ಅಪರಾಧಿಗಳನ್ನು ಪೊಲೀಸರು ಜೈಲಿಗೆ ಅಟ್ಟುವುದನ್ನು ನೋಡಿದ್ದೇವೆ. ಆದ್ರೆ, ಜನರೇ ಸ್ವ ಇಚ್ಛೆಯಿಂದ ಜೈಲು ಸೇರುವುದನ್ನು ನೋಡಿದ್ದೀರಾ? ಇಲ್ಲ ತಾನೆ? ಆದ್ರೆ ಅದೊಂದು ಹಳ್ಳಿಯ ಜನ ತಾವೇ ಜೈಲಿಗೆ ಹೋಗ್ತಾ ಇದ್ದಾರೆ. ಇದೇನಿದು ಅಚ್ಚರಿಯ ವಿಷಯ ಅನ್ನೋದನ್ನು ಕಂಪ್ಲೀಟ್‌ ಆಗಿ ಹೇಳ್ತೀವಿ ಕೇಳಿ.

ಏನೇನೆಲ್ಲಾ ಅಪರಾಧ ಮಾಡಿ ನಿತ್ಯ ನೂರಾರು ಮಂದಿ ಜೈಲಿಗೆ ಹೋಗ್ತಾನೇ ಇರ್ತಾರೆ. ಆದರೆ, ಸುಮ್ಮನೇ ಯಾರಾದರೂ ಜೈಲಿಗೆ ಹೋಗ್ತಾರಾ. ಅಪರಾಧ ಮಾಡಿದವರು ಕೂಡ ಹೇಗಾದರೂ ತಪ್ಪಿಸಿಕೊಳ್ಳಬೇಕು ಅಂತಾನೆ ಪ್ರಯತ್ನ ಮಾಡ್ತಾರೆ. ಬಹಳಷ್ಟು ಜನ ತಪ್ಪಿಸಿಕೊಂಡೂ ಇರ್ತಾರೆ. ಆದ್ರೆ, ಬೇಕು ಬೇಕು ಅಂತ ಅರಾಮಾಗಿ ಜೈಲಿಗೆ ಹೋಗಿ ಬರೋರನ್ನು ನೀವೆಲ್ಲಾದ್ರೂ ನೋಡಿದ್ದೀರಾ. ಈ ಊರಿನಲ್ಲಿ ನಿತ್ಯ ಜನ ಜೈಲಿಗೆ ಹೋಗಿ ಬರ್ತಾರೆ.

ಮಹಿಳೆಯರು, ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಹೇಗೆ ಜೈಲಿನತ್ತ ಹೋಗ್ತಾರೆ. ಜೈಲು ಅಂದ್ರೆ ಅದೇನು ಪ್ರೀತಿಯೋ ಇವರಿಗೆ, ತಾವು ಹೋಗೋದಲ್ಲದೇ ತಮ್ಮ ಮಕ್ಕಳು, ಮರಿಗಳನ್ನು ಕರೆದುಕೊಂಡು ಹೋಗ್ತಾರೆ. ಅಲ್ಲಿಯೇ ವಾಸ ಮಾಡ್ತಾರೆ. ಜೈಲು ಅಂದ್ರೆ ಶಿಕ್ಷೆಗೆ ಒಳಪಡುವ ತಾಣ ಅಂತ ಅಂದುಕೊಂಡವರು ಕೂಡ ಒಮ್ಮೆ ದಂಗಾಗಿ ಬಿಡ್ತಾರೆ. ಇವರಿಗೆ ಜೈಲು ಒಂದು ರೀತಿ ಮನೆಯ ತರಾ ಆಗಿ ಬಿಟ್ಟಿದೆ. ನಿತ್ಯವೂ ಇಲ್ಲಿಗೆ ಹೋಗ್ತಾರೆ. ನಿತ್ಯ ಇಲ್ಲಿಂದ ಬರ್ತಾರೆ. ಯಾಕೆ ಅನ್ನೋದಕ್ಕೆ ಒಂದು ಸ್ಪಷ್ಟ ಕಾರಣವೂ ಇದೆ.

