ಬೆಂಗಳೂರು: ಮಾಜಿ ಕಾರ್ಪೊರೇಟರ್​ ರೇಖಾ ಕದಿರೇಶ್​ ಕೊಲೆ ಪ್ರಕರಣದ ಆರೋಪಿಗಳ ಪತ್ತೆಗೆ 6 ವಿಶೇಷ ಪೊಲೀಸ್​ ತಂಡಗಳನ್ನ ರಚಿಸಲಾಗಿದೆ. ಮೂರು ಟೀಮ್​ಗಳಿಂದ ಆರೋಪಿಗಳ ಹುಡುಕಾಟ ನಡೆದಿದ್ದು, ರಾತ್ರಿ ಒಟ್ಟು 50ಕ್ಕು ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ರು. ಪ್ರಕರಣದ ಬೆನ್ನಲ್ಲೇ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳ ಚಲನವಲನದ ಬಗ್ಗೆ ರಾತ್ರಿಯಿಡೀ ಪೊಲೀಸರು ಕಣ್ಣಿಟ್ಟಿದ್ದರು. ಇಂದು ಬೆಳಗ್ಗೆ ಫೈರಿಂಗ್ ಮಾಡಿ, ಇಬ್ಬರನ್ನ ಬಂಧಿಸಿದ್ದಾರೆ.

6 ವಿಶೇಷ ತಂಡಗಳು:

  • ಟೀಮ್ 1: ಕಾಟನ್ ಪೇಟೆ ಇನ್ಸ್​​ಪೆಕ್ಟರ್ ಚಿದಾನಂದ ಮೂರ್ತಿ
  • ಟೀಮ್ 2: ಸಿಟಿ ಮಾರ್ಕೆಟ್ ಇನ್ಸ್​​ಪೆಕ್ಟರ್ ಕುಮಾರಸ್ವಾಮಿ ನೇತ್ರತ್ವದಲ್ಲಿ
  • ಟೀಮ್ 3: ಕಾಮಾಕ್ಷಿಪಾಳ್ಯ ಇನ್ಸ್​​ಪೆಕ್ಟರ್ ಪ್ರಶಾಂತ್
  • ಟೀಮ್ 4: ಉಪ್ಪಾರಪೇಟೆ ಇನ್ಸ್​​ಪೆಕ್ಟರ್ ಶಿವಸ್ವಾಮಿ ನೇತ್ರತ್ವದ ತಂಡ
  • ಟೀಮ್ 5: ಕಲಾಸಿಪಾಳ್ಯ ಇನ್ಸ್​​ಪೆಕ್ಟರ್ ಚಂದ್ರಕಾಂತ್
  • ಟೀಮ್ 6: ಚಾಮಾರಾಜಪೇಟೆ ಇನ್ಸ್​​ಪೆಕ್ಟರ್ ಲೋಕಾಪುರ

ರಾತ್ರಿ ಪೂರ್ತಿ ಪೊಲೀಸರು ಹಲವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಮೊದಲ ಹಂತದಲ್ಲಿ 39 ಜನರನ್ನು ವಿಚಾರಣೆ ಮಾಡಲಾಗಿತ್ತು. ನಂತರ ಆ ಮೂವತ್ತೊಂಬತ್ತು ಜನರ ಪೈಕಿ, ನೇರವಾಗಿ ಕೃತ್ಯದ ಪ್ರಮುಖ ಆರೋಪಿ ಪೀಟರ್​ನ ಸಂಪರ್ಕ ಹೊಂದಿದ್ದ ವ್ಯಕ್ತಿಯೊಬ್ಬನಿಂದ ಹೆಚ್ಚಿನ ಮಾಹಿತಿ ಪಡೆಯಲಾಗಿತ್ತು. ಆತ ನೀಡಿದ ಮಾಹಿತಿ ಆಧಾರಿಸಿ ಕಾರ್ಯಚರಣೆ ನಡೆಸಿದ ಪೊಲೀಸರು‌, ರಾತ್ರಿ ಎಲೆಕ್ಟ್ರಾನಿಕ್ ಸಿಟಿ, ಹೊಸೂರು ರಸ್ತೆ, ಸಿಂಗೇನ ಅಗ್ರಹಾರ, ಚಂದಾಪುರ, ವರ್ತೂರು ಹಾಗೂ ಹುಸ್ಕೂರು ಬಳಿ ಹುಡುಕಾಟ ನಡೆಸಿದ್ದರು.

ಮೂವತ್ತಕ್ಕು ಹೆಚ್ಚು ಪೊಲೀಸರು‌‌ ರಾತ್ರಿ ಪೂರ್ತಿ ಆರೋಪಿಗಳ ಬೆನ್ನು ಹತ್ತಿದ್ದರು. ಅತ್ತ ಆರೋಪಿಗಳು ನಿನ್ನೆ ಘಟನೆ ಬಳಿಕ ಒಂದು ಕಡೆ ನಿಲ್ಲದೆ, ಆಟೋವೊಂದರಲ್ಲಿ ನಗರದ್ಯಾಂತ ತಿರುಗುತ್ತಲೇ ಇದ್ದರು.

