ನವದೆಹಲಿ: ಭಾರತದ ರಾಜಧಾನಿ ದೆಹಲಿಯಲ್ಲಿ ಇಂದು ಮಧ್ಯಾಹ್ನ ಲಘು ಭೂಕಂಪನ ಸಂಭವಿಸಿದೆ. ಕಂಪನದ ತೀವ್ರತೆ ರಿಕ್ಟರ್ ಮಾಪಕನದಲ್ಲಿ 2.1ರಷ್ಟು ದಾಖಲಾಗಿದ್ದು ಜನ ಆತಂಕಕ್ಕೀಡಾಗಿದ್ದಾರೆ.

ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ(ಎನ್‍ಸಿಎಸ್) ತಿಳಿಸಿರುವ ಪ್ರಕಾರ ರಿಕ್ಟರ್ ಮಾಪಕದಲ್ಲಿ 2.1 ತೀವ್ರತೆಯ ಭೂಕಂಪ ದೆಹಲಿಯ ಪಂಜಾಬಿ ಬಾಗ್ ಬಳಿ ಸಂಭವಿಸಿದ್ದು, ಭೂಮಿಯ ಮೇಲ್ಮೈಯಿಂದ 7 ಕಿಲೋಮೀಟರ್ ಅಂತರದಲ್ಲಿ ಭೂಮಿ ಕಂಪಿಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕಾಶ್ಮೀರದ ನಾಯಕರ ಜೊತೆ ಮೋದಿ ಸಭೆಗೆ ಪಾಕ್ ಕಿರಿಕ್

ಭೂಕಂಪನದಿಂದ ಜೀವ ಅಥವಾ ಆಸ್ತಿ, ಪಾಸ್ತಿಗೆ ಹಾನಿ ಸಂಭವಿಸಿರುವ ಬಗ್ಗೆ ಯಾವುದೇ ರೀತಿಯ ವರದಿಯಾಗಿಲ್ಲ. ದೆಹಲಿ ಅಲ್ಲದೆ ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ ಮತ್ತು ಮಣಿಪುರದಲ್ಲಿಯೂ ಇಂದು ಬೆಳಗಿನ ಜಾವ ಭೂಕಂಪ ಸಂಭವಿಸಿದೆ. ಎನ್‍ಸಿಎಸ್ ವರದಿಯ ಪ್ರಕಾರ ಮೊದಲ ಭೂಕಂಪ ಅರುಣಾಚಲ ಪ್ರದೇಶದ ಪಂಗಿನ್‍ನಲ್ಲಿ ಮಧ್ಯರಾತ್ರಿ ಬಳಿಕ 1 ಗಂಟೆ ಸುಮಾರಿಗೆ ಸಂಭವಿಸಿದೆ. ಅದಾದ ಬಳಿಕ ಮಣಿಪುರದ ಉಕ್ರುಲ್ ಜಿಲ್ಲೆಯ ಶಿರೂಯಿ ಗ್ರಾಮದಲ್ಲಿ 3.6 ತೀವ್ರತೆಯ ಭೂಕಂಪ ಸಂಭವಿಸಿತು. ಮೊದಲ ಭೂಕಂಪ 20 ಕಿಲೋಮೀಟರ್ ಆಳದಲ್ಲಿ ಮತ್ತು ಎರಡನೇ ಭೂಕಂಪ 30 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಮಾಹಿತಿ ನೀಡಿದೆ.

ದೆಹಲಿಯಲ್ಲಿ ಈ ಹಿಂದೆ 1956ರ ಅಕ್ಟೋಬರ್ 10ರಂದು ಬುಲಂದ್ ಶಹರ್‍ನಲ್ಲಿ 6.7ರ ತೀವ್ರತೆಯ ಭೂಕಂಪ ಸಂಭವಿಸಿತ್ತು. ಆ ಬಳಿಕ 1966ರ ಆಗಸ್ಟ್ 15 ರಂದು ಮೊರ್ಡಾಬಾದ್‍ನಲ್ಲಿ 5.8ರ ತೀವ್ರತೆಯ ಭೂಕಂಪನ ದಾಖಲಾಗಿತ್ತು.

The post ರಾಷ್ಟ್ರ ರಾಜಧಾನಿಯಲ್ಲಿ ಲಘು ಭೂಕಂಪ appeared first on Public TV.

Source: publictv.in

Source link