ರಾಯಚೂರಿನಲ್ಲಿ ಹೆಚ್ಚಾದ ಬಾಲ ಕಾರ್ಮಿಕರು! ಕಳವಳ ವ್ಯಕ್ತಪಡಿಸಿದ ಶಿಕ್ಷಣ ತಜ್ಞರು | Child labor increase in Raichur so Education Expert expressed Worry


ರಾಯಚೂರಿನಲ್ಲಿ ಹೆಚ್ಚಾದ ಬಾಲ ಕಾರ್ಮಿಕರು! ಕಳವಳ ವ್ಯಕ್ತಪಡಿಸಿದ ಶಿಕ್ಷಣ ತಜ್ಞರು

ದೊಡ್ಡವರ ಜೊತೆ ಕೂಲಿ ಕೆಲಸಕ್ಕೆ ಹೋಗುತ್ತಿರುವ ಮಕ್ಕಳು

ರಾಯಚೂರು: ಜಿಲ್ಲೆ ಮೊದಲೇ ಹಿಂದುಳಿದ ಪ್ರದೇಶ ಎನ್ನುವ ಹಣೆ ಪಟ್ಟಿ ಕಟ್ಟಿಕೊಂಡಿದೆ. ತೀರಾ ಬಡತನದಿಂದ ಕೂಡಿರುವ ರಾಯಚೂರು (Raichur) ಜಿಲ್ಲೆಯಲ್ಲಿ ಈಗ ದಿನೇ ದಿನೇ ಬಾಲ ಕಾರ್ಮಿಕರು (Child labor) ಹೆಚ್ಚಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆ ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದಿದೆ. ಶಿಕ್ಷಣವಂತೂ (Education) ಮರಿಚಿಕೆಯಂತಾಗಿದೆ. ಸಹಿಸಲಾಗದ ಬಡತನದ ಜೊತೆ ಕೊರೊನಾ ಹೊಡೆತವೂ ಶಿಕ್ಷಣದ ಮೇಲೆ ಬಿದ್ದಿದೆ. ಈ ಕಾರಣಗಳಿಂದ ಮಕ್ಕಳು ಶಾಲೆಗಳನ್ನು ಸಂಪೂರ್ಣವಾಗಿ ತೊರೆದು, ಕೂಲಿ ಕೆಲಸಗಳತ್ತ ಮುಖ ಮಾಡುತ್ತಿದ್ದಾರೆ.

ಗಾರೆ ಕೆಲಸ, ಹೊಲ-ಗದ್ದೆಗಳಲ್ಲಿ ಕೃಷಿ ಕಟಾವಿನ ಕೆಲಸ ಸೇರಿ ಇನ್ನಿತರ ಕೆಲಸಗಳಲ್ಲಿ ತೊಡಗುತ್ತಿದ್ದಾರೆ. ಓದುವ ವಯಸ್ಸಲ್ಲಿ ಮಕ್ಕಳನ್ನು ಗುತ್ತಿಗೆದಾರರು ವಾಹನಗಳ ಟಾಪ್ ಮೇಲೆ ಕೂರಿಸಿಕೊಂಡು ಕೂಲಿಗೆ ಕರೆದೊಯ್ಯುವುದು ಸರ್ವೆ ಸಾಮಾನ್ಯವಾಗಿದೆ. ಈ ಬಗ್ಗೆ ಶಿಕ್ಷಣ ತಜ್ಞರು ಮಕ್ಕಳ ಶಿಕ್ಷಣದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

