ರಾಯಚೂರು: ಜಿಲ್ಲೆಗೂ ಈಗ ಡೆಲ್ಟಾ ಪ್ಲಸ್‍ನ ಆತಂಕ ಶುರುವಾಗಿದೆ. ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳಿಂದ ನಿತ್ಯ ಜನರ ಓಡಾಟ ಜೋರಾಗಿದೆ. ಅಲ್ಲದೆ ಮಹಾರಾಷ್ಟ್ರದಿಂದಲೂ ನೇರವಾಗಿ ಜಿಲ್ಲೆಗೆ ಜನ ಬರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳೇನೋ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಆದ್ರೆ ಆದೇಶಗಳು ಮಾತ್ರ ಜಿಲ್ಲೆಯಲ್ಲಿ ಪಾಲನೆಯಾಗುತ್ತಿಲ್ಲ.

ಮಹಾರಾಷ್ಟ್ರದ ಹಲವೆಡೆ ಡೆಲ್ಟಾ ಪ್ಲಸ್ ಕಾಣಿಸಿಕೊಂಡಿರುವುದರಿಂದ ರಾಯಚೂರಿನಲ್ಲಿ ಭಯ ಶುರುವಾಗಿದೆ. ಕೂಲಿ ಕಾರ್ಮಿಕರು ಸೇರಿದಂತೆ ಸಾಕಷ್ಟು ಜನ ಮಹಾರಾಷ್ಟ್ರದಿಂದ ಜಿಲ್ಲೆಗೆ ಬರುತ್ತಿರುವುದರಿಂದ ಜಿಲ್ಲಾಡಳಿತ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆಗೆ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದೆ. ಆದ್ರೆ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಅವರ ಆದೇಶ ಕೇವಲ ಕಾಗದದಲ್ಲೇ ಉಳಿದಿದ್ದು ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ ಹಾಗೂ ಅಂತರರಾಜ್ಯ ಗಡಿ ಚೆಕ್ ಪೋಸ್ಟ್ ಗಳಲ್ಲಿ ಯಾವುದೇ ತಪಾಸಣೆ ನಡೆದಿಲ್ಲ.

ಬೆಳಗಾವಿ, ಬೀದರ್, ವಿಜಯಪುರ, ಕಲಬುರಗಿಯಿಂದ ಪ್ರತಿನಿತ್ಯ ಸಾಕಷ್ಟು ಜನ ಓಡಾಡುವುದು ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ. ಅಲ್ಲದೆ ಮಹಾರಾಷ್ಟ್ರದ ಮುಂಬೈ, ಪೂನಾ, ಸೊಲ್ಲಾಪುರ ಸೇರಿದಂತೆ ವಿವಿಧೆಡೆಯಿಂದ ನೇರವಾಗಿ ಜಿಲ್ಲೆಗೆ ಸಾಕಷ್ಟು ಜನ ಪ್ರತಿನಿತ್ಯ ಬರುತ್ತಾರೆ. ಹೀಗಾಗಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಚೆಕ್ ಪೋಸ್ಟ್ ಗಳಲ್ಲಿ ಕಾರ್ಯ ನಿರ್ವಹಿಸಲು ಜಿಲ್ಲಾಡಳಿತ ನೋಡಲ್ ಅಧಿಕಾರಿಗಳನ್ನ ನೇಮಕ ಮಾಡಿದೆ.

