ರಾಜ್​ಕುಮಾರ್ ಅವರನ್ನು ಪುನೀತ್​ರಲ್ಲಿಯೇ ಕಂಡಿದ್ದೆವು; ಅಪ್ಪು ನೋಡಲು ಬಂದ ಮಂಗಳಮುಖಿಯರ ಕಂಬನಿ | Transgenders pay tribute to Puneeth Rajkumar and remembers Puneeth gesture towards them


ರಾಜ್​ಕುಮಾರ್ ಅವರನ್ನು ಪುನೀತ್​ರಲ್ಲಿಯೇ ಕಂಡಿದ್ದೆವು; ಅಪ್ಪು ನೋಡಲು ಬಂದ ಮಂಗಳಮುಖಿಯರ ಕಂಬನಿ

ಪುನೀತ್ ರಾಜ್​ಕುಮಾರ್ ದರ್ಶನ ಪಡೆಯಲು ಆಗಮಿಸಿದ ಮಂಗಳಮುಖಿಯರು

ಬೆಂಗಳೂರು: ನಟ ಪುನೀತ್ ರಾಜ್​ಕುಮಾರ್ ಅವರ ಸಮಾಧಿಯ ದರ್ಶನ ಪಡೆಯಲು ರಾಜ್ಯದ ವಿವಿಧ ಭಾಗದಿಂದ ಜನರು ಆಗಮಿಸುತ್ತಿದ್ದಾರೆ. ಇಂದು ಜಿಟಿಜಿಟಿ ಮಳೆ ಇದ್ದರೂ ಕೂಡ, ಸರದಿಯಲ್ಲಿ ನಿಂತು ಅಭಿಮಾನಿಗಳು ದರ್ಶನ ಪಡೆದಿದ್ದಾರೆ. ವಿಶೇಷವೆಂದರೆ ಇಂದು ಮಂಗಳಮುಖಿಯರು ಕಂಠೀರವ ಸ್ಟುಡಿಯೋಗೆ ಆಗಮಿಸಿ ಪುನೀತ್​ಗೆ ನಮನ ಸಲ್ಲಿಸಿದ್ದಾರೆ. ನಂತರ ಮಾತನಾಡಿದ ಯಲ್ಲಮ್ಮ, ಗಂಗಾ ಭಾವುಕರಾಗಿ ಪುನೀತ್ ಅವರ ವ್ಯಕ್ತಿತ್ವವನ್ನು ವಿವರಿಸಿದ್ದಾರೆ. ನಟ ಪುನೀತ್ ರಾಜ್​ಕುಮಾರ್​ ತುಂಬಾ ಒಳ್ಳೆಯವರಾಗಿದ್ದರು. ಯಾರ್ಯಾರೋ ಭೂಮಿ ಮೇಲಿದ್ದಾರೆ,  ಆದರೆ ಅಪ್ಪುನ ಬೇಗ ಕಳೆದುಕೊಂಡೆವು ಎಂದು ಅವರು ಕಂಬನಿ ಮಿಡಿದಿದ್ದಾರೆ. ಪುನೀತ್ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿರುವ ಅವರು, ‘‘ರಾಜಕುಮಾರ’ ಸಿನಿಮಾ ಶೂಟಿಂಗ್ ವೇಳೆ ನಾವು ಹೋಗಿದ್ದೆವು. ಅಂದು ಪುನೀತ್​ರವರು ನಮ್ಮನ್ನು ಸ್ವಂತ ಅಕ್ಕ ತಂಗಿಯರಂತೆ ಪ್ರೀತಿಯಿಂದ ಮಾತನಾಡಿಸಿ, ಉಪಚರಿಸಿದ್ದರು. ಮಂಗಳಮುಖಿಯರಿಗೂ ಅಂತಹ ಗೌರವ ಕೊಟ್ಟಿದ್ದರು. ಅಪ್ಪಾಜಿಯಂತೆ ಬದುಕಬೇಕು ಆಶೀರ್ವಾದ ಮಾಡಿ ಅಂದಿದ್ದರು. ನಾವು ಪುನೀತ್ ರಾಜ್​ಕುಮಾರ್​ಗೆ ಆಶೀರ್ವಾದ ಮಾಡಿದ್ದೆವು’’ ಎಂದು ನುಡಿದಿದ್ದಾರೆ.

