ರಾಹುಲ್ ಗಾಂಧಿಗೆ ಸಮನ್ಸ್: ಕಾಂಗ್ರೆಸ್ ಪ್ರತಿಭಟನೆ, ಹಲವು ಮಂದಿ ಪೊಲೀಸ್ ವಶಕ್ಕೆ | National Herald Case: Congress leaders detained during protests against ED summons to Rahul Gandhi


ನ್ಯಾಷನಲ್ ಹೆರಾಲ್ಡ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದ್ದು ಈ ಕ್ರಮ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದಾರೆ.

ನವದೆಹಲಿ: ನ್ಯಾಷನಲ್ ಹೆರಾಲ್ಡ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದ್ದು ಈ ಕ್ರಮ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದಾರೆ. ಪ್ರತಿಭಟನೆ ಕಾವು ಹೆಚ್ಚಾದಂತೆ ಪೊಲೀಸರು ಹಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನಾಯಕರಿಗೆ ಬೆಂಬಲ ಸೂಚಿಸಿ ಪ್ರತಿಭಟನೆ ಶುರುಮಾಡಿದ್ದಾರೆ.

ಪ್ರತಿಭಟನೆ ವೇಳೆ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬ್ರಿಟಿಷರಿಂದ ಕಾಂಗ್ರೆಸ್​ನ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಾಗಿಲ್ಲ, ಈಗ ಬಿಜೆಪಿಯು ಅಂಥದ್ದೇ ಕೆಲಸವನ್ನು ಮಾಡುತ್ತಿದೆ ಆದರೆ ಯಾವುದಕ್ಕೂ ನಾವು ಕುಗ್ಗುವುದಿಲ್ಲ, ಯಾರ ಬೆದರಿಕೆಗೂ ಹೆದರುವುದಿಲ್ಲ, ರಾಹುಲ್ ನೇತೃತ್ವದಲ್ಲಿ ಸತ್ಯ ಕಾ ಸಂಗ್ರಾಮ್ ಮುಂದುವರೆಯಲಿದೆ ಎಂದು ಹೇಳಿದರು.

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಈ ಮೊದಲು ಜೂ. 8ರಂದು ಹಾಗೂ ಅವರ ಪುತ್ರ ಸಂಸದ ರಾಹುಲ್ ಗಾಂಧಿಗೆ ಜೂ. 13ರಂದು ಫೆಡರಲ್ ಏಜೆನ್ಸಿಯ ಎದುರು ವಿಚಾರಣೆಗೆ ಬರುವಂತೆ ಸಮನ್ಸ್ ನೀಡಿತ್ತು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಇಡಿ ಎದುರು ವಿಚಾರಣೆಗೆ ಹಾಜರಾಗಲಿದ್ದಾರೆ.

ದೆಹಲಿ ವ್ಯಾಪ್ತಿಯಲ್ಲಿ ರ‍್ಯಾಲಿಗೆ ಅನುಮತಿ ನೀಡಲಾಗುವುದಿಲ್ಲ, ನಾವು ಕೋಮು ಪರಿಸ್ಥಿತಿ ಹಾಗೀ ಕಾನೂನು ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ನಿರ್ವಹಿಸಬೇಕಿದೆ ಎಂದು ಉಪ ಪೊಲೀಸ್ ಆಯುಕ್ತ ಅಮೃತ ಗುಗುಲೋತ್ ಮಾಹಿತಿ ನೀಡಿದ್ದಾರೆ.

ಏನಿದು ನ್ಯಾಷನಲ್ ಹೆರಾಲ್ಡ್ ಪ್ರಕರಣ
ನ್ಯಾಷನಲ್ ಹೆರಾಲ್ಡ್ ಪ್ರಕರಣವು ಜವಾಹರಲಾಲ್ ನೆಹರು ಸ್ಥಾಪಿಸಿದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಕುರಿತಾಗಿದೆ. 1938 ನೆಹರೂ ಅವರು ನ್ಯಾಷನಲ್ ಹೆರಾಲ್ಡ್​ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಸ್ಥಾಪನೆ ಮಾಡಿದರು. ಅಲ್ಲಿಂದ ನ್ಯಾಷನಲ್ ಹೆರಾಲ್ಡ್ ಜರ್ನಿ ಶುರುವಾಗಿತ್ತು. ನ್ಯಾಷನಲ್ ಹೆರಾಲ್ಡ್ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ 5,000 ಸ್ವಾತಂತ್ರ್ಯ ಹೋರಾಟಗಾರರನ್ನು ತನ್ನ ಷೇರುದಾರರನ್ನಾಗಿ ಮಾಡಿತು.

ಮಾತೃ ಸಂಸ್ಥೆಯು ಸಾಲದಲ್ಲಿದ್ದ ಕಾರಣ 2008ರಲ್ಲಿ ಪತ್ರಿಕೆಯನ್ನು ಮುಚ್ಚಲಾಯಿತು. ಬಳಿಕ 2016ರಿಂದ ಮ್ತತೊಮ್ಮೆ ಮುದ್ರಣ ಪ್ರಾರಂಭಿಸಿತು. ಈ ಹಿಂದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ 90.25 ಕೋಟಿ ಬಡ್ಡಿ ರಹಿತ ಸಾಲವನ್ನು ತೆಗೆದುಕೊಂಡಿತ್ತು. ಪ್ರಸ್ತುತ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಒಡೆತನದಲ್ಲಿದೆ.

ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published.