ಗಿಲ್ಲೆಸುಗೂರು, ಶಕ್ತಿನಗರ, ರೈಲ್ವೇ ನಿಲ್ದಾಣ ಬಸ್ ನಿಲ್ದಾಣ ಸೇರಿದಂತೆ ಒಟ್ಟು ಜಿಲ್ಲೆಯ 11 ಚೆಕ್ ಪೋಸ್ಟ್ ಗಳಿಗೆ 22 ಜನ ನೋಡಲ್ ಅಧಿಕಾರಿಗಳನ್ನ ನೇಮಿಸಲಾಗಿದ್ದು, ಬೆಳಗ್ಗೆ 8 ರಿಂದ ರಾತ್ರಿ 8 ರ ವರೆಗೆ ಪ್ರತಿ ದಿನ ಕಾರ್ಯನಿರ್ವಹಿಸಲು ಜಿಲ್ಲಾಡಳಿತ ಸೂಚಿಸಿದೆ. 72 ಗಂಟೆಗಳ ಒಳಗೆ ಮಾಡಿಸಿರುವ ಆರ್ ಟಿ ಪಿ ಸಿ ಆರ್ ನೆಗೆಟಿವ್ ವರದಿ ಅಥವಾ ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ಪಡೆದಿರುವ ಪ್ರಮಾಣ ಪತ್ರವನ್ನ ಪ್ರಯಾಣಿಕರು ಹೊಂದಿರಬೇಕು. ಪೊಲೀಸ್ ಹಾಗೂ ಆರೋಗ್ಯ ಇಲಾಖೆಗೆ ವೈದ್ಯಕೀಯ ತಪಾಸಣೆ ಹಾಗೂ ದಾಖಲೆಗಳ ತಪಾಸಣೆ ನಡೆಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಆದ್ರೆ ಅಧಿಕಾರಿಗಳು ಮಾತ್ರ ಜಿಲ್ಲಾಧಿಕಾರಿಗಳ ಆದೇಶಕ್ಕೆ ಯಾಕೋ ಕಿಮ್ಮತ್ತು ನೀಡಿಲ್ಲ. ಇದನ್ನೂ ಓದಿ: ಬದುಕು ಕೊಡೋಕಾದ್ರೆ ಬನ್ನಿ, ಆಶ್ವಾಸನೆ ನೀಡೋಕಾದ್ರೆ ಬರಲೇಬೇಡಿ : ಸಚಿವ, ಶಾಸಕರಿಗೆ ಮಲೆನಾಡಿಗರ ಕ್ಲಾಸ್

ಚೆಕ್ ಪೋಸ್ಟ್ ನಲ್ಲಿ ಮಹಾರಾಷ್ಟ್ರ ಗಡಿ ಜಿಲ್ಲೆಗಳಿಂದ ಬರುವವರ ದಾಖಲೆ ತಪಾಸಣೆ ಮಾಡುವುದಲ್ಲದೆ, ತುರ್ತು ಸಂದರ್ಭದಲ್ಲಿ ಪ್ರಯಾಣಿಕರ ಸ್ವ್ಯಾಬ್ ತೆಗೆದುಕೊಂಡು ಪರೀಕ್ಷೆಗೆ ಕಳುಹಿಸಲು ಸಿಬ್ಬಂದಿ ನಿಯೋಜಿಸಲು ಸೂಚಿಸಲಾಗಿದೆ. ಕನಿಷ್ಟ ಈಗಲಾದ್ರೂ ಅಧಿಕಾರಿಗಳು ಎಚ್ಚೆತ್ತು ಮುಂಜಾಗ್ರತೆ ತೆಗೆದುಕೊಂಡರೆ ಮುಂದಾಗುವ ಅನಾಹುತಗಳನ್ನ ಈಗಲೇ ತಪ್ಪಿಸಬಹುದಾಗಿದೆ. ಇದನ್ನೂ ಓದಿ: ಅಂದುಕೊಂಡಂತೆ ಮಾಡಿದ ದಿವ್ಯಾ – ಕ್ಯಾಪ್ಟನ್ ಆಗಿ ಹೊಸ ದಾಖಲೆ

The post ರಾಯಚೂರಿಗೂ ಡೆಲ್ಟಾ ಪ್ಲಸ್ ಆಂತಕ: ಪಾಲನೆಯಾಗದ ಜಿಲ್ಲಾಧಿಕಾರಿ ಆದೇಶ appeared first on Public TV.

Source: publictv.in

Source link