ರಾಹುಲ್ ಗಾಂಧಿ ಕೇಳಿದ್ದರಲ್ಲಿ ತಪ್ಪೇನಿಲ್ಲ, ಸರ್ಜಿಕಲ್ ದಾಳಿಯ ಸಾಕ್ಷಿ ಕೊಡಿ; ತೆಲಂಗಾಣ ಸಿಎಂ ಕೆಸಿಆರ್ ಒತ್ತಾಯ | Surgical Strike Nothing wrong with Rahul Gandhi demanding proof of surgical strikes I also want Telangana CM KCR


ರಾಹುಲ್ ಗಾಂಧಿ ಕೇಳಿದ್ದರಲ್ಲಿ ತಪ್ಪೇನಿಲ್ಲ, ಸರ್ಜಿಕಲ್ ದಾಳಿಯ ಸಾಕ್ಷಿ ಕೊಡಿ; ತೆಲಂಗಾಣ ಸಿಎಂ ಕೆಸಿಆರ್ ಒತ್ತಾಯ

ತೆಲಂಗಾಣ ಸಿಎಂ ಕೆಸಿಆರ್​

ಹೈದರಾಬಾದ್: ಪುಲ್ವಾಮಾ ದಾಳಿಯ (Pulwama Attack) ಮೂರನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (KCR​) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸರ್ಜಿಕಲ್ ಸ್ಟ್ರೈಕ್ (Surgical Strike) ಬಗ್ಗೆ ಸಾಕ್ಷಿ ಕೇಳುವುದರಲ್ಲಿ ತಪ್ಪಿಲ್ಲ ಎಂದು ಹೇಳಿದ್ದಾರೆ. ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಮುಖ್ಯಸ್ಥ ಕೆಸಿಆರ್,​ ರಾಹುಲ್ ಗಾಂಧಿ ಮಾತ್ರವಲ್ಲ ನಾನು ಕೂಡ ಸರ್ಜಿಕಲ್ ದಾಳಿಗಳ ಪುರಾವೆಯನ್ನು ನೋಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪುರಾವೆ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಅದರಲ್ಲಿ ಏನು ತಪ್ಪಿದೆ? ನಾನು ಕೂಡ ಸರ್ಜಿಕಲ್ ದಾಳಿಯ ಬಗ್ಗೆ ಸಾಕ್ಷಿ ಕೇಳುತ್ತಿದ್ದೇನೆ. ಭಾರತ ಸರ್ಕಾರ ಸಾಕ್ಷಿ ತೋರಿಸಲಿ ಎಂದು ತೆಲಂಗಾಣ ಸಿಎಂ ಹೇಳಿದ್ದಾರೆ. ಬಿಜೆಪಿ ಸುಳ್ಳು ಅಜೆಂಡಾವನ್ನು ಪ್ರಚಾರ ಮಾಡುತ್ತಿದೆ. ಸರ್ಜಿಕಲ್ ದಾಳಿಯನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಭಾರತೀಯ ಸೇನೆಯು ಗಡಿಯಲ್ಲಿ ಹೋರಾಡುತ್ತಿದೆ, ನಮ್ಮ ದೇಶಕ್ಕಾಗಿ ಗಡಿಯಲ್ಲಿ ಸೇನಾ ಸಿಬ್ಬಂದಿ ಸಾಯುತ್ತಿದ್ದಾರೆ. ಸರ್ಜಿಕಲ್ ದಾಳಿ ನಡೆದಿದ್ದರೆ ಅದರ ಕೀರ್ತಿ ಭಾರತೀಯ ಸೇನಾ ಸಿಬ್ಬಂದಿಗೆ ಸಲ್ಲಬೇಕೇ ಹೊರತು ಬಿಜೆಪಿಗಲ್ಲ ಎಂದು ಅವರು ಟೀಕಿಸಿದ್ದಾರೆ.

ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪುರಾವೆ ಕೇಳಿದ್ದಕ್ಕಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಹಿನ್ನೆಲೆಯಲ್ಲಿ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ರಾಹುಲ್ ಗಾಂಧಿ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.

