
9ನೇ ತರಗತಿ ಪುಸಕ್ತದಲ್ಲಿ ಬಸವಣ್ಣನ ಪಾಠ
ಬಸವಣ್ಣ ಉಪನಯನವಾದ ನಂತರ ಕೂಡಲಸಂಗಮಕ್ಕೆ ನಡೆದರು. ಶೈವ ಗುರುಗಳ ಸಾನ್ನಿಧ್ಯದಲ್ಲಿ ಬಸವಣ್ಣನವರು ಲಿಂಗದೀಕ್ಷೆ ಪಡೆದರು. ಬಸವಣ್ಣನವರು ವೀರಶೈವ ಲಿಂಗಾಯತ ಮತ ಅಭಿವೃದ್ಧಿಪಡಿಸಿದ್ದರು.
ಬೆಂಗಳೂರು: ರಾಜ್ಯದಲ್ಲಿ ಪಠ್ಯ ಪರಿಷ್ಕರಣೆ ವಿವಾದ ಮುಗಿಯುವಂತೆ ಕಾಣುತ್ತಿಲ್ಲ. ಒಂದಲ್ಲ ಒಂದು ವಿಚಾರ ಚರ್ಚೆಗೆ ಕಾರಣವಾಗುತ್ತಿದೆ. ರಾಷ್ಟ್ರಕವಿ ಕುವೆಂಪುಗೆ (Kuvempu) ಅವಮಾನ ಮಾಡಲಾಗಿದೆ ಅಂತ ಹಲವರು ಧ್ವನಿ ಎತ್ತಿದ್ದಾರೆ. ಈ ನಡುವೆ ಜಗಜ್ಯೋತಿ ಬಸವಣ್ಣನ (Basavanna) ಪಠ್ಯ ಪರಿಷ್ಕರಣೆಯ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಸವಣ್ಣ ಉಪನಯನವಾದ ನಂತರ ಕೂಡಲಸಂಗಮಕ್ಕೆ ನಡೆದರು. ಶೈವ ಗುರುಗಳ ಸಾನ್ನಿಧ್ಯದಲ್ಲಿ ಬಸವಣ್ಣನವರು ಲಿಂಗದೀಕ್ಷೆ ಪಡೆದರು. ಬಸವಣ್ಣನವರು ವೀರಶೈವ ಲಿಂಗಾಯತ ಮತ ಅಭಿವೃದ್ಧಿಪಡಿಸಿದ್ದರು. ಉಪನಯನ ಮಾಡಿಕೊಳ್ಳಲಿಲ್ಲ, ಶೈವ ಗುರುಗಳಿಂದ ಲಿಂಗದೀಕ್ಷೆ ಪಡೆದ್ರಾ? ಎಂಬ ವಿಚಾರ ಚರ್ಚೆಗೆ ಕಾರಣವಾಗುತ್ತಿದೆ.
9ನೇ ತರಗತಿಯ ಸಮಾಜ-ವಿಜ್ಞಾನ ವಿಭಾಗದ ಪಾಠದಲ್ಲಿ ಈ ಬಗ್ಗೆ ಸೇರಿಸಲಾಗಿದೆ. ಆದರೆ ಈ ಪರಿಷ್ಕರಣೆ ಯಾವ ಅವಧಿಯಲ್ಲಿ ಆಗಿರುವುದು ಸ್ಪಷ್ಟನೆ ಸಿಕ್ಕಿಲ್ಲ. ಬಸವಣ್ಣನವರ ಯಾವುದೇ ಪಾಠವನ್ನು ನಾವು ಪರಿಷ್ಕರಣೆ ಮಾಡಿಲ್ಲ, ಪರಿಷ್ಕರಿಸಿಲ್ಲ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದ್ದಾರೆ.
ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಜಯಮೃತ್ಯುಂಜಯ ಸ್ವಾಮೀಜಿ:
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಜಯಮೃತ್ಯುಂಜಯ ಸ್ವಾಮೀಜಿ, ಪಠ್ಯದಲ್ಲಿ ಕುವೆಂಪು ಬಳಿಕ ಬಸವಣ್ಣ ಅವರ ತತ್ವಕ್ಕೆ ಅಪಚಾರ ಮಾಡಲಾಗಿದೆ. ಪಠ್ಯದಲ್ಲಿನ ಸಾಲನ್ನು ನೋಡಿ ಎದೆಗೆ ಕಲ್ಲು ಹೊಡೆದಂತಾಯ್ತು. ಬಸವಣ್ಣನವರ ತತ್ವಕ್ಕೆ ಅಪಚಾರವಾಗುವ ಕೆಲಸ ಆಗಿದೆ. ಸೈದ್ಧಾಂತಿಕ ವಿಚಾರಕ್ಕೆ ಕೈ ಹಾಕಬೇಡಿ. ಬಸವಣ್ಣ ಅವರ ತತ್ವ ಸಂದೇಶಗಳನ್ನು ಮಕ್ಕಳಿಗೆ ಬೋಧಿಸಬೇಕು. ಬಸವಣ್ಣನವರ ತತ್ವಗಳ ಬಗ್ಗೆ ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಅಸಮಾನತೆ ವಿರುದ್ಧ ಬಸವಣ್ಣ ಅವರ ಹೋರಾಟ ಜಗಜ್ಜಾಹೀರು ಆಗಿದೆ. ಬೊಮ್ಮಾಯಿ ಅವರೇ ನಿಮ್ಮ ತಂದೆ ಬಸವಣ್ಣನ ಭಕ್ತರಾಗಿದ್ದರು. ಅನೇಕ ಪೂಜ್ಯರ ಮಾರ್ಗದರ್ಶನ ನಿಮಗಿದೆ. ಪುಸ್ತಕ ಬಿಡುಗಡೆ ಆಗೋ ಮುಂಚೆ ಲೋಪದೋಷ ಸರಿಪಡಿಸಿ. ಬಸವಣ್ಣನವರ ತತ್ವ ಸಿದ್ಧಾಂತಕ್ಕೆ ದಕ್ಕೆಯಾದ್ರೆ ಸಹಿಸುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.