ಇದು ಯಾವುದೋ ಸಿನಿಮಾ ಸ್ಟೋರಿ ಇದ್ದಂಗೆ ಇದ್ರು.. ರೀಲ್ ಸ್ಟೋರಿ ಅಲ್ಲ ಬದಲಿಗೆ ರಿಯಲ್ ಸ್ಟೋರಿ. ಹೌದು ಒಡಿಶಾದ ಮಹಿಳೆಯೊಬ್ಬರು ತನಗೆ ಬರೋಬ್ಬರಿ 25 ವರ್ಷ ಸೇವೆ ಮಾಡಿದ ಆಟೋ ಡ್ರೈವರ್ ಸೇವೆ ಮತ್ತು ಪ್ರಾಮಾಣಿಕತೆಯನ್ನು ಮೆಚ್ಚಿ ಬರೋಬ್ಬರಿ 1 ಕೋಟಿ ರೂಪಾಯಿ ಮೌಲ್ಯದ ಮೂರು ಅಂತಸ್ತಿನ ಕಟ್ಟಡ ಹಾಗೂ ಚಿನ್ನಾಭರಣವನ್ನು ದಾನವಾಗಿ ನೀಡಿದ್ದಾರೆ.
ಅಷ್ಟಕ್ಕೂ ಏನಿದು ಘಟನೆ?
ಒಡಿಶಾದ ಕಟಕ್ನಲ್ಲಿ ಈ ಘಟನೆ ನಡೆದಿದ್ದು, 63 ವರ್ಷದ ಮಿನಾತಿ ಪಟ್ನಾಯಿಕ್ ಅನ್ನೋ ಮಹಿಳೆ ಕಳೆದ 25 ವರ್ಷಗಳಿಂದ 50 ವರ್ಷದ ಬುದ್ಧಾ ಸಮಾಲ್ ಅನ್ನೋ ರಿಕ್ಷಾಪುಲ್ಲರ್ಗೆ 1 ಕೋಟಿ ಮೌಲ್ಯದ ಮೂರು ಅಂತಸ್ತಿನ ಕಟ್ಟಡ ಹಾಗೂ ಚಿನ್ನಾಭರಣ ನೀಡಿದ್ದಾರೆ. ಕಳೆದ 25 ವರ್ಷಗಳಿಂದ ಬುದ್ಧಾ ಸಮಾಲ್, ಮಿನಾತಿ ಅವರನ್ನ ತಮ್ಮ ರಿಕ್ಷಾದಲ್ಲಿ ಕರೆದುಕೊಂಡು ಹೋಗುತ್ತಿದ್ದರಂತೆ. ಮಿನಾತಿ ಎಲ್ಲಿಗೆ ಹೋಗಬೇಕೆಂದರೂ ಬುದ್ಧಾ ಅವರು ಬಂದು ಮಿನಾತಿಯವರನ್ನ ತಮ್ಮ ರೀಕ್ಷಾದಲ್ಲಿ ಕರೆದುಕೊಂಡು ಹೋಗುತ್ತಿದ್ದರಂತೆ. ಸತತ ಇಷ್ಟು ವರ್ಷಗಳ ಕಾಲ ಅವರ ಸೇವೆ ಪಡೆದುಕೊಂಡಿದ್ದ ಮಿನಾತಿ, ಯಾರೂ ಊಹಿಸಲಾಗದಂಥ ಸಹಾಯವನ್ನ ಈಗ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಮಿನಾತಿ, ಬುದ್ಧಾ ಅವರು ನಮ್ಮ ಕುಟುಂಬಕ್ಕೆ ಸಾಕಷ್ಟು ಸಹಾಯ ಮಾಡಿದ್ದಾರೆ. ಅವರ ಸಹಾಯಕ್ಕೆ ನಮ್ಮ ಚಿಕ್ಕ ಕಾಣಿಕೆ ಅಷ್ಟೇ ಇದು ಅಂತಾ ಹೇಳಿದ್ದಾರೆ.
