ಕೋವಿಡ್ ಎರಡನೇ ಅಲೆಯಿಂದ ಚೇತರಿಸಿಕೊಂಡಿರುವ ದೆಹಲಿ ಅನ್ಲಾಕ್ ಘೋಷಣೆ ಮಾಡಿ ಶಾಂತವಾಗಿತ್ತು. ಆದ್ರೆ, ಶನಿವಾರ ಗುಪ್ತಚರ ಇಲಾಖೆ ನೀಡಿದ ಪಾಕ್ ನಂಟಿನ ಒಂದು ಸಂದೇಶ ಇಡೀ ದೆಹಲಿಯನ್ನೇ ಬೆಚ್ಚಿ ಬೀಳಿಸಿತ್ತು. ತಕ್ಷಣವೇ ಹೈಅಲರ್ಟ್ ಕೈಗೊಳ್ಳಲಾಯಿತು. ಅಷ್ಟಕ್ಕೂ ಏನಿದು ಪಾಕ್ ನಂಟಿನ ಕಥೆ..?

ಕೋವಿಡ್ ಎರಡನೇ ಅಲೆಯಿಂದ ದೆಹಲಿ ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಆಕ್ಸಿಜನ್ ಕೊರತೆ, ವೆಂಟಿಲೇಟರ್ ಅಲಭ್ಯತೆ, ಆ್ಯಂಬುಲೆನ್ಸ್, ರೆಮ್ಡಿಸಿವಿರ್ ಸಮಸ್ಯೆ.. ಹೀಗೆ ಒಂದಾ ಎರಡಾ? ಸಮಸ್ಯೆಗಳ ಮೇಲೆ ಸಮಸ್ಯೆ ಎದುರಿಸಿತ್ತು. ಸುಮಾರು ಎರಡು ತಿಂಗಳ ಕಾಲ ಲಾಕ್ಡೌನ್ ಘೋಷಣೆ ಮಾಡಿತ್ತು. ಅಂತೂ ಈಗ ಸೋಂಕಿನ ಅಲೆ ಕುಗ್ಗಿದೆ. ಜನಜೀವನ ಸಹಜ ಸ್ಥಿತಿಗೆ ಬಂದಿದೆ. ಆದ್ರೆ, ಕೇಂದ್ರ ಗುಪ್ತಚರ ಇಲಾಖೆ ನೀಡಿದ ಸಂದೇಶದಿಂದ ಶನಿವಾರ ಬೆಳಗ್ಗೆ ಇಡೀ ದೆಹಲಿಯೇ ಲಾಕ್ಡೌನ್ ರೀತಿ ಆಗಿ ಬಿಡ್ತು. ಪ್ರತಿಯೊಂದು ವಾಹನವನ್ನು ತಪಾಸಣೆ ನಡೆಸಲಾಗುತ್ತಿತ್ತು. ಒಟ್ಟಾರೆ ಇಡೀ ದೆಹಲಿಯ ಮೇಲೆ ಪೊಲೀಸರು ಹದ್ದಿನ ಕಣ್ಣನ್ನೇ ಇಟ್ಟಿದ್ರು. ಇದಕ್ಕೆಲ್ಲ ಕಾರಣ ಆಗಿದ್ದು ಪಾಕಿಸ್ತಾನದ ಐಎಸ್ಐ.

 

ಈಗಾಗಲೇ ದೆಹಲಿ ಗಡಿಯಲ್ಲಿ ನೂತನ ಕೃಷಿ ಕಾಯ್ದೆ ಖಂಡಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬರೋಬ್ಬರಿ ಏಳು ತಿಂಗಳಾಯ್ತು. ಈ ಹಿನ್ನೆಲೆಯಲ್ಲಿ ರೈತರು ದೆಹಲಿಯಲ್ಲಿ ಶನಿವಾರ ಪ್ರತಿಭಟನೆ ಹಮ್ಮಿಕೊಂಡಿದ್ರು. ಪ್ರತಿಭಟನೆಯಲ್ಲಿ ಭಾಗಿಯಾಗಲು ಪಂಜಾಬ್, ಹರಿಯಾಣದಿಂದ ಭಾರೀ ಸಂಖ್ಯೆಯ ರೈತರು ದೆಹಲಿಯತ್ತ ಧಾವಿಸುತ್ತಿದ್ದರು. ಆದ್ರೆ, ಅದೇ ಕ್ಷಣಕ್ಕೆ ಕೇಂದ್ರ ಗುಪ್ತದಳದಿಂದ ದೆಹಲಿ ಪೊಲೀಸರಿಗೆ ಒಂದು ಸಂದೇಶ ಬಂತು.