2020-2021 ರಲ್ಲಿ 456 ಮಕ್ಕಳು ಶಾಲೆಯಿಂದ ದೂರ ಉಳಿದಿದ್ದರು. ಈ ಬಾರೀ ಅಂದರೆ 2021-2022 ರಲ್ಲಿ ಒಟ್ಟು 1,966 ಮಕ್ಕಳು ಶಿಕ್ಷಣದಿಂದ ಹೊರ ಬಂದಿದ್ದಾರೆ. ಹೀಗೆ ಶಾಲೆಯಿಂದ ಹೊರಗೆ ಉಳಿಯುವ ಮಕ್ಕಳೆಲ್ಲಾ ಬೇರೆಯವರ ಹೊಲ-ಗದ್ದೆಗಳಲ್ಲಿ ಕೆಲಸ ಮಾಡುತ್ತಾರೆ. ಶಿಕ್ಷಣ ಇಲಾಖೆ ಮಕ್ಕಳನ್ನು ಮುನ್ನೆಲೆಗೆ ತರುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ರೂಪಿಸಿದರೂ ಅದು ಸಾಧ್ಯವಾಗುತ್ತಿಲ್ಲ. ರಾಯಚೂರು ಹಾಗೂ ಆಂಧ್ರದ ಗಡಿಭಾಗ ಹಾಗು ದೇವದುರ್ಗ ಭಾಗದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಬಾಲ ಕಾರ್ಮಿಕರಿದ್ದಾರೆ. ಇಂಥ ಮಕ್ಕಳ ಬಗ್ಗೆ ಬಾಲ ಕಾರ್ಮಿಕ ಇಲಾಖೆ ಅಧಿಕಾರಿಗಳು ಕೂಡ ನಿಗಾ ವಹಿಸಿದ್ದಾರೆ. ಜೊತೆಗೆ ವಿವಿಧ ತಂಡಗಳ ಮೂಲಕ ಕೂಲಿ ಕೆಲಸ ಮಾಡುವ ಜಾಗಕ್ಕೆ ಹೋಗಿ ಮಕ್ಕಳನ್ನು ರಕ್ಷಣೆ ಮಾಡಿ, ಕೂಲಿ ಕೆಲಸ ಮಾಡಿಸಿಕೊಳ್ಳುವವರ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸುತ್ತಲೇ ಇದ್ದಾರೆ. ಆದರೂ ಬಾಲ ಕಾರ್ಮಿಕ ಪದ್ಧತಿ ಕಡಿಮೆಯಾಗಿಲ್ಲ.

ಹೈದರಾಬಾದ್ -ಕರ್ನಾಟಕ ಭಾಗದಲ್ಲಿ ಪೋಷಕರು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಲ್ಲ. ಶಿಕ್ಷಣ ಕಲಿಸಬೇಕು ಎನ್ನುವ ಜಾಗೃತಿ ಇಲ್ಲ. ಒಮ್ಮೆ ಮಗು ಕೆಲಸಕ್ಕೆ ಹೋದರೆ ಮತ್ತೆ ಶಾಲೆಗೆ ಬರುವುದೇ ಇಲ್ಲ. ಹೀಗೆ ಆಗದೇ ಇರುವ ರೀತಿ ನೋಡಿಕೊಳ್ಳಬೇಕು. ಇಲ್ಲದಿದ್ದರೆ, ರೈಟ್ ಟು ಎಜುಕೇಶನ್ ಆಕ್ಟ್ ಪ್ರಕಾರ 100 ಕ್ಕೆ 100 ರಷ್ಟು ಮಕ್ಕಳ ಶಾಲೆ ಹಾಜರಾತಿ ನಿರ್ವಹಿಸಲು ಸಾಧ್ಯವಿಲ್ಲ ಅಂತ ಶಿಕ್ಷಣ ತಜ್ಞ ಹಫಿಜುಲ್ಲಾ ಹೇಳಿದರು.

ಪೋಷಕರು ಮಕ್ಕಳನ್ನು ಶಾಲೆ ಬಿಡಿಸಿ ಕೂಲಿ ಕೆಲಸಗಳಿಗೆ ಕರೆದೊಯ್ಯುತ್ತಾರೆ. ಗೂಡ್ಸ್ ವಾಹನಗಳ ಮೇಲೆ ಮಕ್ಕಳನ್ನು ಕೂರಿಸಿಕೊಂಡು ಹೋಗುವುದು ನಿರಂತರವಾಗಿ ನಡೆಯುತ್ತಿದೆ. ಈ ಬಗ್ಗೆ ಕಾನೂನು ಕ್ರಮಗಳನ್ನು ಕೈಗೊಂಡು, ಮಕ್ಕಳಿಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಅಂತ ಬಾಲಕಾರ್ಮಿಕ ಇಲಾಖೆ ಅಧಿಕಾರಿ ಮಂಜುನಾಥ್ ರೆಡ್ಡಿ ತಿಳಿಸಿದ್ದಾರೆ.

TV9 Kannada


Leave a Reply

Your email address will not be published.