ಆತನ ಪ್ರಾಮಾಣಿಕತೆ ಮುಂದೆ ಈ ಆಸ್ತಿ ಏನೂ ಅಲ್ಲ
ಇಷ್ಟು ದೊಡ್ಡ ಮೊತ್ತ ಆಸ್ತಿ ನೀಡಿದ್ದೇಕೆ? ಅನ್ನೋ ಪ್ರಶ್ನೆಗೆ ಉತ್ತರಿಸುತ್ತಾ ಮಾತನಾಡಿದ ಮಿನಾತಿ, ನನ್ನ ಪತಿ ಕಳೆದ ವರ್ಷ ತಮ್ಮ 68ನೇ ವಯಸ್ಸಿನಲ್ಲಿ ಕ್ಯಾನ್ಸರ್ಗೆ ಬಲಿಯಾದರು. ದುರ್ದೈವಕ್ಕೆ ನನ್ನ ಮಗಳು ಈ ವರ್ಷದ ಜನವರಿಯಲ್ಲಿ ಹಾರ್ಟ್ ಅಟ್ಯಾಕ್ನಿಂದಾಗಿ ತನ್ನ 30ನೇ ವಯಸ್ಸಿನಲ್ಲಿಯೇ ಸಾವನ್ನಪ್ಪಿದಳು. ನಾನೂ ಕೂಡ ಹಾರ್ಟ್ ಪೇಷಂಟ್, ಹೈ ಬಿಪಿ ಕೂಡ ನನಗೆ ಇದೆ. ಹೀಗಿದ್ದೂ ಬುದ್ಧಾ ನನ್ನ ತಾಯಿ ಅಂತ ಕರೆಯುತ್ತಾರೆ. ಅವರ ಮಕ್ಕಳು ಅಜ್ಜಿ ಅಂತಾರೆ. ಬುದ್ಧಾ ಅವರ ಕುಟುಂಬ ನನ್ನ ಸೇವೆಯನ್ನು ತುಂಬಾ ಮುತುವರ್ಜಿಯಿಂದ ಮಾಡುತ್ತಾರೆ. ಅವರ ಕುಟುಂಬ ನನ್ನ ಒತ್ತಾಯದ ಮೇರೆಗೆ.. ನನ್ನ ಸೇವೆ ಮಾಡಲು ನಮ್ಮ ಮನೆಯಲ್ಲಿಯೇ ಕೆಲ ತಿಂಗಳಿಂದ ಇದ್ದಾರೆ ಅಂತಾ ಮಿನಾತಿ ತಿಳಿಸಿದ್ದಾರೆ.
ಸ್ವತಃ ಪೋಸ್ಟ್ ಗ್ರಾಜ್ಯುಯೇಟ್ ಆಗಿರುವ ಮಿನಾತಿ ಅವರಿಗೆ ಮೂವರು ಸೋದರಿಯರು ಹಾಗೂ ಒಬ್ಬ ಸೋದರ ಇದ್ದಾನೆ. ಪ್ರಾರಂಭದಲ್ಲಿ ಅವರು ಕೊಂಚ ಬೇಸರ ವ್ಯಕ್ತಪಡಿಸಿದ್ರೂ, ಮಿನಾತಿ ಅವರ ನಿರ್ಧಾರ ಗಟ್ಟಿಯಾಗಿದ್ದರಿಂದ ಅವರ ಈ ನಿರ್ಧಾರಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲವಂತೆ.
ಇನ್ನು ಬುದ್ಧಾ ಅವರೂ ಈ ರೀತಿ ಆಸ್ತಿ ದಾನ ಬೇಡ ಅಂತಾ ವಿರೋಧ ವ್ಯಕ್ತಪಡಿಸುತ್ತಿದ್ದರಂತೆ. ಆದ್ರೆ ಅಮ್ಮ (ಮಿನಾತಿ) ಅವರ ನಿರ್ಧಾರ ಗಟ್ಟಿಯಾಗಿತ್ತು. ಅವರ ಒತ್ತಾಯಕ್ಕೆ ಮಣಿದು ಕೊನೆಗೂ ಈ ಆಸ್ತಿ ಮತ್ತು ಆಭರಣ ಸ್ವೀಕರಿಸಿದೆ ಅಂತಾ ಬುದ್ಧಾ ಸಮಾಲ್ ಹೇಳಿದ್ದಾರೆ. ಒಟ್ಟಿನಲ್ಲಿ ಮಾನವೀಯ ಸಂಬಂಧಗಳೇ ಗೌಣವಾಗಿರುವ ಇಂದಿನ ಜಮಾನಾದಲ್ಲಿ ಈ ರೀತಿಯ ಘಟನೆಗಳು ನಡೆದಾಗ, ಖಂಡಿತವಾಗಿಯೂ ಮಾನವೀಯತೆ ಇನ್ನೂ ಇದೆ ಅನ್ನೋ ಭಾವನೆ ಬರೋದು ಸುಳ್ಳಲ್ಲ.