ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಭದ್ರತಾಲೋಪ ಉಂಟಾಗಿದ್ದು, ಯುವಕನೊಬ್ಬ ತನ್ನ ಗೆಳತಿಯೊಂದಿಗೆ ಕಾರಿನಲ್ಲಿ ಬಂದು ಕೆಲ ಕಾಲ ಆತಂಕ ಸೃಷ್ಟಿಯಾದ ಘಟನೆ ನಿನ್ನೆ ನಡೆದಿದೆ.
ವರದಿಗಳ ಪ್ರಕಾರ, ರಾಷ್ಟ್ರಪತಿ ಭವನ ಗೇಟ್ ನಂಬರ್ 35ರಲ್ಲಿ ಕಾರೊಂದು ಏಕಾಏಕಿಯಾಗಿ ನುಗ್ಗಿದೆ. ಕೂಡಲೇ ಎಚ್ಚೆತ್ತ ಭದ್ರತಾ ಸಿಬ್ಬಂದಿ ಕಾರನ್ನ ಚೇಸ್ ಮಾಡಿದ್ದಾರೆ. ಕಾರನ್ನ ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಬಳಿಕ ಕಾರನ್ನ ಪರಿಶೀಲನೆ ಮಾಡಿದಾಗ ಓರ್ವ ಯುವಕ ಹಾಗೂ ಯುವತಿ ಕಾರಿನಲ್ಲಿ ಇರೋದು ಗೊತ್ತಾಗಿದೆ.
ಕೂಡಲೇ ಅವರನ್ನ ಭದ್ರತಾ ಸಿಬ್ಬಂದಿ ವಿಚಾರಣೆಗೆ ಒಳಪಡಿಸಿ, ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಾರೆ. ಬರೋಬ್ಬರಿ 24 ಗಂಟೆಗಳ ಕಾಲ ಪೊಲೀಸ್ ಅಧಿಕಾರಿಗಳು ಅವರನ್ನ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಯುವಕ ಮದ್ಯ ಸೇವನೆ ಮಾಡಿರೋದು ಗೊತ್ತಾಗಿದೆ. ಕುಡಿದ ಮತ್ತಿನಲ್ಲಿ ಯುವತಿಯನ್ನ ಕೂರಿಸಿಕೊಂಡು ಸುತ್ತಾಡಲು ಹೊರಟಿದ್ದ ಅನ್ನೋದು ತಿಳಿದುಬಂದಿದೆ. ಸದ್ಯ ಪ್ರಕರಣ ದಾಖಲಿಸಿರುವ ಪೊಲೀಸರು, ವಿಚಾರಣೆಯನ್ನ ಮುಂದುವರಿಸಿದ್ದಾರೆ.