ರಾವತ್ ಪಾರ್ಥಿವ ಶರೀರ ಇಂದು ದೆಹಲಿಗೆ ಶಿಫ್ಟ್ -ಟಾಪ್ 10 ಸುದ್ದಿಗಳ ಕ್ವಿಕ್​ರೌಂಡಪ್


ಸಿಡಿಎಸ್​ ಬಿಪಿನ್ ರಾವತ್ ಅಮರ್ ರಹೇ
ತಮಿಳುನಾಡಿನ ಕೂನೂರಿನಲ್ಲಿ ನಿನ್ನೆ ಮಧ್ಯಾಹ್ನ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ದುರ್ಮರಣ ಹೊಂದಿದ್ದಾರೆ. ಘಟನೆಯಲ್ಲಿ ಬಿಪಿನ್ ಪತ್ನಿ ಮಧುಲಿಕಾ, ಆರ್ಮಿ ಬ್ರಿಗೇಡಿಯರ್ ಎಲ್​.ಎಸ್​. ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ಲ್ಯಾನ್ಸ್​ನಾಯಕ್ ಹುದ್ದೆಯಲ್ಲಿದ್ದ ವಿವೇಕ್ ಕುಮಾರ್, ಬಿ.ಸಾಯಿ ತೇಜ, ವಿಂಗ್​ ಕಮಾಂಡರ್ ಪಿಎಸ್​. ಚೌಹ್ವಾಣ್​ ಸೇರಿದಂತೆ ಹೆಲಿಕಾಪ್ಟರ್​ನಲ್ಲಿದ್ದ ಒಟ್ಟು 13 ಜನ ಮೃತಪಟ್ಟಿದ್ದಾರೆ.

ರಾವತ್ ಪಾರ್ಥಿವ ಶರೀರ ಇಂದು ದೆಹಲಿಗೆ ಶಿಫ್ಟ್
ನಿನ್ನೆ ತಮಿಳುನಾಡಿನ ಕೂನೂರು ಅರಣ್ಯ ಪ್ರದೇಶದಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಸಿಡಿಎಸ್ ಬಿಪಿನ್ ರಾವತ್ ಮೃತದೇಹ ಇಂದು ದೆಹಲಿಗೆ ಶಿಫ್ಟ್ ಆಗಲಿದೆ. ಇಂದು ಬೆಳಗ್ಗೆ ತಮಿಳುನಾಡಿನ ವೆಲ್ಲಿಂಗ್ಟನ್​ನಲ್ಲಿ ಪುಷ್ಪನಮನದ ಬಳಿಕ ಪಾರ್ಥಿವ ಶರೀರವನ್ನು ಸೇನಾ ವಿಮಾನದ ಮೂಲಕ ಪಾರ್ಥಿವ ಶರೀರಗಳನ್ನು ಶಿಫ್ಟ್ ಮಾಡಲಾಗುತ್ತೆ. ದೆಹಲಿಯ ಕಂಟೋನ್​ಮೆಂಟ್ ಪ್ರದೇಶದಲ್ಲಿರೋ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ರಾವತ್ ದಂಪತಿಗೆ ವಿದಾಯ ಹೇಳಲಾಗುತ್ತೆ.

