– ರಿಮ್ಸ್ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರ ಪರದಾಟ
– ಇಂಜೆಕ್ಷನ್ ಅಡ್ಡ ಪರಿಣಾಮಕ್ಕೆ ಹೆದರಿರುವ ಸೋಂಕಿತರು

ರಾಯಚೂರು: ಮೂರನೇ ಅಲೆ ಮುನ್ನೆಚ್ಚರಿಕೆ ಹಿನ್ನೆಲೆ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ. ನಗರದ ರಿಮ್ಸ್ ಆಸ್ಪತ್ರೆಯಲ್ಲಿ 160 ಬೆಡ್ ಎನ್‍ಐಸಿಯು ಹಾಗೂ ಸಿಐಸಿಯು, 200 ಬೆಡ್ ಮಕ್ಕಳಿಗಾಗಿ ಕಾಯ್ದಿರಿಸಲಾಗಿದೆ. ಆಕ್ಸಿಜನ್ ಮಾಸ್ಕ್, ಪೀಡಿಯಾಟ್ರಿಕ್ ವೆಂಟಿಲೇಟರ್ ಖರೀದಿ ಪ್ರಕ್ರಿಯೆ ನಡೆದಿದೆ. ಎಲ್ಲಾ ತಾಲೂಕು ಕೇಂದ್ರಗಳಲ್ಲೂ 500 ಎಲ್‍ಪಿಎಂ ಆಕ್ಸಿಜನ್ ಉತ್ಪಾದನಾ ಘಟಕಗಳನ್ನ ಅಳವಡಿಸಲು ಹಾಗೂ ಸಿಟಿ ಸ್ಕ್ಯಾನ್ ಯಂತ್ರಗಳಿಗಾಗಿ ಟೆಂಡರ್ ಪ್ರಕ್ರಿಯೆ ಆಗಿದೆ ಅಂತ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.

ಸರ್ಕಾರಿ ಹಾಗೂ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ರಷ್ಟು ಪೀಡಿಯಾಟ್ರಿಕ್ ಸೇವೆಗೆ ಬದಲಾಯಿಸಲು ಸೂಚಿಸಲಾಗಿದೆ. ಎಷ್ಟು ವೈದ್ಯರು, ನರ್ಸ್ ಗಳು ಬೇಕಾಗುತ್ತದೆ ಅನ್ನೋದರ ಬಗ್ಗೆ ಈಗಾಗಲೇ ಸಭೆಗಳನ್ನ ಮಾಡಲಾಗಿದೆ. ಹೆಚ್ಚುವರಿ ಸಿಬ್ಬಂದಿಗಳನ್ನ ತೆಗೆದುಕೊಳ್ಳಲಾಗುತ್ತದೆ ಮತ್ತು ಎಲ್ಲಾ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುತ್ತದೆ ಅಂತ ಹೇಳಿದ್ದಾರೆ.

ಇನ್ನೂ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಈಗ ಹೊಸದಾಗಿ ಯಾವುದು ದಾಖಲಾಗುತ್ತಿಲ್ಲ. ದಾಖಲಾದ ಎಲ್ಲಾ ಸೋಂಕಿತರಿಗೂ ಮೊದಲ ಹಂತದ ಶಸ್ತ್ರಚಿಕಿತ್ಸೆ ಆಗಿದೆ. ಈಗ ಎರಡನೇ ಹಂತದ ಶಸ್ತ್ರಚಿಕಿತ್ಸೆ ನಡೆಯುತ್ತಿದೆ ಅಂತ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 100 ಬ್ಲ್ಯಾಕ್ ಫಂಗಸ್ ಪ್ರಕರಣಗಳು ದಾಖಲಾಗಿದ್ದು ಇದರಲ್ಲಿ 16 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ನಾಲ್ಕು ಜನ ಕಣ್ಣು ಕಳೆದುಕೊಂಡಿದ್ದಾರೆ. ಐದು ಜನರಿಗೆ ಸೋಂಕು ಮೆದುಳಿಗೆ ತಗುಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಸದ್ಯಕ್ಕೆ ಜಿಲ್ಲೆಯಲ್ಲಿ 1000 ಕ್ಕೂ ಹೆಚ್ಚು ಅಂಪೋಟೆರಿಸಿನ್ ಬಿ ಇಂಜೆಕ್ಷನ್ ಲಭ್ಯವಿದೆ. ಆದ್ರೆ ಸದ್ಯ ಲಭ್ಯವಿರುವ ಇಂಜೆಕ್ಷನ್ ಸೋಂಕಿತರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ಜ್ವರ, ವಾಂತಿ ಕಾಣಿಸಿಕೊಳ್ಳುತ್ತಿದೆ. ಇಂಜೆಕ್ಷನ್ ಪಡೆಯಲು ಬ್ಲಾಕ್ ಫಂಗಸ್ ಸೋಂಕಿತರು ಹೆದರುತ್ತಿದ್ದು, ಬೇರೆ ಬ್ಯಾಚ್ ನ ಇಂಜೆಕ್ಷನ್ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಆದ್ರೆ ವೈದ್ಯರು ಮಾತ್ರ ಸದ್ಯ ಲಭ್ಯವಿರುವ ಇಂಜೆಕ್ಷನ್ ನೀಡುತ್ತಿದ್ದು, ಅಡ್ಡ ಪರಿಣಾಮ ತಡೆಯಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಸೋಂಕಿತರು ಔಷಧಿಯನ್ನ ಬದಲಿಸುವಂತೆ ಒತ್ತಾಯಿಸಿದ್ದಾರೆ.

The post ರಾಯಚೂರಿನ ಪ್ರತೀ ಆಸ್ಪತ್ರೆಯಲ್ಲೂ ಶೇ.50 ರಷ್ಟು ಬೆಡ್ ಮಕ್ಕಳಿಗೆ ಮೀಸಲು: 3ನೇ ಅಲೆ ಮುನ್ನೆಚ್ಚರಿಕೆ appeared first on Public TV.

Source: publictv.in

Source link