ರಾಜ್ಯ ಸರ್ಕಾರ ವಜಾ ಮಾಡುವಂತೆ ಗವರ್ನರ್​​ಗೆ ಪತ್ರ ಬರೆಯುತ್ತೇನೆ- ಸಿದ್ದರಾಮಯ್ಯ


ಮೈಸೂರು: ರಾಜ್ಯ ಸರ್ಕಾರ ವಜಾ ಮಾಡುವಂತೆ ರಾಜ್ಯ ಪಾಲರಿಗೆ ಪತ್ರ ಬರೆಯುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಗುತ್ತಿಗೆದಾರರ ಸಂಘದವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಪ್ರತಿ ಕಾಮಗಾರಿ ಟೆಂಡರ್ ಪಡೆಯಲು ಶೇ.40ರಷ್ಟು ಪರ್ಸೆಂಟೇಜ್ ಕೊಡಬೇಕು ಅಂತ ಆರೋಪಿಸಿದ್ದಾರೆ. ಯಾವ ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಪರ್ಸೆಂಟೇಜ್ ಎಂಬುದನ್ನೂ ವಿವರಿಸಿದ್ದಾರೆ‌. ಲೋಕೋಪಯೋಗಿ, ಜಲಸಂಪನ್ಮೂಲ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ಯಾವ ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಪರ್ಸೆಂಟೇಜ್ ಎಂಬುದನ್ನು ಮಾಧ್ಯಮಗಳ ಮುಂದೆಯೇ ಬಹಿರಂಗವಾಗಿ ಹೇಳಿದ್ದಾರೆ.

ಈ ಆರೋಪಗಳನ್ನ ನಾನು ಮಾಡಿದ್ದರೆ ಪ್ರತಿಪಕ್ಷದವರು ಅನ್ನಬಹುದಿತ್ತು. ಆದರೆ ಟೆಂಡರ್ ಪಡೆಯುವವರೆ ಶೇ.40 ಪರ್ಸೆಂಟ್ ಆರೋಪ ಮಾಡಿರುವುದರಿಂದ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಮುಂದುವರೆಯಬಾರದು. ಪ್ರಧಾನಿ ಮೋದಿಯವರು ‘ನಾ ಕಾವೂಂಗಾ ನಾ ಕಾನೇದೂಂಗಾ’ ಅನ್ನುತ್ತಿದ್ದರು. ಆದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಕಮಿಷನ್ ಪಡೆಯುವ ಸರ್ಕಾರವನ್ನ ನಾನು ಜೀವಮಾನದಲ್ಲಿ ನೋಡಿಲ್ಲ. ಹೀಗಾಗಿ ಕೂಡಲೇ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ: ‘ನಾಚಿಕೆ ಆಗಲ್ವಾ ನಿಮಗೆ ನನ್ನ ಸೋಲಿಸಿ ಸಹಾಯ ಕೇಳ್ತೀರಿ’ ಮತದಾರರ ಮೇಲೆ ರೇಗಿದ ಸಿದ್ದರಾಮಯ್ಯ

ಇದೇ ವೇಳೆ ದೆಹಲಿ ರೈತರ ಹೋರಾಟದಲ್ಲಿ ಮೃತಪಟ್ಟವರಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ ಸಿದ್ದರಾಮಯ್ಯ ಅವರು, ಇದುವರೆಗೂ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿರುವವರೂ ರೈತರೇ ಅಲ್ಲ ಅನ್ನುತ್ತಿದ್ದರು. ಈಗ ಮೂರು ಕಾಯ್ದೆಗಳನ್ನು ವಾಪಸ್​​ ತೆಗೆದುಕೊಂಡಿದ್ದಾರೆ. ಈಗ ರೈತರ ಹೋರಾಟಕ್ಕೆ ಮಣಿದು ಕೃಷಿ ಕಾಯ್ದೆಗಳನ್ನು ವಾಪಸ್​ ಪಡೆದಿದ್ದಾರೆ. ಬಿಜೆಪಿಯವರಿಗೆ ತಡವಾಗಿಯಾದರೂ ಜ್ಞಾನೋದಯವಾಗಿದೆ. ರಾಜಕೀಯ ಒತ್ತಡಕ್ಕೆ ಮಣಿದಿದ್ದಾರೆ ಅಂತ ನಾನು ಹೇಳುವುದಿಲ್ಲ.
ಇದು ರೈತರ ಹೋರಾಟಕ್ಕೆ ಸಂದ ಜಯ. ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ರೈತರ ನ್ಯಾಯಯುತವಾದ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದು ಸ್ಪಷ್ಟಪಡಿಸಿದರು.

News First Live Kannada


Leave a Reply

Your email address will not be published. Required fields are marked *