ದೆಹಲಿ ಪೊಲೀಸರಿಗೆ ಗುಪ್ತ ದಳ ನೀಡಿದ ಸಂದೇಶ ಏನು?
ಪೊಲೀಸರು ತಕ್ಷಣ ಹೈಅಲರ್ಟ್ ಆಗಿದ್ದು ಯಾಕೆ?

‘ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಕಿಸ್ತಾನದ ಐಎಸ್ಐ ಸಂಘಟನೆ ವಿಧ್ವಂಸಕ ಕೃತ್ಯ ನಡೆಸಲು ಸಂಚು ನಡೆಸಿದೆ’. ಇದುವೇ ಕೇಂದ್ರ ಗುಪ್ತದಳದಿಂದ ದೆಹಲಿ ಪೊಲೀಸರಿಗೆ ತಲುಪಿದ ಮಾಹಿತಿ. ಮಾಹಿತಿ ಸಿಕ್ಕ ತಕ್ಷಣವೇ ದೆಹಲಿ ಪೊಲೀಸರು ಅಲರ್ಟ್ ಆಗಿ ಬಿಟ್ರು. ಈ ಮೊದಲು ಜನವರಿ 26 ರಂದು ರೈತರ ದಂಗೆ ತಡೆಯುವಲ್ಲಿ ದೆಹಲಿ ಪೊಲೀಸರು ವಿಫಲವಾಗಿದ್ದು ಭಾರೀ ಟೀಕೆಗೆ ಕಾರಣವಾಗಿತ್ತು. ಈಗ ಮತ್ತೆ ಅಂತಹ ಕಪ್ಪು ಚುಕ್ಕೆಯನ್ನು ಅಂಟಿಸಿಕೊಳ್ಳಲು ದೆಹಲಿ ಪೊಲೀಸರು ಸಿದ್ಧ ಇರಲಿಲ್ಲ.

ತಕ್ಷಣವೇ ದೆಹಲಿ ಪೊಲೀಸರು ಕೈಗೊಂಡ ಕ್ರಮ ಏನು?
ಏನಾಗುತ್ತಿದೆ ಅಂತಾ ಗಾಬರಿಯಾದ ಜನ?

ಕೇಂದ್ರ ಗುಪ್ತದಳದಿಂದ ಸಂದೇಶ ಬರುತ್ತಿದ್ದಂತೆ ವಿಶ್ವವಿದ್ಯಾಲಯ, ವಿಧಾನಸಭಾ ಮೆಟ್ರೋ ರೈಲು ನಿಲ್ದಾಣ ಸೇವೆಯನ್ನು ತಾತ್ಕಾಲಿಕವಾಗಿ ತಡೆಹಿಡಿದರು. ಮಧ್ಯಾಹ್ನ 2 ಗಂಟೆಯವರೆಗೂ ಅವಕಾಶ ನೀಡಲಿಲ್ಲ. ದೆಹಲಿಯ ಗಲ್ಲಿಗಲ್ಲಿಯಲ್ಲಿಯೂ ಪೊಲೀಸರು ಹದ್ದಿನ ಕಣ್ಣು ಇಟ್ರು. ಅನುಮಾನಾಸ್ಪದ ವ್ಯಕ್ತಿಗಳನ್ನು ತಪಾಸಣೆ ನಡೆಸುತ್ತಿದ್ರು. ಏಕಾಏಕಿ ಪೊಲೀಸರ ಬಿಗಿ ಕ್ರಮ ನೋಡಿ ಜನ ಒಂದು ಕ್ಷಣ ಗಾಬರಿಯಾಗಿ ಬಿಟ್ರು. ಏನಾದ್ರು ಆಯ್ತಾ ಅಂತ ಅನುಮಾನ ಪಟ್ರು.

