ನವದೆಹಲಿ: ಸತತ ಮೂರನೇ ವಾರದಲ್ಲಿಯೂ ದೆಹಲಿ ಮತ್ತು ಪಕ್ಕದ ನಗರಗಳಲ್ಲಿನ ವಾಯುಮಾಲಿನ್ಯ ಸಮಸ್ಯೆ ಕುರಿತು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಗೆ ನಡೆದಿದೆ. ಈ ಕುರಿತಾಗಿ ಸುಪ್ರೀಂ ಕೊರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಛೀಮಾರಿ ಹಾಕಿದೆ.
ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಹತ್ತಿರದ ನಗರಗಳು ವಿಷಕಾರಿ ಗಾಳಿಯಿಂದ ತತ್ತರಿಸಿ ಹೋಗಿತ್ತು. ಭಾರೀ ವಾಯುಮಾಲಿನ್ಯದ ರಾಜಧಾನಿಯಾಗಿ ದೆಹಲಿ ಮಾರ್ಪಾಡಾಗಿತ್ತು. ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯದ ಮಟ್ಟ ಕೊಂಚ ಸುಧಾರಿಸಿದೆ. ಈ ಮಧ್ಯೆ ಪೂರ್ವಭಾವಿಯಾಗಿ ಕ್ರಮ ತೆಗೆದುಕೊಳ್ಳಬೇಕು ಅಂತಾ ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮತ್ತೆ ಚಾಟಿ ಬೀಸಿದೆ.
ಸರ್ಕಾರಕ್ಕೆ ಸುಪ್ರೀಂ ಚಾಟಿ
ಸದ್ಯ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ “ಅತ್ಯಂತ ಕಳಪೆ” ವಿಭಾಗದಲ್ಲಿದೆ. ಪಟಾಕಿಗಳ ಮೇಲಿನ ನಿಷೇಧವನ್ನ ವ್ಯಾಪಕವಾಗಿ ಉಲ್ಲಂಘಿಸಲಾಗಿದೆ. ಆದ್ರಿಂದಲೇ ಈ ತಿಂಗಳ ಆರಂಭದಲ್ಲಿ ವಾಯು ಗುಣಮಟ್ಟ ಹದಗೆಟ್ಟಿದೆ. ಇನ್ನಾದರೂ ದೆಹಲಿಗೆ ಸ್ವೀಕಾರಾರ್ಹ AQI ಮಟ್ಟವನ್ನ ವ್ಯಾಖ್ಯಾನಿಸಬೇಕು ಅಂತಾ ದೆಹಲಿ ಮತ್ತು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಅಗತ್ಯ ಸೇವೆಗಳಲ್ಲಿ ತೊಡಗಿರುವವರನ್ನು ಹೊರತುಪಡಿಸಿ ಸಿಎನ್ಜಿ ಮತ್ತು ಎಲೆಕ್ಟ್ರಿಕಲ್ ವಾಹನಗಳಿಗೆ ಮಾತ್ರ ನವೆಂಬರ್ 27 ರಿಂದ ಡಿಸೆಂಬರ್ 3 ರವರೆಗೆ ದೆಹಲಿ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಅಲ್ಲದೆ ಇನ್ನುಳಿದ ಇತರೆ ವಾಹನಗಳಿಗೆ ಪ್ರವೇಶ ನಿಷೇಧಿಸಲಾಗಿದೆ.
ಹೆಚ್ಚಿದ ಮಾಲಿನ್ಯದ ಮಟ್ಟದಿಂದಾಗಿ ಶಾಲೆಗಳು, ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳಲ್ಲಿ ಆಫ್ಲೈನ್ ತರಗತಿಗಳನ್ನ ಸ್ಥಗಿತಗೊಳಿಸಲಾಗಿತ್ತು. ಸದ್ಯ ಕೊಂಚ ಸುಧಾರಣೆಯಾಗಿದ್ದು, ನವೆಂಬರ್ 29 ರಿಂದ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು ಪುನರಾರಂಭವಾಗಲಿದೆ. ಆದ್ರೆ, ಅದ್ಯಾವಾಗ ರಾಷ್ಟ್ರರಾಜಧಾನಿ ಜನರಿಗೆ ಉತ್ತಮ ಗಾಳಿಯ ಲಭ್ಯತೆ ಉಂಟಾಗುತ್ತೊ ಅನ್ನೊ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.