ಗ್ರೂಪ್ ಕ್ಯಾಪ್ಟನ್​ ವರುಣ್​ ಸಿಂಗ್​ಗೆ ಮುಂದುವರಿದ ಚಿಕಿತ್ಸೆ
ಹೆಲಿಕಾಪ್ಟರ್​ ದುರಂತದಲ್ಲಿ ಗಂಭೀರ ಗಾಯಗೊಂಡಿರುವ ಗ್ರೂಪ್ ಕ್ಯಾಪ್ಟನ್​ ವರುಣ್​ ಸಿಂಗ್​, ತಮಿಳುನಾಡಿನ ವೆಲ್ಲಿಂಗ್ಟನ್​ನ ಮಿಲಿಟರಿ​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವರುಣ್​ ಸಿಂಗ್​ ಶೇಕಡಾ 80ರಷ್ಟು ಸುಟ್ಟ ಗಾಯಗಳಿಗೆ ಒಳಗಾಗಿದ್ದು, ನುರಿತ ವೈದ್ಯರಿಂದ ಚಿಕಿತ್ಸೆ ಮುಂದುವರಿದಿದೆ. ಇನ್ನೊಂದೆಡೆ ಕೊಯಂಬತ್ತೂರಿನ ಆಸ್ಪತ್ರೆಯೊಂದರಲ್ಲಿ ತಮಿಳುನಾಡು ಸರ್ಕಾರ ಸಕಲ ವ್ಯವಸ್ಥೆ ಕಲ್ಪಿಸಿದೆ. ವರುಣ್ ಸಿಂಗ್​ರನ್ನ ಕೊಯಮತ್ತೂರಿನ ಆಸ್ಪತ್ರೆಗೆ ಶಿಫ್ಟ್​ ಮಾಡಲು ವಾಯುಸೇನೆ ನಿರ್ಧರಿಸಿದ್ರೆ ಸಹಕಾರಿಯಾಗಲಿ ಅಂತಾ ಸ್ಟಾಲಿನ್ ಸರ್ಕಾರ ಈಗಾಗಲೇ ಆಸ್ಪತ್ರೆಯಲ್ಲಿ ವಿಶೇಷ ವ್ಯವಸ್ಥೆ ಮಾಡಿದೆ.

ಉಭಯ ಸದನಕ್ಕೆ ಮಾಹಿತಿ ನೀಡಲಿರುವ ರಕ್ಷಣಾ ಸಚಿವ
ಹೆಲಿಕಾಪ್ಟರ್​ ದುರಂತದ ಬಗ್ಗೆ ಇಂದು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಮಾಹಿತಿ ನೀಡಲಿರುವ ರಾಜನಾಥ್ ಸಿಂಗ್, ಸಂಜೆ ರಾಜ್ಯಸಭೆಯಲ್ಲಿ ಘಟನೆ ಕುರಿತ ಮಾತನಾಡಲಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ನಿನ್ನೆಯ ದುರ್ಘಟನೆಯಲ್ಲಿ ಮಡಿದವರಿಗೆ, ಶಾಲಾಮಕ್ಕಳು, ರಾಜಕಾರಣಿಗಳು ಸೇರಿದಂತೆ ಇಡೀ ದೇಶವೇ ಸಂತಾಪ ಸೂಚಿಸುತ್ತಿದೆ.

‘ಹೆಲಿಕಾಪ್ಟರ್ ಪತನದ ಹಿಂದೆ ಚೀನಾ ಕೈವಾಡ’
ಹೆಲಿಕಾಪ್ಟರ್ ಪತನದ ಹಿಂದೆ ಚೀನಾ ದೇಶದ ಕೈವಾಡವಿದೆ ಅಂತಾ ರಾಜ್ಯಸಭಾ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಭಾರತೀಯ ಸೇನೆಯಲ್ಲಿ ಇರುವ ಕೆಲವೇ ಕೆಲವು ಹಿರಿಯ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಆಗಾಗ ಎಚ್ಚರಿಕೆ ಸಂದೇಶವನ್ನು ನೀಡುತ್ತಿದ್ದರು. ಚೀನಾದಿಂದ ಬೆದರಿಕೆಗಳು ಹೆಚ್ಚುತ್ತಿವೆ, ಚೀನಾದಿಂದ ನಿಯಮಗಳು ಪಾಲನೆ ಆಗುತ್ತಿಲ್ಲ ಎಂಬುದನ್ನು ಸರ್ಕಾರದ ಗಮನಕ್ಕೆ ತರುತ್ತಿದ್ದರು ಅಂತಾ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿ ಉಡಾವಣೆ ಯಶಸ್ವಿ
ಒಡಿಶಾದ ಕರಾವಳಿ ಪ್ರದೇಶ ಚಂಡಿಪುರದ ಟೆಸ್ಟ್ ರೇಂಜ್‌ನಿಂದ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಬ್ರಹ್ಮೋಸ್​ ಕ್ಷಿಪಣಿಯ ಉಡಾವಣೆ ​ ಯಶಸ್ವಿಯಾಗಿರುವುದರ ಮೂಲಕ ಭಾರತ ಮತ್ತೊಂದು ಮೈಲಿಗಲ್ಲನ್ನ ಸೃಷ್ಟಿಸಿದೆ. ಈ ಮೂಲಕ ಗಡಿಯಲ್ಲಿ ಪದೇ ಪದೇ ಖ್ಯಾತೆ ತೆಗೆಯುತ್ತಿರುವ ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ನೀಡಲಾಗಿದೆ. ಕೇಂದ್ರ ಸರ್ಕಾರ ಭಾರತದಲ್ಲಿ ಮತ್ತಷ್ಟು ಬ್ರಹ್ಮೋಸ್​ ಕ್ಷಿಪಣಿಯನ್ನ ತಯಾರಿಸುವ ಯೋಜನೆಗೆ ಇದು ಬಹುದೊಡ್ಡ ಮೈಲಿಗಲ್ಲು ಅಂತಾ ಪರಿಗಣಿಸಲಾಗಿದೆ.