ಆರೋಪಿಗಳು ಆಟೋದಲ್ಲಿ ತಿರುಗುತ್ತಿದ್ದಾರೆ ಎಂದು, ಬೆಳಗಿನ ಜಾವ ಮೂರುವರೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಆ ಆಟೋ ಹುಡುಕಿ ಹೊರಟರು. ಆಸ್ಟಿಂಗ್ ಟೌನ್​ನಲ್ಲಿ ಮೊದಲ ಬಾರಿಗೆ ಆಟೋ ಬಗ್ಗೆ ಮಾಹಿತಿ ಪಡೆದು ಬಳಿಕ ಕೋರಮಂಗಲ, ಹೆಚ್ಎಸ್ಆರ್ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಸಿಂಗೇನ ಅಗ್ರಹಾರ ಸುತ್ತಮುತ್ತ ಹುಡುಕಾಡಿದ್ದರು.

ಹೊಸೂರು ರಸ್ತೆಯಲ್ಲಿ ಓರ್ವ ಆರೋಪಿಯನ್ನ ಬಂಧಿಸಿದ ಬಳಿಕ ಇಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದರು. ಅಲ್ಲಿಂದ ಶ್ರೀರಾಮಪುರ, ರಾಜಾಜಿನಗರ, ವಿಜಯನಗರದ ಕಡೆ ಅರೋಪಿಗಳು ಬಂದಿದ್ದರು. ಬೆಳಗ್ಗೆ ರಾಜಾಜಿನಗರದಿಂದ ಮೈಸೂರು ರೋಡ್ ಮೂಲಕ ಪಾಸ್ ಅಗಿದ್ರು. ಆದ್ರೆ ಇಂದು ಬೆಳಗ್ಗೆ ಮತ್ತೆ ಪೊಲೀಸರಿಗೆ ಸುಳಿವು ಸಿಗದಂತೆ ಅಗಿತ್ತು. ನಂತ್ರ ಮಾಗಡಿ ರೋಡ್​ನಲ್ಲಿ ಆರೋಪಿಗಳ ಆಟೋ ಚಲನವಲನದ ಬಗ್ಗೆ ಮಾಹಿತಿ ಸಿಕ್ಕಿತ್ತು. ತಕ್ಷಣ ತಂಡಗಳ ಸಹಿತ ಬೆನ್ನು ಹತ್ತಿದ್ದ ಪೊಲೀಸರು, ಹನ್ನೆರಡು ಗಂಟೆ ಸುಮಾರಾಗಿ ಸುಂಕದಕಟ್ಟೆಯ ಬಜಾಜ್ ಗ್ರೌಂಡ್ ಬಳಿ ಹಂತಕರು ಇದ್ದಾರೆಂದು ಖಚಿತಪಡಿಸಿಕೊಂಡಿದ್ದರು.

ತಕ್ಷಣ ಉಪ್ಪಾರಪೇಟೆ ಇನ್ಸ್​ಪೆಕ್ಟರ್ ಶಿವಸ್ವಾಮಿ ಮತ್ತು ಕಾಟನ್​ಪೇಟೆ ಇನ್ಸ್​ಪೆಕ್ಟರ್ ಚಿದಾನಂದ ಮೂರ್ತಿ ನೇತೃತ್ವದ ತಂಡ ದಾಳಿ ನಡೆಸಿ, ಆರೋಪಿಗಳು ಮರದ ಕೆಳಗೆ ಕುಳಿತು ಎಣ್ಣೆ ಹೊಡೆಯುತ್ತಿದ್ದಾಗ ರೌಂಡಪ್​ ಮಾಡಿದ್ದರು. ಈ ವೇಳೆ ಆರೋಪಿಗಳಲ್ಲಿ ಓರ್ವ ಡ್ಯಾಗರ್​ನಿಂದ ಪಿಎಸ್​​ಐ ಕರಿಯಣ್ಣ ಮತ್ತು ಹೆಡ್ ಕಾನ್ಸ್‌ಟೇಬಲ್ ಚಂದ್ರಶೇಖರ್ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ ಎನ್ನಲಾಗಿದೆ. ಆಗ ಪೊಲೀಸರು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ, ನಂತ್ರ ಅರೋಪಿಗಳ ಕಾಲಿಗೆ ಗುಂಡು ಹಾರಿಸಿ ವಶಕ್ಕೆ‌ ಪಡೆದುಕೊಂಡಿದ್ದಾರೆ. ಸದ್ಯ ಗಾಯಾಳು ಆರೋಪಿಗಳನ್ನ ಲಕ್ಷ್ಮೀ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

The post ರಾತ್ರಿಯಿಡೀ ಆಟೋದಲ್ಲೇ ತಿರುಗುತ್ತಿದ್ದ ರೇಖಾ ಕೊಲೆ ಆರೋಪಿಗಳು.. ಹೇಗಿತ್ತು ಪೊಲೀಸರ ಕಾರ್ಯಾಚರಣೆ? appeared first on News First Kannada.

Source: newsfirstlive.com

Source link