ಛತ್ತೀಸ್‌ಗಢದಲ್ಲಿ ಈ ಹಳ್ಳಿಯ ಜನಕ್ಕೆ ಜೈಲೇ ಸೇಫ್‌!!
ಹೀಗೆ ತಮ್ಮ ಮಕ್ಕಳು ಮರಿಗಳ ಜೊತೆ ಜನ ಜೈಲಿನತ್ತ ಹೆಜ್ಜೆ ಹಾಕುತ್ತಿರುವುದು ಛತ್ತೀಸ್‌ಗಢ ಕಂಕೇರ್‌ ಜಿಲ್ಲೆಯ ಭಾನುಪ್ರತಾಪ್ಪುರ್‌ ಹಳ್ಳಿಯ ಜನ. ಇವರಿಗೆ ತಮ್ಮ ಊರೇ ಬೇಡವಾಗಿದೆ. ತಾವು ಉರಲ್ಲಿದ್ದರೆ ಜೀವಂತ ಉಳಿಯಲ್ಲ, ತಮ್ಮ ಹೆಂಡತಿ ಮಕ್ಕಳೂ ಉಳಿಯಲ್ಲಾ ಅಂತ ಓಡೋಡಿ ಬಂದು ಜೈಲು ಸೇರುತ್ತಿದ್ದಾರೆ. ಹಾಗಾದ್ರೆ ಈ ಊರಿನಲ್ಲಿ ಏನಾಗಿದೆ. ಯಾರು ಈ ಊರ ಜನರಿಗೆ ಕಾಟ ಕೊಡ್ತಾ ಇದಾರೆ. ಯಾರ ಕಣ್ಣು ಈ ಊರ ಮೇಲೆ ಬಿದ್ದಿದೆ. ಛತ್ತೀಸ್ ಗಢದಲ್ಲಿ ನಕ್ಸಲರೇನಾದ್ರೂ ಇವರಿಗೆ ತೊಂದ್ರೆ ಕೊಡ್ತಾ ಇದಾರೆ. ಇದ್ಯಾವ ಸಮಸ್ಯೆಯೂ ಇಲ್ಲಿ ಇಲ್ಲ. ಹೀಗಾಗಿ ಜನ ನಕ್ಸಲರ ಭಯಕ್ಕೆ ಓಡಿಹೋಗಿ ಜೈಲು ಸೇರುತ್ತಿದ್ದಾರೆ ಅಂದುಕೊಂಡರೆ ಅದು ತಪ್ಪು. ಅಷ್ಟಕ್ಕೂ ಅವರೇಕೆ ಜೈಲಿಗೆ ಹೋಗ್ತಾರೆ ಅಂತ ಹೇಳ್ತೀವಿ ಕೇಳಿ.

ಗಜಪಡೆ ದಾಳಿಗೆ ಬೆಚ್ಚಿ ಬಿದ್ದ ಜನ
ಜೀವ ರಕ್ಷಣೆಗೆ ಹೋಗ್ತಿದಾರೆ ಜೈಲಿಗೆ
ಹೌದು, ಈ ಹಳ್ಳಿಯ ಜನ ನಕ್ಸಲರ ಗುಂಡಿನ ದಾಳಿಗೆ ಹೆದರಲ್ಲ. ಅವರೆದುರು ಎದೆಯೊಡ್ಡಿ ನಿಲ್ಲುವ ಧೈರ್ಯವೂ ಇದೆಯಂತೆ. ಆದ್ರೆ, ಇವರನ್ನು ಭಯಭೀತರಾಗಿಸಿದ್ದು ಗಜಪಡೆ. ಹೌದು, ಆನೆ ಹಿಂಡಿನ ದಾಳಿ ಇವರಲ್ಲಿ ಎಲ್ಲಿಲ್ಲದ ಭಯ ಹುಟ್ಟಿಸಿ ಬಿಟ್ಟಿದೆ. ಊರಲ್ಲಿ ಇದ್ದರೆ ತಾನು ಬದುಕಲ್ಲ ಅಂತ ಭಯ ಬಿದ್ದು ಜೈಲಿಗೆ ಹೆಂಡತಿ ಮಕ್ಕಳ ಸಮೇತ ಓಡೋಡಿ ಹೋಗ್ತಾರೆ. ಅಷ್ಟಕ್ಕೂ ಗಜಪಡೆಗಳು ಏನು ಮಾಡುತ್ತವೆ, ಹೆಚ್ಚು ಅಂದ್ರೆ ಹೊಲಗಳಲ್ಲಿದ್ದ ಬೆಳೆ ಹಾಳು ಮಾಡಿ ಹೋಗುತ್ತವೆ ಅಂದುಕೊಂಡ್ರೆ ಅದು ತಪ್ಪು. ಹಾಗಾದ್ರೆ ಅವು ಏನು ಮಾಡ್ತವೆ ಅನ್ನೋದನ್ನೂ ಹೇಳ್ತೀವಿ.

