ರಾಬ್ರಿ ದೇವಿ ಮನೆಯ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡ ಸಿಎಂ; ಬಿಹಾರದಲ್ಲಿ ಮತ್ತೆ ಒಂದಾಗ್ತಾರಾ ನಿತೀಶ್ ಕುಮಾರ್- ಲಾಲೂ ಪ್ರಸಾದ್? | After Bihar CM Nitish Kumar Iftar attendance in Rabri Devi House Lalu Prasad Yadav son Tej Pratap fuels buzz


ರಾಬ್ರಿ ದೇವಿ ಮನೆಯ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡ ಸಿಎಂ; ಬಿಹಾರದಲ್ಲಿ ಮತ್ತೆ ಒಂದಾಗ್ತಾರಾ ನಿತೀಶ್ ಕುಮಾರ್- ಲಾಲೂ ಪ್ರಸಾದ್?

ರಾಬ್ರಿ ದೇವಿ ಮನೆಯ ಇಫ್ತಾರ್ ಕೂಟದಲ್ಲಿ ಸಿಎಂ ನಿತೀಶ್ ಕುಮಾರ್

ಬಿಹಾರ: ಮೇವು ಹಗರಣದಲ್ಲಿ ಜೈಲು ಪಾಲಾಗಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್​ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್​ಗೆ (Lalu Prasad Yadav) ನಿನ್ನೆ ಜಾಮೀನು ಮಂಜೂರಾಗಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಪತಿ ಲಾಲೂ ಪ್ರಸಾದ್ ಯಾದವ್‌ಗೆ ಜಾಮೀನು ದೊರೆತ ಕೆಲವೇ ಗಂಟೆಗಳ ನಂತರ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಶುಕ್ರವಾರ ಮಾಜಿ ಸಿಎಂ ರಾಬ್ರಿ ದೇವಿ (Rabri Devi) ಅವರ ಮನೆಗೆ ಭೇಟಿ ನೀಡಿದ್ದು, ಬಿಹಾರದ ಆಡಳಿತಾರೂಢ ಜೆಡಿಯು ತನ್ನ ಮಿತ್ರಪಕ್ಷವಾದ ಬಿಜೆಪಿಗೆ ಈ ಮೂಲಕ ಪರೋಕ್ಷವಾದ ಸಂದೇಶವನ್ನು ಕಳುಹಿಸುತ್ತಿದೆಯೇ? ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಲಾಲೂ ಪ್ರಸಾದ್ ಯಾದವ್ ಅವರ ಕಿರಿಯ ಪುತ್ರ ತೇಜಸ್ವಿ ಯಾದವ್ ಈ ಸುದ್ದಿಯನ್ನು ತಳ್ಳಿಹಾಕಿದ್ದರೂ, ಅವರ ಹಿರಿಯ ಮಗ ತೇಜ್ ಪ್ರತಾಪ್ ಈ ವದಂತಿಗಳಿಗೆ ಪುಷ್ಠಿ ನೀಡುವಂತೆ ಮಾತನಾಡಿದ್ದಾರೆ.

ಪಾಟ್ನಾದಲ್ಲಿರುವ ರಾಬ್ರಿ ದೇವಿಯ ಮನೆಯಲ್ಲಿ ನಿನ್ನೆ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು. ಅಲ್ಲಿಗೆ ನಿತೀಶ್ ಕುಮಾರ್ ಆಗಮಿಸಿದ್ದು, ಈ ಬೆಳವಣಿಗೆ ಮಾಜಿ ಮಿತ್ರಪಕ್ಷಗಳ ನಡುವೆ ಮತ್ತೆ ಸಾಮರಸ್ಯ ಬೆಳೆಯುವ ಬಗ್ಗೆ ಸುಳಿವು ನೀಡಿದಂತಿದೆ. ಸದ್ಯದ ಮಟ್ಟಿಗೆ ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ನಡುವೆ ಎಲ್ಲವೂ ಸರಿಯಾಗಿಲ್ಲ. ಅವೆರಡು ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗುತ್ತಿದೆ. ಬಿಜೆಪಿ ನಾಯಕರು ಬಹಿರಂಗವಾಗಿಯೇ ಸಿಎಂ ನಿತೀಶ್ ಕುಮಾರ್ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ತಮ್ಮ ಸರ್ಕಾರದ ಮಿತ್ರಪಕ್ಷಗಳ ನಾಯಕರೇ ತಮಗೆ ಮುಳ್ಳಾಗುತ್ತಿರುವುದು ನಿತೀಶ್ ಕುಮಾರ್ ಅವರಿಗೂ ಕೋಪ ತರಿಸಿದೆ. ಹೀಗಾಗಿ, ಲಾಲೂ ಪ್ರಸಾದ್ ಯಾದವ್ ಮನೆಗೆ ಭೇಟಿ ನೀಡುವ ಮೂಲಕ ನಿತೀಶ್ ಕುಮಾರ್ ಬಿಜೆಪಿಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಎನ್ನಲಾಗುತ್ತಿದೆ.

ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಮಗ “ನಾವು ಸರ್ಕಾರವನ್ನು ರಚಿಸುತ್ತೇವೆ. ನಾವು ಯಾವ ಆಟವಾಡುತ್ತೇವೆಂಬುದು ರಹಸ್ಯವಾಗಿದೆ. ನಿತೀಶ್ ಕುಮಾರ್ ಜೊತೆ ರಹಸ್ಯ ಮಾತುಕತೆ ನಡೆದಿದೆ.” ಎಂದಿದ್ದಾರೆ. ಆದರೆ ಶುಕ್ರವಾರ ಎಲ್‌ಜೆಪಿಯ ಚಿರಾಗ್ ಪಾಸ್ವಾನ್ ಮತ್ತು ಬಿಜೆಪಿಯ ಶಾನವಾಜ್ ಹುಸೇನ್ ಕೂಡ ಹಾಜರಿದ್ದರು ಎಂದು ಅವರು ಹೇಳಿದ್ದಾರೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ 20 ನಿಮಿಷಗಳ ಕಾಲ ರಾಬ್ರಿ ದೇವಿ ಮನೆಯ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಐದು ವರ್ಷಗಳಲ್ಲಿ ಬಿಹಾರ ರಾಜ್ಯದ ಪ್ರಮುಖ ವಿರೋಧ ಪಕ್ಷವಾದ ಆರ್‌ಜೆಡಿಯ ಕುಟುಂಬದವರನ್ನು ನಿತೀಶ್ ಕುಮಾರ್ ಮೊದಲ ಬಾರಿಗೆ ಭೇಟಿಯಾಗುತ್ತಿದ್ದಾರೆ. ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್, ನಾವು ಬಿಜೆಪಿ, ಜೆಡಿಯು ಅಥವಾ ಎಲ್‌ಜೆಪಿಯ ಎಲ್ಲ ಜನರಿಗೆ ಆಹ್ವಾನ ನೀಡಿದ್ದೇವೆ. ಎಲ್ಲರೂ ಇಫ್ತಾರ್ ಕೂಟದಲ್ಲಿ ಭಾಗವಹಿಸುವುದು ಸಂಪ್ರದಾಯವಾಗಿದೆ ಎಂದಿದ್ದಾರೆ.

TV9 Kannada


Leave a Reply

Your email address will not be published. Required fields are marked *