ಪುನೀತ್ ನಿಧನದಿಂದ ಆಗಿರುವ ಆಘಾತವನ್ನು ಹೇಳಿಕೊಂಡ ಯಲ್ಲಮ್ಮ, ಗಂಗಾ, ‘‘ಅಪ್ಪು ರಾಜ್​ಕುಮಾರ್​ರಂತೆ ಇರುತ್ತಾರೆ ಅಂದುಕೊಂಡಿದ್ದೆವು. ಆದರೆ ಇಂದು ಅವರಿಲ್ಲದಿದ್ದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ನಾವು ರಾಜ್​ಕುಮಾರ್​ ನೋಡಿರಲಿಲ್ಲ, ಪುನೀತ್ ಅವರಲ್ಲೇ ರಾಜ್​ಕುಮಾರ್ ಅವರನ್ನು ಕಂಡಿದ್ದೆವು’’ ಎಂದು ಭಾವುಕರಾಗಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿ ನಿತ್ಯ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಪುನೀತ್ ರಾಜ್​ಕುಮಾರ್ ಸಮಾಧಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ವಿವಿಧ ಭಾಗದಿಂದ ಮಕ್ಕಳು, ಹಿರಿಯರಾದಿಯಾಗಿ ಬಂದು ದರ್ಶನ ಪಡೆದು ನಮನ ಸಲ್ಲಿಸುತ್ತಿದ್ದಾರೆ. ಇಂದು ನಗರದಲ್ಲಿ ಜಿಟಿಜಿಟಿ ಮಳೆಯ ವಾತಾವರಣವಿದ್ದರೂ ಕೂಡ, ಜನರು ಆಗಮಿಸಿ ದರ್ಶನ ಪಡೆದಿದ್ದಾರೆ.

ದಾವಣಗೆರೆ: ಉದ್ಯಾನಕ್ಕೆ ಪುನೀತ್ ನಾಮಕರಣ ಮಾಡಿದ ಸ್ಥಳೀಯರು
ದಾವಣಗೆರೆ: ಉದ್ಯಾನಕ್ಕೆ ನಟ ಪುನೀತ್ ರಾಜ್​ಕುಮಾರ್ ಅವರ ಹೆಸರನ್ನು ಸ್ಥಳೀಯರು ನಾಮಕರಣ ಮಾಡಿದ್ದಾರೆ. ನಗರದ ಎಸಿಸಿ ಬಿ ಬ್ಲಾಕ್ ಮೂರನೇ ಮುಖ್ಯ ರಸ್ತೆಯಲ್ಲಿ ಇರುವ ಉದ್ಯಾನದ ಮುಖ್ಯ ದ್ವಾರದ ಬಳಿ ಪುನೀತ್ ಭಾವ ಚಿತ್ರ ಇರುವ ಫಲಕವನ್ನು ಹಾಕಲಾಗಿದೆ. ಉದ್ಯಾನಕ್ಕೆ ಪುನೀತ್ ರಾಜಕುಮಾರ ಉದ್ಯಾನ ಉದ್ಯಾನ ಎಂದು ನಾಮಕರಣ ಮಾಡಲಾಗಿದ್ದು, ಇದಕ್ಕಾಗಿ ವಿಶೇಷ ಕಾರ್ಯಕ್ರಮ ನಡೆಸಿ ಅಪ್ಪು ನಿಧನಕ್ಕೆ ಸ್ಥಳೀಯರು ಸಂತಾಪ ಸೂಚಿಸಿದ್ದಾರೆ.

ನಗರದ ಗಾಂಧಿ ವೃತ್ತದ ಬಳಿ ಗೂಡ್ಸ್ ವಾಹನ ಚಾಲಕ ಹಾಗೂ ಮಾಲೀಕರ ಸಂಘದಿಂದ ನಟ ಪುನೀತ್ ಪುಣ್ಯ ಸ್ಮರಣೆ ನಡೆಸಲಾಗಿದೆ. ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಹಾಗೂ ರಕ್ತದಾನ ಶಿಬಿರವನ್ನು ಏರ್ಪಡಿಸಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಯುವಕರಿಂದ ರಕ್ತದಾನ ಮಾಡಲಾಗಿದೆ. ಈ ಮೂಲಕ ವಿನೂತನ ರೀತಿಯಲ್ಲಿ ಪುನೀತ್​ಗೆ ನಮನ ಸಲ್ಲಿಸಲಾಗಿದೆ.

ಇದನ್ನೂ ಓದಿ:

Puneeth Rajkumar: ಪುನೀತ್ ಸರ್ ಜೊತೆ ನಟಿಸೋ ಕನಸು ಕನಸಾಗೇ ಉಳಿಯಿತು; ಭಾವುಕರಾದ ನಟಿ ಆಶಿಕಾ ರಂಗನಾಥ್

ಪುನೀತ್​ ನಿಧನದ ಬಳಿಕ ಜಿಮ್​ಗೆ ತೆರಳಲು ಯುವಕರ ಹಿಂದೇಟು; ಪೋಷಕರಲ್ಲೂ ಆವರಿಸಿದೆ ಭಯ

TV9 Kannada


Leave a Reply

Your email address will not be published.