ಪ್ರತಿ ನಿತ್ಯ ರಾತ್ರಿ ಹಳ್ಳಿಗೆ ದಾಳಿ ಇಡ್ತವೆ ಆನೆಗಳು
ಛತ್ತೀಸ್‌ಗಢದ ಈ ಹಳ್ಳಿಯಲ್ಲಿ ಬೀಡು ಬಿಟ್ಟಿರುವ 30 ಆನೆಗಳ ಹಿಂಡಿದೆ. ಈ ಹಳ್ಳಿ ಅಂದ್ರೆ ಆನೆಗಳಿಗೂ ಎಲ್ಲಿಲ್ಲದ ಪ್ರೀತಿ. ಹೊಲದಲ್ಲಿ ಬೆಳೆದ ಬೆಳೆಯನ್ನು ಅರ್ಧಂಬರ್ಧ ತಿಂದು ಹಾಳು ಮಾಡಿ ಹೋಗುವುದು ಮಾತ್ರ ಅಲ್ಲ. ರಾತ್ರಿ ವೇಳೆ ಮನೆಗಳ ಮೇಲೆ ದಿಢೀರ್‌ ದಾಳಿ ಮಾಡುತ್ತವೆ. ಮನೆಯೊಳಗೆ ರೈತರು ದವಸ ಧಾನ್ಯಗಳನ್ನು ಶೇಖರಿಸಿಟ್ಟುಕೊಳ್ಳುತ್ತಾರೆ ಅಂತ ಈ ಆನೆಗಳಿಗೂ ಗೊತ್ತಾಗಿ ಬಿಟ್ಟಿದೆ. ಹೀಗಾಗಿ ಪ್ರತಿ ದಿನ ರಾತ್ರಿ ಮನೆಗಳ ಮೇಲೆ ದಾಳಿ ಮಾಡುತ್ತವೆ. ದವಸ ಧಾನ್ಯಗಳನ್ನು ತಿನ್ನುತ್ತವೆ. ಒಮ್ಮೆ ಜನ ಏನಾದ್ರೂ ಅಡ್ಡಿ ಪಡಿಸಿದ್ರೆ ಅವರ ಕಥೆ ಗೋವಿಂದ. ಸೇಮ್‌ ದರೋಡೆಕೋರರಂತೆ ವರ್ತಿಸುವ ಈ ಆನೆಗಳ ದಾಳಿ ರಾತ್ರಿ ಮಾತ್ರ ಇರುತ್ತೆ. ಬೆಳಗ್ಗೆ ಕಾಡಿಗೆ ಹೋಗಿ ವಿಶ್ರಾಂತಿ ಪಡೆಯುತ್ತವೆ. ಆನೆಗಳಿಗೇನೋ ಇದು ಒಂದು ರೀತಿ ದಿನಚರಿ ಆಗಿಬಿಟ್ಟಿದೆ. ಆದ್ರೆ ಈ ಹಳ್ಳಿ ಜನಗಳಿಗೆ ಇದು ದೊಡ್ಡ ಸವಾಲಾಗಿ ಹೋಗಿದೆ. ಕಟ್ಟಿದ ಮನೆಯಲ್ಲಿ ಇರುವಂತಿಲ್ಲ. ಊಟ ಮಾಡಿ ನೆಮ್ಮದಿಯಿಂದ ಮಲಗುವಂತೆ ಇಲ್ಲ.