ದೆಹಲಿ, ಗುರುಗಾಂವ್​​ ಗಡಿಯಲ್ಲಿ ಭಾರೀ ಟ್ರಾಫಿಕ್
ಪೊಲೀಸರಿಂದ ಎಲ್ಲಾ ವಾಹನ ತಪಾಸಣೆ

ಗುಪ್ತದಳದ ಸಂದೇಶದಲ್ಲಿ ಹಿನ್ನೆಲೆಯಲ್ಲಿ ಪೊಲೀಸರು ಭಾರೀ ಕಟ್ಟೆಚ್ಚರಕ್ಕೆ ಮುಂದಾದ್ರು. ದೆಹಲಿ ಪ್ರವೇಶಿಸುವ ಪ್ರತಿಯೊಂದು ವಾಹನವನ್ನು ಚೆಕ್ಮಾಡಿಯೇ ಬಿಡುತ್ತಿದ್ರು. ಅನುಮಾನಾಸ್ಪದ ವಾಹನಗಳನ್ನು ವಶಪಡಿಸಿಕೊಳ್ಳುತ್ತಾ ಇದ್ರು. ಅದರಲ್ಲಿಯೂ ದೆಹಲಿ ಗುರುಗಾಂವ್ ಗಡಿಯಲ್ಲಿ ಸುಮಾರು 1 ಕಿಲೋ ಮೀಟರ್​ನಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್​ನಲ್ಲಿ ಸಿಕ್ಕ ವಾಹನ ಸವಾರರು ಅತ್ತ ದೆಹಲಿ ತಲುಪಲಾಗದೆ, ಇತ್ತ ವಾಪಸ್ ಹೋಗಲಾಗದೇ ಹೈರಾಣವಾಗಿ ಹೋದ್ರು.

ಪಾಕಿಸ್ತಾನಕ್ಕೆ ಏಕೆ ರೈತ ಹೋರಾಟದ ಮೇಲೆ ಕಣ್ಣು?
ಭಾರತದಲ್ಲಿ ದಂಗೆ ಆದ್ರೆ ಪಾಕ್, ಚೀನಾಕ್ಕೆ ಖುಷಿ

ನೂತನ ಕೃಷಿ ಕಾಯ್ದೆ ರದ್ದು ಮಾಡಬೇಕು ಅನ್ನುವುದು ರೈತ ಹೋರಾಟಗಾರರ ಖಡಕ್ ಬೇಡಿಕೆ. ಆದ್ರೆ, ಕಾಯ್ದೆ ರದ್ದು ಮಾಡಲ್ಲ ತಿದ್ದುಪಡಿ ಮಾಡ್ತೀವಿ ಅನ್ನೋದು ಕೇಂದ್ರ ಸರ್ಕಾರದ ಸಂದೇಶ. ಈ ಹಗ್ಗಾಜಗ್ಗಾಟದಲ್ಲಿ ಮಜಾ ತಗೋತಿರುವುದು ಪಾಕಿಸ್ತಾನ ಮತ್ತು ಚೀನಾ ರಾಷ್ಟ್ರಗಳು. ಹೌದು, ರೈತರ ಹೋರಾಟವೇ ವಿರೋಧಿಗಳಿಗೆ ಪ್ರಬಲ ಅಸ್ತ್ರವಾಗಿ ಬಿಟ್ಟಿದೆ. ಹೋರಾಟಕ್ಕೆ ಒಳಗೊಳಗೆ ತುಪ್ಪ ಸುರಿಯುವ ಕೆಲಸವನ್ನು ಚೀನಾ, ಪಾಕಿಸ್ತಾನ ಸೇರಿದಂತೆ ಅಂತಾರಾಷ್ಟ್ರೀಯ ಕೆಲವು ಶಕ್ತಿಗಳು ಮಾಡುತ್ತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತನ್ನದೇ ಆದ ಪ್ರಭಾವ ಬೆಳೆಸಿಕೊಂಡಿದೆ. ಇದು ಸಹಜವಾಗಿ ಸಾಂಪ್ರದಾಯಿಕ ವಿರೋಧಿಗಳಾದ ಚೀನಾ, ಪಾಕ್​ಗೆ ನೆಮ್ಮದಿಗೆ ಹೆಂಕಿ ಹಚ್ಚಿ ಬಿಟ್ಟಿದೆ. ಹೀಗಾಗಿ ಸಮಯ ಸಿಕ್ಕಾಗೆಲ್ಲ ಆ ಎರಡು ರಾಷ್ಟ್ರಗಳು ಚಳಿ ಕಾಯಿಸಿಕೊಳ್ಳುತ್ತಿವೆ.