ಬಿಜೆಪಿ ಪಕ್ಷವು ಚುನಾವಣೆಗಳನ್ನು ಗೆಲ್ಲಲು ಧರ್ಮ ಮತ್ತು ಸೇನೆಯ ಉಲ್ಲೇಖಗಳನ್ನು ಬಳಸುತ್ತಿದೆ. 2016ರಲ್ಲಿ ಉರಿ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಕೀರ್ತಿ ಸೇನೆಗೆ ಸಲ್ಲುತ್ತದೆಯೇ ಹೊರತು ಬಿಜೆಪಿಗಲ್ಲ ಎಂದು ಕೆಸಿಆರ್ ಹೇಳಿದ್ದಾರೆ. ಹೈದರಾಬಾದ್‌ನ ಪ್ರಗತಿ ಭವನದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಚಂದ್ರಶೇಖರ ರಾವ್, ಚುನಾವಣೆ ನಡೆಯುವ ರಾಜ್ಯಗಳಲ್ಲಿ ಮತದಾರರನ್ನು ತನ್ನ ಪರವಾಗಿ ಸಜ್ಜುಗೊಳಿಸಲು ಬಿಜೆಪಿ ಸರ್ಜಿಕಲ್ ಸ್ಟ್ರೈಕ್‌ ಹೆಸರನ್ನು ಬಳಸಿಕೊಳ್ಳುತ್ತಿದೆ. ಸರ್ಜಿಕಲ್ ಸ್ಟ್ರೈಕ್ ಕುರಿತು ಪುರಾವೆ ಕೇಳುವುದರಲ್ಲಿ ತಪ್ಪೇನಿಲ್ಲ. ನಾನು ಕೂಡ ಈಗ ಸಾಕ್ಷಿಯನ್ನು ಕೇಳುತ್ತಿದ್ದೇನೆ. ಬಿಜೆಪಿಯು ಸರ್ಜಿಕಲ್ ದಾಳಿಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ನಾವು ಅದನ್ನು ಖಂಡಿತವಾಗಿ ಪ್ರಶ್ನಿಸುತ್ತೇವೆ ಎಂದು ಕೆಸಿಆರ್​ ಟೀಕಿಸಿದ್ದಾರೆ.

2016ರ ಫೆಬ್ರವರಿಯಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು ದಕ್ಷಿಣ ಕಾಶ್ಮೀರದಲ್ಲಿ ಸಿಪಿಆರ್‌ಪಿ ಬೆಂಗಾವಲು ಪಡೆಗಳ ಮೇಲೆ ದಾಳಿ ಮಾಡಿ 40 ಸೇನಾ ಸಿಬ್ಬಂದಿಗಳ ಸಾವಿಗೆ ಕಾರಣರಾಗಿದ್ದರು. ಈ ಭೀಕರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ನರೇಂದ್ರ ಮೋದಿ ಸರ್ಕಾರವು 2019ರ ಫೆಬ್ರವರಿ 26ರಂದು ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಭಯೋತ್ಪಾದಕರ ಶಿಬಿರಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಲು ಭಾರತೀಯ ವಾಯುಪಡೆಗೆ (IAF) ಹಸಿರು ನಿಶಾನೆ ತೋರಿತು.

ಇದಕ್ಕೂ ಮುನ್ನ 2016ರಲ್ಲಿ ಭಾರತೀಯ ಸೇನೆಯು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಮೂಲಕ ಸರ್ಜಿಕಲ್ ಸ್ಟ್ರೈಕ್‌ಗಳನ್ನು ನಡೆಸಿ ಭಯೋತ್ಪಾದನಾ ಲಾಂಚ್‌ಪ್ಯಾಡ್‌ಗಳನ್ನು ಧ್ವಂಸಗೊಳಿಸಿತ್ತು. ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ 18 ಭಾರತೀಯ ಯೋಧರನ್ನು ಬಲಿತೆಗೆದುಕೊಂಡ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಈ ಸರ್ಜಿಕಲ್ ಸ್ಟ್ರೈಕ್ ನಡೆಸಲಾಯಿತು.

ಸರ್ಜಿಕಲ್ ಸ್ಟ್ರೈಕ್ ನಂತರ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಸರ್ಜಿಕಲ್ ದಾಳಿಯ ಕಾರ್ಯಾಚರಣೆಯ ಪುರಾವೆಯನ್ನು ಕೇಳಿದ್ದವು. ಇದಕ್ಕೆ ಬಿಜೆಪಿ ಭಾರೀ ವಿರೋಧ ವ್ಯಕ್ತಪಡಿಸಿತ್ತು.

TV9 Kannada


Leave a Reply

Your email address will not be published.