ಬೆಂಗಳೂರು: ರಾಷ್ಟ್ರಪತಿ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್​ ಅವರಿಗೆ ಸಿಎಂ ಬಿಎಸ್​ ಯಡಿಯೂರಪ್ಪ ಸೇರಿದಂತೆ ಹಲವು ಸಿನಿಮಾ ಗಣ್ಯರು, ರಾಜಕೀಯ ನಾಯಕರು, ವಿವಿಧ ಕ್ಷೇತ್ರಗಳ ಗಣ್ಯರು ವಿದಾಯ ಹೇಳಿದ್ದಾರೆ. ವಿಜಯ್ ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥನೆ ಮಾಡಿದ್ದಾರೆ. ಈವರೆಗೆ ಸಂಚಾರಿ ವಿಜಯ್ ಅವರ ಸಾವಿನ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ..

ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬಿಎಸ್​​ವೈ, ಅಪಘಾತದಿಂದ ನಿಧನರಾದ ಸಂಚಾರಿ ವಿಜಯ ಅವರಿಗೆ ಸಂತಾಪ ವ್ಯಕ್ತಪಡಿಸುತ್ತೇನೆ. ಅವರ ಆಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬಸ್ಥರು, ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದರು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟರು, ಮನೋಜ್ಞ ನಟನೆ ಮೂಲಕ ರಾಜ್ಯದ ಮನೆ, ಮನ ತಲುಪಿದ್ದ ಶ್ರೀ ಸಂಚಾರಿ ವಿಜಯ್ ಅವರ ಅಗಲಿಕೆಯ ಸುದ್ದಿ ತಿಳಿದು ಮನಸ್ಸಿಗೆ ಘಾಸಿಯಾಗಿದೆ. ಅವರ ಕುಟುಂಬಸ್ಥರಿಗೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಚಿವ ಬಿ.ಶ್ರೀರಾಮಲು ಹೇಳಿದ್ದಾರೆ.

ಇಹಲೋಕದ ಸಂಚಾರ ಕೊನೆಗೊಳಿಸಿದ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರಿಗೆ ಭಾವಪೂರ್ಣ ವಿದಾಯ. ಭಗವಂತ ಅವರಿಗೆ ಸದ್ಗತಿ ಕರುಣಿಸಲಿ ಎಂದು ಪ್ರಾರ್ಥನೆ ಎಂದು ಸಂಸದೆ ಶೋಭ ಕರಂದ್ಲಾಜೆ ಬರೆದುಕೊಂಡಿದ್ದಾರೆ.

ಸಂಚಾರಿ ವಿಜಯ್ ಅವರು ಚಿಕಿತ್ಸೆ ಫಲಕಾರಿಯಾಗದೆ ನಮ್ಮನ್ನು ಅಗಲಿದ್ದಾರೆ ಎಂದು ತಿಳಿದು ಮನಸ್ಸಿಗೆ ಅತೀವ ಘಾಸಿಯಾಗಿದೆ. ಪ್ರತಿಭಾವಂತ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದನನ್ನು ನಾವು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಡಿಸಿಎಂ ಅಶ್ವತ್ಥ್​ ನಾರಾಯಣ್ ಹೇಳಿದ್ದಾರೆ.

The post ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್​​ಗೆ ಗಣ್ಯರಿಂದ ಭಾವುಕ ವಿದಾಯ appeared first on News First Kannada.

Source: newsfirstlive.com

Source link