ಕೆ.ಕೆ.ಪ್ರೊಡಕ್ಷನ್ಸ್ ಅಂಡ್ ಅಸೋಸಿಯೇಷನ್ಸ್ ಹಾಗೂ ಎಟಿಎಂ ಸ್ಟುಡಿಯೋಸ್ ಬ್ಯಾನರ್‌ ಮೂಲಕ ಕಿರಣ್ ಕುಮಾರ್ ಸಿ, ಅರವಿಂದ್ ಬಿ ಅವರ ನಿರ್ಮಾಣ ಮಾಡುತ್ತಿರುವ ‘ಶಬರಿ ಸರ್ಚಿಂಗ್ ಫಾರ್ ರಾವಣ’ ಚಿತ್ರದ ಮುಹೂರ್ತ ಕಾರ್ಯಕ್ರಮ ಭಾನುವಾರ ಬೆಳಗ್ಗೆ 8 ಗಂಟೆಗೆ ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು.

ಚಿತ್ರದ ನಾಯಕಿ ರಚಿತಾ ರಾಮ್ ಹಾಗೂ ರಘು ಮುಖರ್ಜಿ ದೇವರನ್ನು ಪ್ರಾರ್ಥಿಸುವ ದೃಶ್ಯದೊಂದಿಗೆ ಚಿತ್ರದ‌‌ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು. ಮಹಿಳಾ ಪ್ರಧಾನ ರಿವೇಂಜ್, ಥ್ರಿಲ್ಲರ್ ಕಥಾಹಂದರ ಇರುವ ಈ ಚಿತ್ರದಲ್ಲಿ ಡಿಂಪಲ್‌ಕ್ವೀನ್ ರಚಿತಾ ರಾಮ್ ಶಬರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಅವರ ಅಭಿನಯದ 36ನೇ ಚಿತ್ರ. ಕಳೆದ ರಾಮನವಮಿ ಹಬ್ಬದ ದಿನವೇ ಶಬರಿ ಸರ್ಚಿಂಗ್ ಫಾರ್ ರಾವಣ ಚಿತ್ರದ ಶೀರ್ಷಿಕೆ,‌ ಲುಕ್ ಬಿಡುಗಡೆಯಾಗಿತ್ತು.

ರಚಿತಾರಾಮ್ ಉಗ್ರಾವತಾರ ತಾಳಿರುವ ಪೋಸ್ಟರ್‌ ಸಾಕಷ್ಟು ಕುತೂಹಲಗಳನ್ನು ಹುಟ್ಟುಹಾಕಿತ್ತು. ಯುವನಿರ್ದೇಶಕ ನವೀನ್‌ಶೆಟ್ಟಿ ಅವರು ಆ್ಯಕ್ಷನ್‌ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ಕೇಶವ್-ಚೇತನ್ ಚಿತ್ರಕಥೆ ಹೆಣೆದಿದಾರೆ. ಸಂಕಲನಕಾರನಾಗಿದ್ದ ನವೀನ್‌ ಶೆಟ್ಟಿ ಶಬರಿ ಚಿತ್ರದ ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ. ಮಹಿಳಾ ಪ್ರಧಾನ ಕಥಾ ಹಂದರ ಒಳಗೊಂಡಿರುವ ಈ ಚಿತ್ರದಲ್ಲಿ ರಾವಣನ ಪಾತ್ರ ಇನ್ನೂ ಕುತೂಹಲವಾಗಿದೆ.

ಸದ್ಯದಲ್ಲೇ ಈ ಚಿತ್ರದ ಚಿತ್ರೀಕರಣ ಪ್ರಾರಂಭಿಸುವುದಾಗಿ ನಿರ್ದೇಶಕ ನವೀನ್ ಶೆಟ್ಟಿ ತಿಳಿಸಿದ್ದಾರೆ. ಇನ್ನು ‘ಶಬರಿ ಸರ್ಚಿಂಗ್ ಫಾರ್ ರಾವಣ’ ಚಿತ್ರಕ್ಕೆ ಅನೂಪ್ ಸೀಳಿನ್ ಅವರ ಸಂಗೀತ ಸಂಯೋಜನೆ ಇದ್ದು, ಸುರೇಶ್ ಆರ್ಮುಗಂ ಅವರ ಸಂಕಲನ, ವಿಶಾಲ್‌ಕುಮಾರ್‌ಗೌಡ ಅವರ ಕ್ಯಾಮೆರಾವರ್ಕ್ ಇರುತ್ತದೆ. ಅಚ್ಯುತ್‌ಕುಮಾರ್, ಪ್ರದೀಪ್ ನಾರಾಯಣ್, ಅರ್ಚನಾ ಕೊಟ್ಟಿಗೆ ಈ ಚಿತ್ರದ ಉಳಿದ ಪಾತ್ರವರ್ಗದಲ್ಲಿದ್ದಾರೆ.

The post ರಾಮ-ಆಂಜನೇಯನ ಸನ್ನಿಧಿಯಲ್ಲಿ ‘ಶಬರಿ’ಗೆ‌ ಮುಹೂರ್ತ appeared first on News First Kannada.

Source: newsfirstlive.com

Source link