಗೆ ಪಟ್ಟಿ ರವಾನಿಸಿ ಭೇಟಿಗೆ ಸಮಯ ಕೇಳಿರೋ ವಿಪಕ್ಷ ನಾಯಕ, ಕಾದು ನೋಡುವ ತಂತ್ರ ಅನುಸರಿಸ್ತಿದ್ದಾರೆ. ಹೈಕಮಾಂಡ್​ನಿಂದ ಗ್ರೀನ್ ಸಿಗ್ನಲ್ ಸಿಕ್ಕ ಕೂಡಲೇ ದೆಹಲಿ ಯಾತ್ರೆ ನಡೆಸೋದಕ್ಕೂ ಪ್ಲಾನ್ ನಡೆಸಿದ್ದಾರೆ. ಇನ್ನೊಂದಡೆ ಡಿಕೆ ಶಿವಕುಮಾರ್ ನಿವಾಸದತ್ತಲೂ ಅನೇಕ ನಾಯಕರು ನಿತ್ಯ ಭೇಟಿ ನೀಡ್ತಿದ್ದಾರೆ. ಪದಾಧಿಕಾರಿ ಪಟ್ಟಿಯಲ್ಲಿ ಅವಕಾಶ ನೀಡುವಂತೆ ಎಡಬಿಡದೆ ಒತ್ತಡ ಹಾಕೋ ಪ್ರಯತ್ನ ನಡೆದಿದೆ. ಈಗಾಗಲೇ ವರಿಷ್ಠರನ್ನ ಭೇಟಿ ಮಾಡಿ ಬಂದಿರುವ ಡಿ.ಕೆ ಶಿವಕುಮಾರ್, ​​ತಮ್ಮ ಬೆಂಬಲಿಗರ ಪಟ್ಟಿಯನ್ನ ಹೈಕಮಾಂಡ್​ ಮುಂದಿಟ್ಟು, ವಾಪಸ್ ಆಗಿದ್ದಾರೆ.

ಇದಿಷ್ಟು ಡಿಕೆಶಿ ಹಾಗೂ ಸಿದ್ದರಾಮಯ್ಯರ ನಡುವಿನ ಪೈಪೋಟಿಯಾದ್ರೆ, ತಟಸ್ಥ ಬಣವೂ ಪದಾಧಿಕಾರಿಗಳ ಹುದ್ದೆಗಳತ್ತ ಕಣ್ಣಿಟ್ಟಿದೆ. ಹೀಗೆ ರಾಜ್ಯ ಕಾಂಗ್ರೆಸ್​ನಲ್ಲಿ ಒಳಾಂಗಣ ರೇಸ್​ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಇದಕ್ಕೆ ಕಡಿವಾಣ ಹಾಕೋದು ಹೈಕಮಾಂಡ್ ಮುಂದಿರೋ​ ಸವಾಲು. ಈ ನಿಟ್ಟಿನಲ್ಲಿ ಜಾಣ ಹೆಜ್ಜೆ ಅನುಸರಿಸೋದಕ್ಕೆ ಮುಂದಾಗಿರೋ ದೆಹಲಿ ನಾಯಕರು, ಸರ್ವರಿಗೂ ಸಮಪಾಲು ಅನ್ನೋ ಸೂತ್ರ ಹೆಣೆದಿದ್ದಾರೆ. ಈ ಸೂತ್ರದ ಮೊರೆ ಹೋಗಿರೋದಕ್ಕೆ ಕೆಲ ಕಾರಣಗಳು ಇವೆ.

ಸರ್ವರಿಗೂ ಸಮಪಾಲು!
ಕಾರಣ 1 : ರಾಜ್ಯ ಕಾಂಗ್ರೆಸ್​ನಲ್ಲಿ ಎರಡು ಮತ್ತೊಂದು ಶಕ್ತಿ ಕೇಂದ್ರಗಳ ಸೃಷ್ಟಿ
ಕಾರಣ 2 : ಪವರ್ ಸೆಂಟರ್​ಗಳಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನಿವಾಸಗಳು
ಕಾರಣ 3 : ರಾಜಕೀಯ ಬಲ ಹೆಚ್ಚಿಸಿಕೊಳ್ಳಲು ಸಿದ್ದು, ಡಿಕೆಎಸ್​ ಬಣಗಳ ಪೈಪೋಟಿ
ಕಾರಣ 4 : ಮತ್ತೊಂದ್ಕಡೆ ಹಿರಿಯ ನಾಯಕ ಖರ್ಗೆ, ಪರಮೇಶ್ವರ್​ರಿಂದ ಫೈಟ್​​​
ಕಾರಣ 5 : ಪದಾಧಿಕಾರಿಗಳ ಪಟ್ಟಿಯಲ್ಲಿ ಬೆಂಬಲಿಗರಿಗೆ ಸ್ಥಾನ ಕಲ್ಪಿಸಲು ಲಾಬಿ
ಕಾರಣ 6 : ರಾಜ್ಯದ ನಾಯಕರ ಮೇಲಾಟ ಗಮನಿಸಿರುವ ಕೈ ಹೈಕಮಾಂಡ್
ಕಾರಣ 7 : ಸಮಪಾಲಿನ ಸೂತ್ರಕ್ಕೆ ಮುಂದಾದ ಕಾಂಗ್ರೆಸ್ ಹೈಕಮಾಂಡ್​
ಕಾರಣ 8 : ‘ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು’ ಸೂತ್ರ

ಒಟ್ನಲ್ಲಿ ಯಾವುದೇ ನಾಯಕರ ಬೆಂಬಲಿಗರಿಗೆ ಹೆಚ್ಚಿನ ಸ್ಥಾನ ಸಿಕ್ಕರೆ, ಇನ್ನೋರ್ವ ನಾಯಕನಿಗೆ ಬೇಸರವಾಗುತ್ತೆ. ಇದ್ರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ಇದನ್ನೆಲ್ಲಾ ಅರಿತಿರೋ ಹೈಕಮಾಂಡ್​, ಈಕ್ವಾಲಿಟಿ ಮಂತ್ರ ಜಪಿಸ್ತಿದೆ. ಎಲ್ಲರ ಬೆಂಬಲಿಗರಿಗೂ ಸಮಾನ ಸ್ಥಾನ ನೀಡೋದಕ್ಕೆ ಪ್ಲಾನ್ ಮಾಡಿದೆ. ಇದು ಜಾಣ ನಡೆಯೇ ಇರಬಹುದು. ಆದ್ರೆ, ಇದು ಬಣ ರಾಜಕಾರಣಕ್ಕೆ ಬ್ರೇಕ್​ ಹಾಕುತ್ತಾ ಅನ್ನೋದನ್ನ ಕಾದು ನೋಡಬೇಕಷ್ಟೇ.

ವಿಶೇಷ ವರದಿ- ಹರೀಶ್ ಕಾಕೋಳ್

The post ರಾಜ್ಯ ಕಾಂಗ್ರೆಸ್​ನಲ್ಲಿ ಬಣ ಬಡಿದಾಟ.. ‘ಸರ್ವರಿಗೂ ಸಮಪಾಲು’ ಸೂತ್ರ ಹಣೆದ ‘ಕೈ’ಕಮಾಂಡ್! appeared first on News First Kannada.

Source: newsfirstlive.com

Source link