ರಾಯಚೂರು: ಮಳೆಗಾಲ‌ ಬಂತಂದ್ರೆ ಸಾಕು ಬಿಸಿಲನಾಡು ರಾಯಚೂರು ಬರೀ ನೀರುನೀರಾಗಿ ಬಿಡುತ್ತೆ. ಈಗಾಗಲೇ ಜಿಲ್ಲೆಯಲ್ಲಿ ಸುರಿಯುತ್ತಿರುವ ಅಪಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಇಂದು ಮಸ್ಕಿ ಜಲಾಶಯದಿಂದಲೂ‌ ಯಾವಾಗ ಬೇಕಾದರೂ ನೀರು‌ ಬಿಡುವ ಸಾಧ್ಯತೆ ಇದ್ದು, ಕಟ್ಟೆಚ್ಚರ ವಹಿಸಲಾಗಿದೆ.

ನಿನ್ನೆ ಸುರಿದ ವ್ಯಾಪಕ ಮಳೆಗೆ ಎಲ್ಲೆಡೆ ಜನರು ಸಂಕಷ್ಟಕ್ಕೆ ಸಿಲುಕಿದ್ರು. ಪ್ರಮುಖವಾಗಿ ಮಸ್ಕಿಯಲ್ಲಿ ಮನೆಗಳು ಉರುಳಿಬಿದ್ದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಮಸ್ಕಿ ಹಾಗೂ ಕುಷ್ಟಗಿ ಭಾಗದಲ್ಲಿ ಅಪಾರ ಮಳೆಯಾದ ಕಾರಣ ಹಳ್ಳಕೊಳ್ಳಗಳು ಭರ್ತಿಯಾಗಿವೆ. ಮಸ್ಕಿ ಜಲಾಶಯವೂ ಸಹ ಸಂಪೂರ್ಣ ಭರ್ತಿಯಾಗುತ್ತಿದ್ದು, ಕೆಳ‌ ಭಾಗಕ್ಕೆ ಯಾವಾಗ ಬೇಕಾದ್ರೂ ನೀರು ಬಿಡಬಹುದಾಗಿದೆ.

472.12 ಮೀ. ನೀರು ಸಂಗ್ರಹ ಸಾಮರ್ಥ್ಯದ ಮಸ್ಕಿ ಜಲಾಶಯದಲ್ಲಿ‌ ಸದ್ಯ 469.50 ಮೀ‌. ನೀರು ಶೇಖರಣೆಗೊಂಡಿದೆ. ಯಾವಾಗ ಬೇಕಾದ್ರೂ ಜಲಾಶಯ ಭರ್ತಿಯಾಗುವ ಸಾಧ್ಯತೆಯಿದೆ., ದಿಢೀರ್ ಏರಿಕೆ ಆಗಿ ಬಿಡುವ ನೀರಿನಿಂದಾಗಿ ಕಳೆದ ವರ್ಷ ಭಾರೀ ಅನಾಹುತವಾಗಿತ್ತು. ಏಕಾಏಕಿ ಬಿಟ್ಟ ನೀರಿನಿಂದಾಗಿ ಮಸ್ಕಿ ಪಟ್ಟಣದಲ್ಲಿ ಬಹಿರ್ದೆಸೆಗೆ ತೆರಳಿದ್ದ ಇಬ್ಬರು ವ್ಯಕ್ತಿಗಳು ಕೊಚ್ಚಿಕೊಂಡು ಹೋಗಿದ್ರು‌. ಅದರಲ್ಲಿ ಒಬ್ಬನ ರಕ್ಷಣೆ ಮಾಡಿದರೆ ಮತ್ತೊಬ್ಬನ ಮೃತದೇಹ ಎಷ್ಟೋ ದಿನಗಳ ನಂತರ ಕೊಳೆತ ರೂಪದಲ್ಲಿ‌ ಸಿಕ್ಕಿತ್ತು.

ಈ ಹಿನ್ನೆಲೆ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ಹೊರಡಿಸಿದ್ದು, ಮಸ್ಕಿ ನಾಲಾ ಜಲಾನಯನ ಪ್ರದೇಶದಲ್ಲಿ ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ.

ಒಟ್ಟಾರೆಯಾಗಿ ಇದೀಗ ಪ್ರಾರಂಭವಾದ ಮಳೆಗಾಲ ಆರಂಭದಲ್ಲೆ‌‌ ಕೊಂಚ ಭೀತಿ ಸೃಷ್ಟಿಸಿದ್ದು, ರಾಯಚೂರು ಜಿಲ್ಲಾಡಳಿತ ಪ್ರವಾಹಕ್ಕೆ ಈಗಾಗಲೆ‌‌ ಮುಂಜಾಗ್ರತಾ ಕ್ರಮಗಳನ್ನ ವಹಿಸಿದೆ. ಜಿಲ್ಲೆಯಲ್ಲಿ ವರುಣ ಇನ್ನೂ ಎರಡು‌ ದಿನ ಅಬ್ಬರಿಸಲಿದ್ದು, ಜಿಲ್ಲೆಯ ಜನರ ಜಾಗ್ರತೆಯಿಂದ‌ ಇರುವುದು ಸೂಕ್ತ ಎಂದು ಸೂಚನೆ ನೀಡಲಾಗಿದೆ.

The post ರಾಯಚೂರಿನಲ್ಲಿ ಭಾರೀ ಮಳೆಗೆ ಮಸ್ಕಿ ಕಿರು ಜಲಾಶಯ ಭರ್ತಿ, ಇಂದು ನೀರು ಹೊರಬಿಡುವ ಸಾಧ್ಯತೆ appeared first on News First Kannada.

Source: newsfirstlive.com

Source link