ದಿಕ್ಕು ತೋಚದೆ ಜೈಲಿಗೆ ಹೋಗ್ತಾರೆ ಜನ
ರಾತ್ರಿ ವೇಳೆ ಹಳ್ಳಿಯಲ್ಲಿ ಯಾರೂ ಇರಲ್ಲ
ಆನೆ ದಾಳಿಯಿಂದ ರಕ್ಷಣೆ ಮಾಡಿಕೊಳ್ಳುವುದು ಹೇಗೆ ಅನ್ನುವುದು ಜನರಿಗೆ ದಿಕ್ಕುತೋಚದಾಗಿದೆ. ಇನ್ನೇನು ಮಾಡೋದು ಅಂತ ಆ ಹಳ್ಳಿಯಿಂದ 10 ಕಿಲೋ ಮೀಟರ್‌ ದೂರದಲ್ಲಿರೋ ಭಾನುಪ್ರತಾಪ್ಪುರದ ಜೈಲಿಗೆ ಹೋಗುತ್ತಾರೆ. ಅಲ್ಲಿ ಆಶ್ರಯ ಪಡೆಯುತ್ತಾರೆ, ಜೈಲಿನ ಗೋಡೆಗಳ ಮಧ್ಯೆ ಇದ್ರೆ ಸೇಫ್ ಅಂತ ಇಲ್ಲೇ ಮಲಗಿ ಎದ್ದು ಹೋಗ್ತಾರೆ ಜನ. ಪ್ರತಿ ದಿನ ಬೆಳಗ್ಗೆ ಊರಲ್ಲಿ ಇರುವ ಹಳ್ಳಿಯ ಜನ ಸಂಜೆ 4 ಗಂಟೆಗೆ ಊಟ ಮಾಡಿಕೊಂಡು ದೂರದಲ್ಲಿರುವ ಜೈಲಿಗೆ ಹೋಗಿ ಬಿಡ್ತಾರೆ. ಅಲ್ಲಿ ರಾತ್ರಿ ವಾಸ ಮಾಡಿಕೊಂಡು ಮಾರನೇ ದಿನ ಬೆಳಗ್ಗೆ ಮತ್ತೆ ಹಳ್ಳಿಗೆ ವಾಪಸ್ಸಾಗ್ತಾರೆ.

ಪ್ರತಿನಿತ್ಯ 400ಕ್ಕೂ ಹೆಚ್ಚು ಜನ ಜೈಲಿಗೆ
ಸಂಜೆ ಆದ ತಕ್ಷಣ ಜೈಲಿನತ್ತ ಪ್ರಯಾಣ
ಈ ಹಳ್ಳಿಯಲ್ಲಿ ಇರುವ ಜನಸಂಖ್ಯೆ ಸುಮಾರು 400 ಜನ. ಇವರೆಲ್ಲ ಗುಂಪು ಗುಂಪಾಗಿ ಸಂಜೆಯಾಗುತ್ತಿದ್ದಂತೆ ಜೈಲಿಗೆ ಹೋಗ್ತಾರೆ. ಜೈಲಿನಲ್ಲಿ ಇವರಿಗೆ ಊಟ ಉಪಚಾರದ ವ್ಯವಸ್ಥೆ ಇಲ್ಲ. ಹೀಗಾಗಿ ಜನ ಮನೆಯಲ್ಲಿಯೇ ಊಟ ಮಾಡಿಕೊಂಡು ಹೊರಡುತ್ತಾರೆ. ಮಕ್ಕಳು ಮರಿ ಇದ್ದವರು ಹಾಲು, ತಿಂಡಿಗಳನ್ನು ಬಾಕ್ಸ್‌ಗೆ ತುಂಬಿಕೊಂಡು ಹೆಜ್ಜೆ ಹಾಕುತ್ತಾರೆ. ತಮ್ಮ ಹಳ್ಳಿಯಿಂದ ಜೈಲು 10 ಕಿಲೋ ಮೀಟರ್‌ ದೂರ ಇರುವುದರಿಂದ ವಾಹನ ಏರಿ ಹೊರಟೇ ಬಿಡುತ್ತಾರೆ.