26 ರಂದು ನಡೆದ ದಂಗೆಯಲ್ಲೂ ಪಾಕ್ ಹೆಸರು ಕೇಳಿಬಂದಿತ್ತು
ದೆಹಲಿಗೆ ಟ್ರ್ಯಾಕ್ಟರ್‌ನಲ್ಲಿ ಏಕಾಏಕಿ ನುಗ್ಗಿದ ಪ್ರತಿಭಟನಾಕಾರರು

ಹೌದು, ಅಂದು ಇಡೀ ರಾಷ್ಟ್ರವೇ ಗಣರಾಜ್ಯೋತ್ಸವ ಆಚರಿಸುತ್ತಿತ್ತು. ಆದ್ರೆ, ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ಱಲಿಗೆ ಶರತ್ತು ಬದ್ಧ ಅನುಮತಿ ನೀಡಲಾಗಿತ್ತು. ಆದ್ರೆ, ಭಾರೀ ಪ್ರಮಾಣದಲ್ಲಿದ್ದ ರೈತರು ಟ್ರ್ಯಾಕ್ಟರ್​ ಚಲಾಯಿಸುತ್ತ ಕೆಂಪುಕೋಟೆಯತ್ತ ನುಗ್ಗಿದ್ದಾರೆ. ಸಿಕ್ಕ ಸಿಕ್ಕ ಸಾರ್ವಜನಿಕ ಆಸ್ತಿ ನಾಶಮಾಡಿದ್ದಾರೆ. ದಂಗೆಯ ಬಗ್ಗೆ ಯಾವುದೇ ಪೂರ್ವ ಮಾಹಿತಿ ಇಲ್ಲದ ಪೊಲೀಸರು ಅಸಹಾಯಕರಾಗಿ ಬಿಟ್ಟಿದ್ರು. ಅಂದು ದೆಹಲಿಯಲ್ಲಿ ನಡೆದ ದಂಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ರೈತರ ನಡೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.

 

ಕೇಂದ್ರ, ರೈತರ ನಡುವಿನ ಹಗ್ಗಜಗ್ಗಾಟ ಏಕೆ?
ಯಾವಾಗ ಬಗೆ ಹರಿಯುತ್ತೆ ಈ ಸಮಸ್ಯೆ?

ರೈತರ ಪ್ರತಿಭಟನೆಗೆ ಈಗಾಗಲೇ ಏಳು ತಿಂಗಳು. ರೈತರ ಆಗ್ರಹ ಅಂದ್ರೆ ಹೊಸ ಕೃಷಿ ಕಾಯ್ದೆಯನ್ನೇ ರದ್ದು ಮಾಡಬೇಕು ಅನ್ನೋದು. ಆದ್ರೆ, ಕೇಂದ್ರ ಹೇಳೋದು ರದ್ದು ಸಾಧ್ಯ ಇಲ್ಲ, ಲೋಪದೋಷವನ್ನು ತಿದ್ದುಪಡಿ ಮಾಡುತ್ತೇವೆ ಅಂಥ. ಇದೇ ವಿಚಾರದಲ್ಲಿ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಹಲವು ಸುತ್ತಿನ ಮಾತುಕತೆಯೂ ನಡೆದಿದೆ. ಆದ್ರೆ, ಅದ್ಯಾವುದು ಫಲಪ್ರದವಾಗಿಲ್ಲ. ಎಲ್ಲಿಯವರೆಗೆ ತಮ್ಮ ಬೇಡಿಕೆ ಈಡೇರಿಸುವುದಿಲ್ಲವೋ ಅಲ್ಲಿಯವರೆಗೂ ತಾವು ಪ್ರತಿಭಟನೆಯಿಂದ ಹಿಂದೆ ಸರಿಯಲ್ಲ ಅಂತಾರೆ ರೈತರು. ಇತ್ತ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಕಾಯ್ದೆ ರದ್ದು ಇಲ್ಲ ಅನ್ನುತ್ತೆ.