ಒಮಿಕ್ರಾನ್​ಗೆ ಬ್ರೇಕ್​ ಹಾಕುತ್ತಂತೆ ಬೂಸ್ಟರ್ ಡೋಸ್
ಮಹಾಮಾರಿ ಕೊರೊನಾ ಸೋಂಕಿನ ರೂಪಾಂತರಿ ತಳಿ ಒಮಿಕ್ರಾನ್ ಹಲವಾರು ದೇಶದಲ್ಲಿ ಆರ್ಭಟ ಮುಂದುವರೆದಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ. ಆದ್ರೆ ಒಮಿಕ್ರಾನ್ ಸೋಂಕಿಗೆ ಕೋವಿಡ್-19 ಲಸಿಕೆಯ ಬೂಸ್ಟರ್ ಡೋಸ್ ಬ್ರೇಕ್ ಹಾಕಲಿದೆ ಎಂದು ಫೈಜರ್ ಸಂಸ್ಥೆ ತಿಳಿಸಿದೆ. ಫೈಜರ್ ಮತ್ತು ಬಯೋಎನ್‌ಟೆಕ್ ಲ್ಯಾಬ್ ಪರೀಕ್ಷೆಯಲ್ಲಿ ಬೂಸ್ಟರ್ ಡೋಸ್ ಒಮಿಕ್ರಾನ್ ವೈರಸ್ ವಿರುದ್ಧ ಹೋರಾಡಲಿದೆ ಎಂದು ತಿಳಿದು ಬಂದಿದೆ ಎಂದು ಫೈಜರ್​ ಸಂಸ್ಥೆ ತಿಳಸಿದೆ.

ಕತ್ರಿನಾ-ವಿಕ್ಕಿ ಮದುವೆ ₹80 ಕೋಟಿಗೆ ಪ್ರಸಾರ ಡೀಲ್
ಬಾಲಿವುಡ್ ಸ್ಟಾರ್​ ನಟಿ ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್ ಇಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ರಾಜಸ್ಥಾನದ ಬರ್ವಾರದಲ್ಲಿರುವ ಸಿಕ್ಸ್ ಸೆನ್ಸಸ್​ ಫೋರ್ಟ್​ನಲ್ಲಿ ಸಂಜೆ 3.30 ರಿಂದ 3.45ರ ವೇಳೆಯಲ್ಲಿ ವಿವಾಹವಾಗಲಿದ್ದಾರೆ. ಇಂದು ನಡೆಯಲಿರುವ ವಿವಾಹ ಕಾರ್ಯಕ್ರಮವನ್ನು, ಒಟಿಟಿಯಲ್ಲಿ ಪ್ರಸಾರ ಮಾಡಲು ಒಪ್ಪಿಗೆ ಕೊಡುವಂತೆ ಕತ್ರಿನಾ ಹಾಗೂ ವಿಕ್ಕಿ ಜೊತೆಗೆ ಅಮೆಜಾನ್ ಪ್ರೈಮ್ 80 ಕೋಟಿ ರೂಪಾಯಿಗೆ ಡೀಲ್ ಮಾಡಿಕೊಂಡಿದೆ ಎನ್ನಲಾಗ್ತಿದೆ.