ಹೊಲಕ್ಕೂ ಹೋಗಲಾಗದೇ ಜನ ಕಣ್ಣೀರು
ಆನೆ ದಾಳಿ ಹುಟ್ಟಿಸಿರುವ ಭಯ ಅಷ್ಟಿಷ್ಟಲ್ಲ. ರಾತ್ರಿ ವೇಳೆ ಈ ಊರಲ್ಲಿ ಒಂದು ನರಪಿಳ್ಳೆಯೂ ಉಳಿಯಲ್ಲ. ಅಷ್ಟೇ ಏಕೆ ಹಗಲು ವೇಳೆ ಊರಿಗೆ ಬಂದು ಸೇರಿಕೊಂಡಿದ್ರು ದೂರದಲ್ಲಿರುವ ತಮ್ಮ ಹೊಲಕ್ಕೆ ಹೋಗುತ್ತಿಲ್ಲ. ಎಲ್ಲಿ ಆನೆಗಳು ದಾಳಿ ನಡೆಸಿ ತುಳಿದು ಹಾಕಿ ಬಿಡುತ್ತವೋ ಅನ್ನೋ ಭಯ. ಹೊಲಕ್ಕೆ ಹೋಗಲಾಗುತ್ತಿಲ್ಲ, ಬೆಳೆ ಬೆಳೆಯಲು ಸಾಧ್ಯ ಆಗತ್ತಿಲ್ಲ.ಹೀಗಾದ್ರೆ ಹೇಗಪ್ಪಾ ಬದುಕೋದು ಅಂತಿದಾರೆ ಇಲ್ಲಿನ ಜನ.

ಅರಣ್ಯ ಇಲಾಖೆಯ ನಿದ್ದೆಗೆಡಿಸಿದ ಆನೆಗಳು
ಅಸಹಾಯಕರಾಗಿ ಕುಳಿತಿದ್ದಾರೆ ಅಧಿಕಾರಿಗಳು
ಗಜಪಡೆಯ ಹಾವಳಿ ಎಷ್ಟರಮಟ್ಟಿಗೆ ಹೆಚ್ಚಿದೆ ಅಂದ್ರೆ ಅರಣ್ಯ ಇಲಾಖೆ ಅಧಿಕಾರಿಗಳಿಗೂ ಇದು ದೊಡ್ಡ ಸವಾಲಾಗಿದೆ. ಆನೆಗಳನ್ನು ನಿಯಂತ್ರಣ ಮಾಡೋದು ಹೇಗಪ್ಪಾ ಅಂತ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದಾರೆ. ಎಷ್ಟೇ ಬೆದರಿಸಿದರೂ ಆನೆಗಳು ಮಾತ್ರ ನಿತ್ಯ ಈ ಹಳ್ಳಿಗೆ ಬರೋದನ್ನು ಬಿಡ್ತಾ ಇಲ್ಲ. ಆನೆಗಳನ್ನು ಓಡಿಸಲು ಹೋದ್ರೆ ಅವೇ ದಾಳಿ ಮಾಡ್ತಾ ಇದ್ದಾವೆ. ಹೀಗಾಗಿ ಇಲ್ಲಿನ ರಾಜ್ಯ ಸರ್ಕಾರಕ್ಕೆ ಹಳ್ಳಿಗರು ಮನವಿ ಸಲ್ಲಿಸ್ತಾ ಇದಾರೆ. ಆನೆಗಳನ್ನು ಬರದಂತೆ ತಡೆಯಲು ಕಂದಕಗಳನ್ನು ನಿರ್ಮಾಣ ಮಾಡಬಹುದು ಎಂಬ ಬಗ್ಗೆ ಚರ್ಚೆ ಆಗ್ತಾ ಇದೆ. ಸರ್ಕಾರ ಈ ಹಳ್ಳಿ ಬಗ್ಗೆ ಹೆಚ್ಚು ಗಮನ ಹರಿಸದೇ ಇರೋ ಕಾರಣ ಜನರು ಜೈಲಿಗೆ ಹೋಗಿ ರಾತ್ರಿ ಕಳೀತಾ ಇದ್ದಾರೆ.

