ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಪತಿ ರಾಜ್ ಕುಂದ್ರಾ ವಿರುದ್ಧ 1.51 ಕೋಟಿ ರೂಪಾಯಿ ವಂಚನೆ ಆರೋಪ ಕೇಳಿ ಬಂದಿದೆ. ಮುಂಬೈ ಮೂಲದ ಉದ್ಯಮಿ ಒಬ್ಬರು ನೀಡಿದ ದೂರಿನ ಆಧಾರದ ಮೇಲೆ ಬಾಂದ್ರಾ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಉದ್ಯಮಿ ನಿತಿನ್ ಬರಾಯಿ ಅವರಿಂದ ಎಸ್‌ಎಫ್‌ಎಲ್ ಫಿಟ್‌ನೆಸ್ ಕಂಪನಿಯ ನಿರ್ದೇಶಕ ಕಾಶಿಫ್ ಖಾನ್ ಮತ್ತು ಶಿಲ್ಪಾ ದಂಪತಿ 2014ರಲ್ಲಿ ಫಿಟ್‌ನೆಸ್ ಕಂಪನಿಯ ಫ್ರಾಂಚೈಸಿ ನೀಡುವುದಾಗಿ ಹೇಳಿ ಹಣ ಪಡೆದಿದ್ದರು. ಪುಣೆ ಹತ್ತಿರದ ಹಡಪ್‌ಸರ್ ಮತ್ತು ಕೋರೆಗಾಂವ್‌ನಲ್ಲಿ ಜಿಮ್ ಮತ್ತು ಸ್ಪಾ ತೆರೆದು ಅದರ ಲಾಭಾಂಶವನ್ನು ನೀಡೋದಾಗಿ 1.54 ಕೋಟಿಯನ್ನು ಹೂಡಿಕೆ ಮಾಡಿಸಿದ್ದರು. ಆದರೆ ಇದುವರೆಗೆ ತನಗೆ ಯಾವುದೇ ಫ್ರಾಂಚೈಸಿಯನ್ನು ನೀಡಿಲ್ಲ. ಮತ್ತು ಹೂಡಿಕೆ ಹಣ ಹಿಂದಿರುಗಿಸುವಂತೆ ಕೇಳಿದರೆ ನಿರಾಕರಿಸಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ.
ಇದನ್ನೂ ಓದಿ:ಜೈಲಿನಿಂದ ಹೊರ ಬಂದ ಬಳಿಕ ಟ್ವಿಟರ್, ಇನ್ಸ್ಟಾಗೆ ಗುಡ್ಬೈ ಹೇಳಿದ ಶಿಲ್ಪಾ ಶೆಟ್ಟಿ ಪತಿ
ದೂರು ಪಡೆದುಕೊಂಡ ಪೊಲೀಸರು ಕಂಪನಿ ನಿರ್ದೇಶಕ ಮತ್ತು ಶಿಲ್ಪಾ ದಂಪತಿಗಳ ಮೇಲೆ ಭಾರತೀಯ ದಂಡ ಸಂಹಿತೆ 420, 120-ಬಿ, 506, 34, ಸೆಕ್ಷನ್ಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಇನ್ನು ಅಶ್ಲೀಲ ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ರಾಜ್ ಕುಂದ್ರಾ ಇತ್ತೀಚಿಗೆ ಜಾಮೀನು ಪಡೆದು ಹೊರ ಬಂದಿದ್ದಾರೆ. ಜೈಲಿನಿಂದ ಹೊರಬಂದ ಕೆಲವೇ ಕ್ಷಣಗಳಲ್ಲಿ ಮತ್ತೊಂದು ಆರೋಪ ಅವರನ್ನು ಸುತ್ತಿಕೊಂಡಿದೆ.