ಇಂದು RRR ಸಿನಿಮಾದ ಟ್ರೇಲರ್ ಲಾಂಚ್
ಇಂದು ಬಹುನಿರೀಕ್ಷಿತ ಥ್ರಿಬಲ್ ಆರ್ ಸಿನಿಮಾದ ಟ್ರೈಲರ್ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡದಲ್ಲೂ ಕೂಡ ದೊಡ್ಡ ಮಟ್ಟದಲ್ಲಿ ಟ್ರೈಲರ್ ಲಾಂಚ್ ಆಗಲಿದೆ, ರಾಜ್ಯದ 30 ಜಿಲ್ಲೆಗಳ 30 ಹೆಸರಾಂತ ಚಿತ್ರಮಂದಿಗಳಲ್ಲಿ ಟ್ರೈಲರ್ ಲಾಂಚ್ ಆಗುತ್ತಿದೆ. ಇನ್ನು, ಥ್ರಿಬಲ್​ ಆರ್​​​ ಚಿತ್ರದ ನಾಟು ನಾಟು ಹಾಡು ಇದೀಗ ಸಖತ್​ ಸುದ್ದಿಯಲ್ಲಿದೆ., ಜೂನಿಯರ್​​ ಎನ್​ಟಿಆರ್​​ ಮತ್ತು ರಾಮ್​​ ಚರಣ್​ ತೇಜ್​​ ಸಿಗ್ನೇಚರ್​ ಸ್ಟೆಪ್ಟ್​​ ಸೋಷಿಯಲ್​ ಮೀಡಿಯಾ ಸಾಗರದಲ್ಲಿ ಸದ್ದು ಮಾಡ್ತಿದೆ.

‘ಕಿಂಗ್’ ಕೆಳಗಿಳಿಸಿ ರೋಹಿತ್​ಗೆ ಕ್ಯಾಪ್ಟನ್ ಪಟ್ಟ
ಭಾರತದ ಏಕದಿನ ಕ್ರಿಕೆಟ್ ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಬಿಸಿಸಿಐ ಕೆಳಗಿಳಿಸಿದೆ. ಕೊಹ್ಲಿ ಸ್ಥಾನಕ್ಕೆ ರೋಹಿತ್ ಶರ್ಮಾರನ್ನು ನಾಯಕರನ್ನಾಗಿ ಆಯ್ಕೆ ಮಾಡಿದೆ. ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದಿಂದ ರೋಹಿತ್ ಶರ್ಮಾ, ಭಾರತ ಕ್ರಿಕೆಟ್ ತಂಡದ ಏಕದಿನ ಹಾಗೂ ಟಿ-ಟ್ವೆಂಟಿ ತಂಡದ ಫುಲ್​ ಟೈಮ್​ ನಾಯಕನಾಗಿರಲಿದ್ದಾರೆ. ಇನ್ನು, ಟೆಸ್ಟ್​ ತಂಡದ ಉಪನಾಯಕ ಸ್ಥಾನದಿಂದ ಅಜಿಂಕ್ಯಾ ರಹಾನೆಗೆ ಬಿಸಿಸಿಐ ಕೊಕ್ ನೀಡಿದೆ. ರಹಾನೆ ಬದಲಿಗೆ ಟೆಸ್ಟ್​​ನಲ್ಲಿ ರೋಹಿತ್ ಭಾರತದ ವೈಸ್ ಕ್ಯಾಪ್ಟನ್ ಆಗಿರಲಿದ್ದಾರೆ.

News First Live Kannada


Leave a Reply

Your email address will not be published. Required fields are marked *