5 ವರ್ಷದಲ್ಲಿ ಆನೆ ದಾಳಿಯಿಂದ 350 ಜನ ಸಾವು
ನಕ್ಸಲ್‌, ಮಾವೋವಾದಿಗಳ ದಾಳಿಯಿಂದ ತತ್ತರಿಸಿರುವ ಛತ್ತೀಸ್‌ಗಢಕ್ಕೆ ಆನೆಗಳ ದಾಳಿ ಹೊಸ ತಲೆ ನೋವಾಗಿದೆ. ಆನೆಗಳ ಕಾರಿಡಾರ್‌ ನಿರ್ಮಿಸಿದರೂ ಕೂಡ ಆ ಕಾರಿಡಾರ್‌ ದಾಟಿ ಆನೆಗಳು ಜನ ವಸತಿ ಪ್ರದೇಶದತ್ತ ದಾಳಿ ಮಾಡುತ್ತಲೇ ಇವೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ ಕಳೆದ 5 ವರ್ಷದಲ್ಲಿ ಸುಮಾರು 350 ಜನ ಆನೆ ದಾಳಿಗೆ ಮೃತರಾಗಿದ್ದಾರೆ. ಈಗ ಆನೆ ದಾಳಿ ಭಯಕ್ಕೆ ಜೈಲಿಗೆ ಹೋಗುತ್ತಿರುವ ಹಳ್ಳಿಯ ಸಮೀಪದಲ್ಲಿಯೇ ಕಳೆದ ತಿಂಗಳು 3 ಮಂದಿ ಆನೆ ದಾಳಿಗೆ ಬಲಿಯಾಗಿದ್ದಾರೆ. ಇದು ಇಲ್ಲಿಯ ಜನರಲ್ಲಿ ಇನ್ನಷ್ಟು ಭಯ ಹುಟ್ಟಿಸಿ ಬಿಟ್ಟಿದೆ.

ಹಳ್ಳಿಯ ಜನಕ್ಕೆ ಇನ್ನೆಷ್ಟು ದಿನ ಜೈಲು ವಾಸ?
ಹೌದು, ಆ ಹಳ್ಳಿಯಲ್ಲಿ ಸುಮಾರು 400 ಜನ ವಾಸಿಸುತ್ತಿದ್ದು, ಎಲ್ಲರೂ ಜೀವಕೈಯಲ್ಲಿ ಹಿಡಿದು ಜೈಲು ಸೇರುತ್ತಿದ್ದಾರೆ. ಹೊಲದಲ್ಲಿ ಬೆಳೆ ಬೆಳೆಯಲಾಗದೇ ಕಣ್ಣೀರು ಸುರಿಸುತ್ತಿದ್ದಾರೆ. ಯಾವಾಗ ಆನೆಗಳು ದಾಳಿ ಮಾಡುವುದನ್ನು ನಿಲ್ಲಿಸುತ್ತವೆ. ತಮಗೆ ಜೈಲು ವಾಸ ಯಾವಾಗ ಅಂತ್ಯವಾಗುತ್ತೋ ತಮಗೆ ನೆಮ್ಮದಿಯ ಜೀವನ ಯಾವಾಗ ಬರುತ್ತೋ ಅಂತ ಚಿಂತಿತರಾಗಿದ್ದಾರೆ.

ಜನ ಯಾಕೆ ಸ್ವ ಇಚ್ಛೆ ಇಂದ ಜೈಲಿಗೆ ಹೋಗ್ತಾ ಇದ್ದಾರೆ ಅನ್ನೋದನ್ನು. ಆದಷ್ಟು ಬೇಗ ಅರಣ್ಯ ಇಲಾಖೆ ಅನೆಗಳನ್ನು ಓಡಿಸಬೇಕು, ಆ ಹಳ್ಳಿಯ ಜನ ನೆಮ್ಮದಿಯಿಂದ ಜೀವನ ಮಾಡುವಂತೆ ಆಗಬೇಕು ಅನ್ನುವುದೇ ಎಲ್ಲರ ಆಶಯ.

The post ರಾತ್ರಿಯಾದ್ರೆ ಇಡೀ ಹಳ್ಳಿ ಸ್ವ-ಇಚ್ಛೆಯಿಂದ ಜೈಲು ಸೇರಿಕೊಳ್ತಾರೆ.. ಏನಿದು ಹಳ್ಳಿ ಜನರ ವ್ಯಥೆ..? appeared first on News First Kannada.

Source: newsfirstlive.com

Source link