ರಾಯಚೂರು: ಬ್ಲ್ಯಾಕ್ ಫಂಗಸ್ ಬಳಿಕ ಇದೀಗ ಜಿಲ್ಲೆಯಲ್ಲಿ ವೈಟ್ ಫಂಗಸ್ ಲಗ್ಗೆ ಇಟ್ಟಿದ್ದು, ಕಳೆದ 15 ದಿನಗಳಲ್ಲಿ 6 ಜನರಲ್ಲಿ ವೈಟ್ ಫಂಗಸ್ ಪತ್ತೆಯಾಗಿದೆ.

ನಗರದ ಖಾಸಗಿ ಆಸ್ಪತ್ರೆ ಒಂದರಲ್ಲೇ 6 ಪ್ರಕರಣ ಪತ್ತೆಯಾಗಿದ್ದು, ಕೋವಿಡ್ ನಿಂದ ಗುಣಮುಖರಾದವರಲ್ಲಿ ವೈಟ್ ಫಂಗಸ್ ಪತ್ತೆಯಾಗುತ್ತಿದೆ. ಗ್ಯಾಸ್ಟ್ರೋ, ಲಿವರ್ ಹಾಗೂ ಎಂಡೋಸ್ಕೋಪಿ ತಜ್ಞ ಡಾ.ಮಂಜುನಾಥ್ ರಿಂದ ಅವರು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಸೋಂಕಿತರು ಮನೆಯಲ್ಲೇ ಚೇತರಿಸಿಕೊಳ್ಳುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಡಾ.ಮಂಜುನಾಥ್, ವೈಟ್ ಫಂಗಸ್ ಬಗ್ಗೆ ಹೆದರಿಕೊಳ್ಳುವ ಅಗತ್ಯವಿಲ್ಲ. 14 ದಿನ ಔಷಧಿ ಕೊಡಲಾಗುತ್ತದೆ, 7 ದಿನಗಳಲ್ಲಿ ಸೋಂಕಿತರು ಗುಣಮುಖರಾಗುತ್ತಾರೆ. ಅನ್ನನಾಳದಲ್ಲಿ ತೊಂದರೆ ಕೊಡುವ ಸೋಂಕು ಜೀವಮಾರಕವಲ್ಲ. ವೈಟ್ ಫಂಗಸ್ ರಕ್ತಕ್ಕೆ ಸೇರಿದರೆ ಮಾರಣಾಂತಿಕವಾಗುವ ಸಾಧ್ಯತೆಯಿದೆ ಅಷ್ಟೆ. 100 ಜನರಿಗೆ ಸ್ಟಿರೈಡ್ ಕೊಟ್ಟರೆ ಒಬ್ಬರಲ್ಲಿ ಈ ವೈಟ್ ಫಂಗಸ್ ಕಾಣಿಸಿಕೊಳ್ಳುತ್ತದೆ ಎಂದು ತಿಳಿಸಿದರು.

ಕ್ಯಾಂಡಿಡಾ ಫಂಗಸ್, ಆಸ್ಪರ್ ಜಿಲೋಸಿಸ್ ಫಂಗಸ್ ನ್ನು ವೈಟ್ ಫಂಗಸ್ ಎಂದು ಕರೆಯುತ್ತಾರೆ. ಜನ ಹೆದರಿಕೊಳ್ಳುವ ಅಗತ್ಯವಿಲ್ಲ ಎಂದು ಡಾ.ಮಂಜುನಾಥ್ ಧೈರ್ಯ ತುಂಬಿದ್ದಾರೆ. ಅಲ್ಲದೆ ಈಗ ಸೋಂಕು ಪತ್ತೆಯಾದ 6 ಜನ ಸಹ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

The post ರಾಯಚೂರಿನಲ್ಲಿ 15 ದಿನಗಳಲ್ಲಿ 6 ವೈಟ್ ಫಂಗಸ್ ಪ್ರಕರಣ ಪತ್ತೆ appeared first on Public TV.

Source: publictv.in

Source link