ಕೇಂದ್ರ ಸರ್ಕಾರ ಹೇಳೋದು ಏನು?
ಕಾಯ್ದೆ ಬಗ್ಗೆ ರೈತರು ಹೇಳೋದು ಏನು?

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆ ಬಗ್ಗೆ ಕೇಂದ್ರ ಸರ್ಕಾರ ಮತ್ತು ರೈತರಲ್ಲಿ ಭಿನ್ನ ಅಭಿಪ್ರಾಯಗಳಿವೆ. ಕಾಯ್ದೆಯ ಒಂದಂಶದಲ್ಲಿ ಸರ್ಕಾರ ಹೇಳುವುದು ರೈತನಿಗೆ ತಾನು ಬೆಳೆದ ಬೆಳೆಯನ್ನು ತನಗೆ ಇಷ್ಟಬಂದ ವ್ಯಕ್ತಿಗೆ ಮಾರುವ ಹಕ್ಕು ಸಿಗಲಿದೆ. ಇದರಿಂದ ರೈತರಿಗೆ ಅನುಕೂಲ ಆಗುತ್ತೆ. ಮಧ್ಯವರ್ತಿಗಳ ಪ್ರವೇಶಕ್ಕೆ ತಡೆಯಾಗುತ್ತೆ ಅಂತ. ಆದ್ರೆ, ರೈತರು ಹೇಳುವುದು ಎಪಿಎಂಸಿಗಳಲ್ಲಿ ಖಾಸಗಿ ವ್ಯಾಪಾರಕ್ಕೆ ಅನುಮತಿ ನೀಡಿದರೆ ಮುಂದೆ ಅಪಾಯವಾಗುತ್ತೆ. ಖಾಸಗಿ ವ್ಯಕ್ತಿಗಳು ಹೆಚ್ಚಿನ ದರಕ್ಕೆ ವ್ಯಾಪಾರ ಮಾಡುತ್ತಾರೆ. ಮುಂದೊಂದು ದಿನ ಎಪಿಎಂಸಿ ಮುಚ್ಚಬೇಕಾಗುತ್ತೆ. ಆ ನಂತರ ಖಾಸಗಿ ವ್ಯಾಪಾರಸ್ಥರು ಮಾಡಿದ್ದೇ ದರವಾಗಿಬಿಡುತ್ತೆ. ಹೀಗಾಗಿ ಕಾಯ್ದೆ ಬೇಡ ಬೇಡ ಅನ್ನುತ್ತಾರೆ ರೈತರು.

ಭಯೋತ್ಪಾದಕ ಸಂಘಟನೆಗಳು ವಿಧ್ವಂಸಕ ಕೃತ್ಯಕ್ಕೆ ಹೊಂಚು ಹಾಕುತ್ತಲೇ ಇರುತ್ತವೆ. ಗುಪ್ತದಳಗಳು ಸ್ಟ್ರಾಂಗ್ಆಗಿ ಇದ್ರೆ ಮಾತ್ರ ಸಂಭವನೀಯ ಕೃತ್ಯ ತಡೆಯಲು ಸಾಧ್ಯ.

The post ರಾಷ್ಟ್ರ ರಾಜಧಾನಿಯನ್ನೇ ಬೆಚ್ಚಿ ಬೀಳಿಸಿಬಿಡ್ತು ಗುಪ್ತಚರ ಇಲಾಖೆಯ ಆ ಒಂದು ಸಂದೇಶ appeared first on News First Kannada.

Source: newsfirstlive.com

Source link